ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಸ್ತಿ ತೆರಿಗೆ ಸಂಗ್ರಹಕ್ಕೆ ಸ್ವಸಹಾಯ ಗುಂಪುಗಳ ಸೇವೆ

ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿ ತೆರಿಗೆ ₹1,860.17 ಕೋಟಿ ಬಾಕಿ
Published 20 ಜೂನ್ 2024, 16:15 IST
Last Updated 20 ಜೂನ್ 2024, 16:15 IST
ಅಕ್ಷರ ಗಾತ್ರ

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳು, ಮಹಾನಗರ ಪಾಲಿಕೆಗಳು, ನಗರಸಭೆಗಳು, ಪಟ್ಟಣ ಪಂಚಾಯಿತಿಗಳು ಮತ್ತು ನಾಲ್ಕು ಅಧಿಸೂಚಿತ ಪ್ರದೇಶಗಳಲ್ಲಿ ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕ  ವಸೂಲಿ ಮಾಡಲು ಸ್ಥಳೀಯ ಸ್ವಸಹಾಯ ಗುಂಪುಗಳ ಸೇವೆ ಪಡೆಯಲು ಸರ್ಕಾರ ತೀರ್ಮಾನಿಸಿದೆ.

ಗುರುವಾರ ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಎಚ್‌.ಕೆ.ಪಾಟೀಲ ಅವರು, ಈ ಎಲ್ಲ ಸ್ಥಳೀಯ ಸಂಸ್ಥೆಗಳಿಂದ ಆಸ್ತಿ ತೆರಿಗೆ ಒಟ್ಟು ₹1,860.17 ಕೋಟಿ ಬಾಕಿ ಇದೆ. ಅಷ್ಟನ್ನೂ ವಸೂಲು ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಮಹಿಳಾ ಸ್ವಸಹಾಯ ಗುಂಪುಗಳು, ಸರ್ಕಾರೇತರ ಸಂಸ್ಥೆಗಳು, ಸ್ತ್ರೀಶಕ್ತಿ ಗುಂಪುಗಳ ಸೇವೆಯನ್ನು ಬಳಸಿಕೊಂಡು ನೀರಿನ ಶುಲ್ಕ ಮತ್ತು ಆಸ್ತಿ ತೆರಿಗೆಯನ್ನು ಬಡ್ಡಿ ಸಮೇತ ಬಾಕಿ ವಸೂಲು ಮಾಡಲಾಗುವುದು. ವಸೂಲಾದ ಮೊತ್ತದ ಶೇ 5ರಷ್ಟು ಕಮಿಷನ್‌ನನ್ನು ವಸೂಲಿ ಮಾಡಿದವರಿಗೆ ನೀಡಲು ನಿರ್ಧರಿಸಲಾಗಿದೆ ಎಂದರು.

315 ನಗರ ಸ್ಥಳೀಯ ಸಂಸ್ಥೆಗಳು, 10 ಮಹಾನಗರ ಪಾಲಿಕೆಗಳು, 61 ನಗರ ಸಭೆಗಳು, 114 ಪಟ್ಟಣ ಪಂಚಾಯಿತಿಗಳು ಹಾಗೂ 4 ಅಧಿಸೂಚಿತ ಪ್ರದೇಶಗಳಲ್ಲಿ ಆಸ್ತಿ ತೆರಿಗೆ ವಸೂಲಿಯ ಹೊಣೆಯನ್ನು ಸ್ವಸಹಾಯ ಸಂಘಗಳಿಗೆ ವಹಿಸಲಾಗುತ್ತದೆ ಎಂದು ಪಾಟೀಲ ಹೇಳಿದರು.

ಪ್ರಮುಖ ತೀರ್ಮಾನಗಳು:

  • ಪ್ರಧಾನಮಂತ್ರಿ ಉಚ್ಚತರ್‌ ಶಿಕ್ಷಾ ಅಭಿಯಾನ ಯೋಜನೆಯನ್ನು ರಾಜ್ಯದ ಆರು ವಿಶ್ವವಿದ್ಯಾಲಯಗಳಲ್ಲಿ ₹279.77 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಒಪ್ಪಿಗೆ. ಕೇಂದ್ರ ಸರ್ಕಾರ ₹167.86 ಕೋಟಿ ಮತ್ತು ರಾಜ್ಯ ಸರ್ಕಾರ ₹111.91 ಕೋಟಿ ಭರಿಸಲಿವೆ. ಬೆಂಗಳೂರು ವಿಶ್ವವಿದ್ಯಾಲಯ, ಬೆಳಗಾವಿಯ ರಾಣಿಚೆನ್ನಮ್ಮ ವಿಶ್ವವಿದ್ಯಾಲಯ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ಮಂಗಳೂರು ವಿಶ್ವವಿದ್ಯಾಲಯ, ಕಲಬುರಗಿ ವಿಶ್ವವಿದ್ಯಾಲಯ, ಬೆಂಗಳೂರಿನ ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯಕ್ಕೆ ಸೌಲಭ್ಯ ಸಿಗಲಿದೆ.

  • ಎಂಟು ಜಿಲ್ಲೆಗಳಲ್ಲಿರುವ 201 ಕೆಆರ್‌ಇಐಎಸ್‌ ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಮಗ್ರ ವ್ಯಕ್ತಿತ್ವ ಅಭಿವೃದ್ಧಿ ಕಾರ್ಯಕ್ರಮ ರೋಟರಿ ಇಂಟರ್‌ನ್ಯಾಷನಲ್‌ ಸಹಭಾಗಿತ್ವದಲ್ಲಿ ನಡೆಸಲಾಗುವುದು. ಇದಕ್ಕೆ ₹2.37 ಕೋಟಿ ವೆಚ್ಚವಾಗಲಿದ್ದು, ರೋಟರಿ ಇಂಟರ್‌ನ್ಯಾಷನಲ್‌ ₹1.87 ಕೋಟಿ ಮತ್ತು ಕೆಆರ್‌ಇಐಎಸ್‌ ಸಂಸ್ಥೆ ₹49.89 ಲಕ್ಷ ಭರಿಸಲಿವೆ.

  • ಮೈಸೂರಿನ ಕೆ.ಆರ್‌.ಆಸ್ಪತ್ರೆಯ ಆವರಣದಲ್ಲಿ ನೂತನ ಹೊರ ರೋಗಿ ವಿಭಾಗದ ಕಟ್ಟಡ ಕಾಮಗಾರಿ ₹75 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

  • ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಕುಸನೂರ ವಸತಿ ಯೋಜನೆಯಲ್ಲಿ ಕುಸನೂರು ಗ್ರಾಮದ ವಿವಿಧ ಸರ್ವೆ ನಂಬರ್‌ಗಳಲ್ಲಿ ವಸತಿ ಅಭಿವೃದ್ಧಿ ಯೋಜನೆಯ ಪರಿಷ್ಕೃತ ಅಂದಾಜು ಮೊತ್ತ ₹122.40 ಕೋಟಿಗೆ ಒಪ್ಪಿಗೆ.

  • ಹಾಸನ ಜಿಲ್ಲೆ ಮೊಸಳೆ ಹೊಸಳ್ಳಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ₹59.57 ಕೋಟಿ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT