ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಜೀವನದಿ’ ಕಾವೇರಿ ಮಲಿನ; ತಾಂತ್ರಿಕ ಸಮಿತಿಯಿಂದ ರಾಜ್ಯ ಸರ್ಕಾರಕ್ಕೆ ವರದಿ

ಕ್ರಿಯಾಯೋಜನೆ ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ತಾಂತ್ರಿಕ ಸಮಿತಿಯ ಶಿಫಾರಸು
Published : 9 ಸೆಪ್ಟೆಂಬರ್ 2024, 20:15 IST
Last Updated : 9 ಸೆಪ್ಟೆಂಬರ್ 2024, 20:15 IST
ಫಾಲೋ ಮಾಡಿ
Comments

ಮೈಸೂರು: ಈ ಭಾಗದ ಜೀವ ನದಿಗಳಾದ ಹಾಗೂ ಬೆಂಗಳೂರು, ಮೈಸೂರು ಸೇರಿದಂತೆ ಹತ್ತಾರು ಪ್ರಮುಖ ನಗರ ಮತ್ತು ಸಾವಿರಾರು ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆಯ ಪ್ರಮುಖ ಮೂಲಗಳಾದ ಕಾವೇರಿ, ಲಕ್ಷ್ಮಣತೀರ್ಥ, ಕಪಿಲಾ ನದಿಗಳು ಕಳವಳಕಾರಿ ಪ್ರಮಾಣದಲ್ಲಿ ಮಲಿನಗೊಂಡಿರುವ ಬಗ್ಗೆ ತಾಂತ್ರಿಕ ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಿಸಿದೆ.

‘ಮಲಿನ ನೀರು ನದಿಗಳಿಗೆ ಸೇರದಂತೆ ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಕಾರ್ಖಾನೆಗಳಿಂದ ತ್ಯಾಜ್ಯವನ್ನು ಸಮರ್ಪಕವಾಗಿ ಸಂಸ್ಕರಿಸದೆ ನೇರವಾಗಿ ನದಿಗೆ ಹರಿಸುತ್ತಿರುವುದು, ಕೃಷಿ ತ್ಯಾಜ್ಯ, ಬಯಲು ಶೌಚಾ, ಪಟ್ಟಣ ಮತ್ತು ನಗರ ಪ್ರದೇಶಗಳ ಘನತ್ಯಾಜ್ಯವು ಒಡಲು ಸೇರುತ್ತಿದ್ದು, ಇವು ಮಾಲಿನ್ಯಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ’ ಎಂದು ಮೂಲಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿವೆ.

‘‌ಸಮಿತಿಯು ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ಸಿದ್ಧಪಡಿಸಿದ ಕರಡು ವರದಿಯನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ)ಯ ಕೇಂದ್ರ ಕಚೇರಿ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಏನೇನು ಕ್ರಿಯಾಯೋಜನೆಗಳನ್ನು ಮಾಡಬೇಕು ಎಂಬುದನ್ನು ಉಲ್ಲೇಖಿಸಲಾಗಿದೆ. ಮಾಲಿನ್ಯ ತಡೆಗೆ ಅಲ್ಪಾವಧಿ ಹಾಗೂ ದೀರ್ಘಾವಧಿಗೆ ಕೈಗೊಳ್ಳಬೇಕಾದ ಕ್ರಮಗಳೇನು ಎನ್ನುವುದನ್ನು ತಿಳಿಸಲಾಗಿದೆ’ ಎಂದು ಮಂಡಳಿಯ ಪರಿಸರ ಅಧಿಕಾರಿ ಕೆ.ಎಲ್‌.ಸವಿತಾ ‘ಪ್ರಜಾವಾಣಿ’ಗೆ ತಿಳಿಸಿದರು.

ತಡೆಯಲು ಏನು ಮಾಡಬೇಕು?: ‘ಚರಂಡಿ ನೀರು ನದಿಯನ್ನು ಎಲ್ಲೆಲ್ಲಿ ಸೇರುತ್ತಿದೆ ಹಾಗೂ ತಡೆಗಟ್ಟಲು ಏನು ಮಾಡಬೇಕು ಎಂಬುದನ್ನು ತಿಳಿಸಲಾಗಿದೆ. ಸ್ಥಳೀಯ ಸಂಸ್ಥೆಗಳು, ಮಂಡಳಿ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸೇರಿದಂತೆ ಯಾವ್ಯಾವ ಸಂಸ್ಥೆಯವರ ಪಾತ್ರವೇನು ಎಂಬುದರ ಬಗ್ಗೆ ತಿಳಿಸಲಾಗಿದೆ. ಸರ್ಕಾರದ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಮಾಹಿತಿ ನೀಡಿದರು.

‘ಕಾವೇರಿ ನದಿಗೆ ಕೊಳಚೆ ನೀರು ಮಿಶ್ರಣವಾಗುತ್ತಿದ್ದು, ಇದನ್ನು ತಡೆಯಲು ಕ್ರಮ ಕೈಗೊಳ್ಳುವ ಅಗತ್ಯವಿದೆ. ಹೀಗಾಗಿ, ಪರಿಶೀಲನೆಗೆ ತಾಂತ್ರಿಕ ಪರಿಣಿತರ ಸಮಿತಿ ರಚಿಸಬೇಕು. ಅದರ ವರದಿ ಆಧಾರದಲ್ಲಿ ಸರ್ಕಾರ ಸೂಕ್ತ ಕ್ರಮ ವಹಿಸಬೇಕು’ ಎಂದು ಮಂಡ್ಯದವರೇ ಆದ ವಿಧಾನಪರಿಷತ್‌ ಸದಸ್ಯ ದಿನೇಶ್ ಗೂಳಿಗೌಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು.

‘ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ ಉಗಮಗೊಳ್ಳುವ ಕಾವೇರಿಗೆ ಕುಶಾಲನಗರ, ಹುಣಸೂರು, ಪಿರಿಯಾಪಟ್ಟಣ, ಕೆ.ಆರ್.ನಗರ, ಮೈಸೂರು, ಮಂಡ್ಯ, ಶ್ರೀರಂಗಪಟ್ಟಣ,‌ ನಂಜನಗೂಡು, ತಿ.ನರಸೀಪುರ, ಕೊಳ್ಳೇಗಾಲ ಮೊದಲಾದ ಪ್ರಮುಖ ನಗರ–ಪಟ್ಟಣಗಳ ಭಾಗದಲ್ಲಿ ಹಲವು ಕಾರ್ಖಾನೆಗಳ ತ್ಯಾಜ್ಯವನ್ನು ಸರಿಯಾಗಿ ಸಂಸ್ಕರಿಸದೆ‌ ನೇರವಾಗಿ ನದಿಗೆ ಹರಿಸಲಾಗುತ್ತಿದೆ.

ಒಳಚರಂಡಿ ನೀರಿನಿಂದಲೂ ಕಲುಷಿತಗೊಂಡು ಮಲಿನಗೊಳ್ಳುತ್ತಿದೆ. ಇದು ಜಲಚರಗಳ ಸಾವಿಗೂ ಕಾರಣವಾಗಿದೆ. ಹಲವು ಕೈಗಾರಿಕೆಗಳ ತ್ಯಾಜ್ಯದಿಂದ ನದಿಯು ನೈಸರ್ಗಿಕ ಗುಣ ಕಳೆದುಕೊಳ್ಳು ತ್ತಿದ್ದು, ಅಪಾಯಕಾರಿ ಆಗುತ್ತಿದೆ’ ಎಂದು ಹೇಳಿದ್ದರು.

ಕೊಡಗು ಜಿಲ್ಲೆಯಲ್ಲಿ ಪೂಜೆ ಮಾಟ ಮಂತ್ರದ ತ್ಯಾಜ್ಯವನ್ನು ಕಾವೇರಿ ನದಿಗೆ ಹಾಕಿರುವುದು
ಕೊಡಗು ಜಿಲ್ಲೆಯಲ್ಲಿ ಪೂಜೆ ಮಾಟ ಮಂತ್ರದ ತ್ಯಾಜ್ಯವನ್ನು ಕಾವೇರಿ ನದಿಗೆ ಹಾಕಿರುವುದು

ಡಿಸಿಎಂ ಸೂಚನೆಯಂತೆ: ‘ಮೈಸೂರು ಮಹಾನಗರ ‌ಪಾಲಿಕೆ ವ್ಯಾಪ್ತಿಯ ತ್ಯಾಜ್ಯ ನೀರನ್ನು ಕಾವೇರಿ ನದಿಗೆ ನೇರವಾಗಿ ಹರಿಸದಂತೆ ನೋಡಿಕೊಳ್ಳಬೇಕು’ ಎಂದು ಮಂಡ್ಯ ಜಿಲ್ಲಾಧಿಕಾರಿ ಕುಮಾರ ಅವರು ಮೈಸೂರು ಜಿಲ್ಲಾಧಿಕಾರಿ ಹಾಗೂ ನಗರಪಾಲಿಕೆ ಆಯುಕ್ತರಿಗೆ ಪತ್ರ ಬರೆದು ಗಮನಸೆಳೆದಿದ್ದರು. ಇದೆಲ್ಲದರ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಕೆಎಸ್‌ಪಿಸಿಬಿ ಮುಖ್ಯ ಪರಿಸರ ಅಧಿಕಾರಿ ಪಿ.ನಿರಂಜನ್‌ ಅಧ್ಯಕ್ಷತೆಯಲ್ಲಿ ರಚಿಸಿದ್ದ ತಾಂತ್ರಿಕ ಸಮಿತಿಯಲ್ಲಿ, ಮಂಡಳಿಯ ಹಿರಿಯ ಪರಿಸರ ಅಧಿಕಾರಿ ಬಿಎಂ. ಪ್ರಕಾಶ್, ಎಸ್‌ಜೆಸಿಇ ಪ್ರಾಧ್ಯಾಪಕ ಬಿ.ಮನೋಜ್‌ಕುಮಾರ್, ಮೈಸೂರು ವಿಶ್ವವಿದ್ಯಾ ಲಯದ ಪರಿಸರ ಅಧ್ಯಯನ ವಿಭಾಗದ ಮುಖ್ಯಸ್ಥರು, ಕಾವೇರಿ ನೀರಾವರಿ ನಿಗಮದ ಮೈಸೂರು ವೃತ್ತದ ಎಸ್‌ಇ ಮಹೇಶ್, ಕೆಯುಡಬ್ಲ್ಯುಎಸ್‌ಎಸ್‌ಬಿ ಎಸ್‌ಇ ಹಾಗೂ ಮೈಸೂರು ಮಹಾನಗರ ಪಾಲಿಕೆಯ ಎಸ್‌ಇ ಸಮಿತಿಯಲ್ಲಿದ್ದರು. ಸಮಿತಿಯು ಒಂದೂವರೆ ತಿಂಗಳವರೆಗೆ ವಿವಿಧೆಡೆಗೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿ, ನೀರಿನ ಮಾದರಿಗಳ ವೈಜ್ಞಾನಿಕ ವಿಶ್ಲೇಷಣೆಯ ವರದಿ ಮೊದಲಾದ ಅಂಶಗಳನ್ನು ಒಳಗೊಂಡ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT