ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಟಿಕೆಟ್ ವಂಚನೆ: ಆರೋಪಿಗಳು ನ್ಯಾಯಾಂಗ ಬಂಧನಕ್ಕೆ

ಚೈತ್ರಾ ಕಸ್ಟಡಿಗೆ ಕೇಳಿದ ಕೋಟ ಪೊಲೀಸರು
Published 23 ಸೆಪ್ಟೆಂಬರ್ 2023, 15:57 IST
Last Updated 23 ಸೆಪ್ಟೆಂಬರ್ 2023, 15:57 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಟಿಕೆಟ್ ವಂಚನೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಏಳು ಆರೋಪಿಗಳನ್ನು ಶನಿವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬಂಡೇಪಾಳ್ಯ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಚೈತ್ರಾ ಕುಂದಾಪುರ, ಶ್ರೀಕಾಂತ್ ನಾಯ್ಕ್, ಗಗನ್ ಕಡೂರು, ರಮೇಶ್ ನಾಯ್ಕ್, ಧನರಾಜ್, ಪ್ರಜ್ವಲ್ ಹಾಗೂ ಚನ್ನಾ ನಾಯ್ಕ್ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು.

ಏಳು ಮಂದಿಯನ್ನು 10 ದಿನ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದರು. ಕಸ್ಟಡಿ ಅವಧಿ ಮುಗಿದಿದ್ದರಿಂದ ಎಲ್ಲರನ್ನೂ 3ನೇ ಎಸಿಎಂಎಂ ನ್ಯಾಯಾಲಯಕ್ಕೆ ಶನಿವಾರ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಏಳು ಆರೋಪಿಗಳನ್ನು ಮುಂದಿನ 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಬಳಿಕ, ಎಲ್ಲ ಆರೋಪಿಗಳನ್ನು ಪೊಲೀಸರು ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಬಿಟ್ಟಿದ್ದಾರೆ.

ಹೇಳಿಕೆ ಪ್ರಕ್ರಿಯೆ ಪೂರ್ಣ: ‘ಚೈತ್ರಾ ಕುಂದಾಪುರ ಸೇರಿದಂತೆ ಏಳು ಆರೋಪಿಗಳ ಮಹಜರು ಹಾಗೂ ಹೇಳಿಕೆ ದಾಖಲು ಪ್ರಕ್ರಿಯೆ ಮುಗಿದಿದೆ. ಇವರ ವಿರುದ್ಧ ದೋಷಾರೋಪ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಆರೋಪಿಗಳ ವಿಚಾರಣೆ ಮುಗಿದಿದ್ದರಿಂದ, ಮತ್ತಷ್ಟು ದಿನ ಕಸ್ಟಡಿಗೆ ಪಡೆಯುವ ಅಗತ್ಯವಿರಲಿಲ್ಲ. ಹೀಗಾಗಿ, ಕಸ್ಟಡಿಗೆ ಕೋರಿಕೆ ಸಲ್ಲಿಸಲಿಲ್ಲ’ ಎಂದು ಸಿಸಿಬಿ ಮೂಲಗಳು ಹೇಳಿವೆ.

ಸ್ವಾಮೀಜಿ ವಿಚಾರಣೆ ಮುಂದುವರಿಕೆ: ‘ಪ್ರಕರಣದ ಮತ್ತೊಬ್ಬ ಆರೋಪಿಯಾಗಿರುವ ಹಿರೇಹಡಗಲಿ ಹಾಲಸ್ವಾಮಿ ಮಠದ ಹಾಲವೀರಪ್ಪ ಸ್ವಾಮೀಜಿ ವಿಚಾರಣೆ ಮುಂದುವರಿದಿದೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

‘ಗೋವಿಂದ ಬಾಬು ಪೂಜಾರಿ ಮಾತ್ರವಲ್ಲದೇ ಮತ್ತಷ್ಟು ಮಂದಿಯಿಂದ ಹಣ ಪಡೆದು ಸ್ವಾಮೀಜಿ ವಂಚಿಸಿರುವ ಮಾಹಿತಿ ಇದೆ. ಸದ್ಯ ಗೋವಿಂದ ಪೂಜಾರಿ ವಂಚನೆ ಬಗ್ಗೆ ಸ್ವಾಮೀಜಿಯಿಂದ ಮಾಹಿತಿ ಕಲೆಹಾಕಲಾಗುತ್ತಿದೆ. ಉಳಿದವರು ದೂರು ನೀಡಿದರೆ, ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿವೆ.

ಕಸ್ಟಡಿಗೆ ಕೇಳಿದ ಕೋಟ ಪೊಲೀಸರು: ಬಟ್ಟೆ ಅಂಗಡಿ ಹಾಕಿಕೊಡುವುದಾಗಿ ಆಮಿಷವೊಡ್ಡಿ ₹5 ಲಕ್ಷ ವಂಚಿಸಿದ ಆರೋಪದಡಿ ಚೈತ್ರಾ ಕುಂದಾಪುರ ವಿರುದ್ಧ ಬ್ರಹ್ಮಾವರ ತಾಲ್ಲೂಕಿನ ಕೋಟ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಪ್ರಕರಣದ ವಿಚಾರಣೆಗಾಗಿ ಚೈತ್ರಾ ಕುಂದಾಪುರ ಅವರನ್ನು ಕಸ್ಟಡಿಗೆ ನೀಡುವಂತೆ ಕೋರಿ ಕೋಟ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಜಾಮೀನು ಸಲ್ಲಿಕೆ: ಚೈತ್ರಾ ಕುಂದಾಪುರ ಹಾಗೂ ಇತರೆ ಆರೋಪಿಗಳಿಗೆ ಜಾಮೀನು ನೀಡುವಂತೆ ಅವರ ಪರ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಪುರಸ್ಕರಿಸಿರುವ ನ್ಯಾಯಾಲಯ, ಆಕ್ಷೇಪಣೆ ಸಲ್ಲಿಸಲು ಸಿಸಿಬಿ ಪರ ವಕೀಲರಿಗೆ ಸೆ. 26ರವರೆಗೆ ಅವಕಾಶ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT