ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಹೆಚ್ಚಿದ ಸಿಸೇರಿಯನ್: ನಾಲ್ಕು ವರ್ಷಗಳಲ್ಲಿ 11.64 ಲಕ್ಷ ಶಸ್ತ್ರಚಿಕಿತ್ಸೆ

Published 4 ಜುಲೈ 2023, 23:30 IST
Last Updated 4 ಜುಲೈ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ವೈದ್ಯಕೀಯ ವಿಮೆ, ಆಸ್ಪತ್ರೆ ಅವಧಿ ಹೆಚ್ಚಳ, ನೋವು ರಹಿತ ಹೆರಿಗೆ ಸೇರಿ ವಿವಿಧ ಕಾರಣಗಳಿಂದ ರಾಜ್ಯದಲ್ಲಿನ ಆಸ್ಪತ್ರೆಗಳಲ್ಲಿ ಸಹಜ ಹೆರಿಗೆಯ ಪ್ರಮಾಣ ತಗ್ಗಿದ್ದು, ಸಿಸೇರಿಯನ್ ಹೆರಿಗೆಯಲ್ಲಿ ಭಾರಿ ಏರಿಕೆ ಕಂಡಿದೆ.

ಆರೋಗ್ಯ ಇಲಾಖೆಯ ಅಂಕಿ–ಅಂಶಗಳ ಪ್ರಕಾರ 2012–13ನೇ ಸಾಲಿಗೆ ಹೋಲಿಸಿದರೆ, 2021–22ರ ವೇಳೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಸಿಸೇರಿಯನ್ ಪ್ರಮಾಣ ಶೇ 81ರಷ್ಟು ಹೆಚ್ಚಳವಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ 77ರಷ್ಟು ಏರಿಕೆಯಾಗಿದೆ. 2012ರಿಂದ 2016ರ ಅವಧಿಯಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟು 35.19 ಲಕ್ಷ ಹೆರಿಗೆಗಳಾಗಿದ್ದವು. ಇವುಗಳಲ್ಲಿ 7.84 ಲಕ್ಷ ಸಿಸೇರಿಯನ್ ಹೆರಿಗೆಯಾಗಿದ್ದವು. ಇನ್ನುಳಿದವರಿಗೆ ಸಹಜ ಹೆರಿಗೆಯಾಗಿತ್ತು. 2019ರಿಂದ 2022ರ ಅವಧಿಯಲ್ಲಿ 32.14 ಲಕ್ಷ ಹೆರಿಗೆಗಳಾಗಿವೆ. ಇವುಗಳಲ್ಲಿ 11.64 ಲಕ್ಷ ಸಿಸೇರಿಯನ್ ಹೆರಿಗೆಯಾಗಿವೆ. 

2022ರಲ್ಲಿ ಚಿತ್ರದುರ್ಗ, ರಾಮನಗರ ಸೇರಿ ಕೆಲ ಜಿಲ್ಲೆಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಸಹಜ ಹೆರಿಗೆಗಳಿಂತ ಸಿಸೇರಿಯನ್ ಪ್ರಕರಣಗಳ ಸಂಖ್ಯೆಯೇ ಹೆಚ್ಚಿದೆ. ದಾವಣಗೆರೆ, ಉಡುಪಿ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ತುಮಕೂರು ಸೇರಿ ಕೆಲ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಕರಣಗಳು ಸಿಸೇರಿಯನ್ ಆಗಿವೆ. ಬಳ್ಳಾರಿ, ಬೀದರ್, ಚಾಮರಾಜನಗರ, ಉಡುಪಿ ಸೇರಿ 16 ಜಿಲ್ಲೆಗಳ ಖಾಸಗಿ ಆಸ್ಪತ್ರೆಗಳಲ್ಲಿ ಸಹಜ ಹೆರಿಗೆಗಳಿಗಿಂತ ಸಿಸೇರಿಯನ್‌ಗೆ ಒಳಗಾದವರ ಸಂಖ್ಯೆಯೇ ಅಧಿಕವಿದೆ. 

52.5ಕ್ಕೆ ಏರಿಕೆ: ಸಿಸೇರಿಯನ್ ಪ್ರಮಾಣ ಕಡಿಮೆಗೊಳಿಸಿ, ಸಹಜ ಹೆರಿಗೆಗೆ ಆದ್ಯತೆ ನೀಡಲು ಆರೋಗ್ಯ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡರೂ ರಾಜ್ಯದಲ್ಲಿ ಸಿಸೇರಿಯನ್ ಪ್ರಮಾಣ ಏರುಮುಖವಾಗಿದೆ.  ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2015–16ರ ಪ್ರಕಾರ ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಸಿಸೇರಿಯನ್‌ ಹೆರಿಗೆ ಪ್ರಮಾಣ ಶೇ 40.3ರಷ್ಟಿತ್ತು. 2019–20ರ ಸಮೀಕ್ಷೆಯಲ್ಲಿ ಈ ಪ್ರಮಾಣ ಶೇ 52.5ಕ್ಕೆ ಏರಿಕೆಯಾಗಿದೆ. 

‘ಇತ್ತೀಚಿನ ದಿನಗಳಲ್ಲಿ ಸಿಸೇರಿಯನ್‌ ಪ್ರಮಾಣ ಹೆಚ್ಚಳವಾಗಿದೆ. ಸಿಸೇರಿಯನ್ ಮಾಡಿದ ಬಳಿಕ ಚೇತರಿಸಿಕೊಳ್ಳಲು ಮಹಿಳೆಗೆ ಹೆಚ್ಚು ಅವಧಿ ಬೇಕಾಗುತ್ತದೆ. ಆದ್ದರಿಂದ ಸಹಜ ಹೆರಿಗೆಗೆ ಆದ್ಯತೆ ನೀಡಬೇಕು. ಕೆಲ ಪ್ರಕರಣಗಳಲ್ಲಿ ಮಗು ಹಾಗೂ ತಾಯಿಯನ್ನು ರಕ್ಷಿಸಲು ಸಿಸೇರಿಯನ್ ಅನಿವಾರ್ಯ‌. ಖಾಸಗಿ ಆಸ್ಪತ್ರೆಗಳು ಸಿಸೇರಿಯನ್‌ಗೆ ₹1 ಲಕ್ಷದಿಂದ ₹2 ಲಕ್ಷದವರೆಗೆ ಹಣ ಪಡೆಯುತ್ತಿವೆ. ಸಹಜ ಹೆರಿಗೆಯಾದರೆ ₹50 ಸಾವಿರದಿಂದ ₹80 ಸಾವಿರದವರೆಗೆ ಪಾವತಿಸಬೇಕಾಗುತ್ತದೆ. ಸಿಸೇರಿಯನ್ ಹೆಚ್ಚಳವಾಗಲು ಖಾಸಗಿ ಆಸ್ಪತ್ರೆಗಳ ಮಾಲೀಕರ ಧನದಾಹವೂ ಕಾರಣ’ ಎಂದು ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಪ್ರಾಧ್ಯಾಪಕರೊಬ್ಬರು ತಿಳಿಸಿದರು.

.
.

‘ತಡ ವಿವಾಹದಿಂದಲೂ ಸಮಸ್ಯೆ’

‘ಸಂಕೀರ್ಣ ಹೆರಿಗೆ ಪ್ರಕರಣಗಳೂ ಇತ್ತೀಚೆಗೆ ಹೆಚ್ಚಳವಾಗುತ್ತಿದೆ. ಮೊದಲ ಹೆರಿಗೆಯಲ್ಲಿ ಸಿಸೇರಿಯನ್‌ಗೆ ಒಳಗಾಗದರೆ ಎರಡನೇ ಮಗು ಪಡೆಯುವಾಗ ಸಹಜ ಹೆರಿಗೆ ಕಷ್ಟ. ಆದ್ದರಿಂದ ಮತ್ತೆ ಸಿಸೇರಿಯನ್‌ಗೆ ಒಳಗಾಗಬೇಕಾಗುತ್ತದೆ. ತಡ ವಿವಾಹವೂ ಮಕ್ಕಳನ್ನು ಪಡೆಯುವಾಗ ಸಮಸ್ಯೆಯಾಗುತ್ತದೆ. ನಮ್ಮಲ್ಲಿ ನಡೆಯುವ ಬಹುತೇಕ ಹೆರಿಗೆಗಳು ಸಹಜ ಹೆರಿಗೆಯಾಗಿವೆ’ ಎಂದು ತಾಯಿ–ಮಕ್ಕಳ ಆಸ್ಪತ್ರೆಯಾದ ವಾಣಿವಿಲಾಸದ ವೈದ್ಯಕೀಯ ಅಧೀಕ್ಷಕಿ ಡಾ.ಸಿ. ಸವಿತಾ ತಿಳಿಸಿದರು.

‘ಸರ್ಕಾರಿ ಆಸ್ಪತ್ರೆಗಳಿಗೆ ಹೆಚ್ಚಾಗಿ ಬಡ–ಮಧ್ಯಮ ವರ್ಗದವರು ಬರುತ್ತಾರೆ. ಖಾಸಗಿ ಆಸ್ಪತ್ರೆಗಳಿಗೆ ಹೆಚ್ಚಾಗಿ ಶ್ರೀಮಂತರು ಹೋಗುತ್ತಾರೆ. ಹೆಚ್ಚಿನವರು ಉದ್ಯೋಗಸ್ಥರಾಗಿರುತ್ತಾರೆ. ಅವರು ಅಪಾಯ ಇಲ್ಲದೆಯೇ ಹೆರಿಗೆಯಾಗಲು ಸಿಸೇರಿಯನ್‌ಗೆ ಮೊರೆ ಹೋಗುತ್ತಾರೆ. ಐವಿಎಫ್‌ ತಂತ್ರಜ್ಞಾನದಿಂದ ಗರ್ಭಧಾರಣೆಗೆ ಒಳಗಾದವರೂ ಸಿಸೇರಿಯನ್‌ಗೆ ಆದ್ಯತೆ ನೀಡುತ್ತಾರೆ’ ಎಂದು ಹೇಳಿದರು.

ಹಲವು ಕಾರಣಗಳಿಂದ ಸಿಸೇರಿಯನ್ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಮಧುಮೇಹ ಅಧಿಕ ರಕ್ತದೊತ್ತಡ ಸೇರಿ ವಿವಿಧ ಸಮಸ್ಯೆ ಇರುವವರಿಗೆ ಸಹಜ ಹೆರಿಗೆ ಕಷ್ಟ.
–ಡಾ.ಸಿ. ಸವಿತಾ ವಾಣಿವಿಲಾಸ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT