ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಿಕೆಶಿ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಕೇಸ್: ತಡೆಯಾಜ್ಞೆ ತೆರವು ಕೋರಿದ CBI

Published : 24 ಫೆಬ್ರುವರಿ 2023, 13:50 IST
ಫಾಲೋ ಮಾಡಿ
Comments

ಬೆಂಗಳೂರು: ‘ಆದಾಯ ಮೀರಿ ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಕನಕಪುರ ಶಾಸಕ ಡಿ.ಕೆ.ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ನೀಡಲಾಗಿರುವ ಮಧ್ಯಂತರ ತಡೆಯಾಜ್ಞೆ ತೆರವುಗೊಳಿಸಬೇಕು’ ಎಂದು ಕೋರಿ ಸಿಬಿಐ ಹೈಕೋರ್ಟ್‌ಗೆ ಮನವಿ ಮಾಡಿದೆ.

ಸಿಬಿಐ ಪರ ವಕೀಲ ಪಿ.ಪ್ರಸನ್ನಕುಮಾರ್ ಈ ಕುರಿತಂತೆ ಶುಕ್ರವಾರ, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣ’ಗಳ ವಿಚಾರಣೆ ನಡೆಸುವ ಹೈಕೋರ್ಟ್‌ನ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿಗೆ ತಡೆ ಆದೇಶ ತೆರವು ಕೋರಿದ ಮನವಿಯನ್ನು ಸಲ್ಲಿಸಿದರು. ಅಂತೆಯೇ, ತನಿಖೆಯ ಪ್ರಗತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಪೀಠಕ್ಕೆ ಸಲ್ಲಿಸಿದರು. ಆದರೆ, ತನಿಖೆಯ ಪ್ರಗತಿ ವರದಿ ಸ್ವೀಕರಿಸಲು ನಿರಾಕರಿಸಿದ ನ್ಯಾಯಪೀಠ ವಿಚಾರಣೆಯನ್ನು ಮಾರ್ಚ್‌ 3ಕ್ಕೆ ಮುಂದೂಡಿ ಆದೇಶಿಸಿತು.‌

ಮನವಿಯಲ್ಲಿ ಏನಿದೆ?: ‘ಭ್ರಷ್ಟಾಚಾರ ನಿಗ್ರಹ ಕಾಯ್ದೆ–1988ರ ಕಲಂ 19 (3) (ಸಿ) ಅನ್ನು 2018ರಲ್ಲಿ ತಿದ್ದುಪಡಿ ಮಾಡಲಾಗಿದೆ. ಇದರ ಅನುಸಾರ ತನಿಖೆಯನ್ನು ಯಾವುದೇ ಕೋರ್ಟ್‌ ತಡೆಯುವಂತಿಲ್ಲ. ಆದ್ದರಿಂದ, ಹೈಕೋರ್ಟ್ ನೀಡಿರುವ ತಡೆ ಆದೇಶವನ್ನು ತೆರವುಗೊಳಿಸಬೇಕು’ ಎಂದು ಮನವಿಯಲ್ಲಿ ತಿಳಿಸಲಾಗಿದೆ.

‘ಅರ್ಜಿದಾರರು ಎಫ್‌ಐಆರ್‌ನಲ್ಲಿ ಕುಟುಂಬದ ಸದಸ್ಯರ ಹೆಸರುಗಳು ಇಲ್ಲ ಎಂದು ಪ್ರತಿಪಾದಿಸುತ್ತಿದ್ದಾರೆ. ಆದರೆ, ಕಲಂ 13 (ಎ) (ಇ) ಅನ್ವಯ ಕುಟುಂಬದ ಸದಸ್ಯರೂ ನಿಶ್ಚಿತವಾಗಿ ಈ ಕಾಯ್ದೆಯ ಅಡಿ ತನಿಖಾ ವ್ಯಾಪ್ತಿಗೆ ಒಳಪಡುತ್ತಾರೆ. ಮೇಲಾಗಿ ತನಿಖೆಯ ವ್ಯಾಪ್ತಿಯನ್ನು ಇಂತಿಷ್ಟೇ ಮತ್ತು ಹೀಗೇ ಇರಬೇಕು ಎಂಬುದನ್ನು ಆರೋಪಿ ನಿಶ್ಚಿಯಿಸುವುದು ಸಮಂಜಸವಲ್ಲ’ ಎಂದು ಸಿಬಿಐ ಪ್ರತಿಪಾದಿಸಿದೆ.

‘ಸಿಬಿಐ ಎಫ್‌ಐಆರ್ ದಾಖಲು ಮಾಡಿ ಈಗಾಗಲೇ ಎರಡು ವರ್ಷಗಳಾಗಿವೆ. ಆದರೆ, ಅರ್ಜಿದಾರರು ಈಗ ಹೈಕೋರ್ಟ್‌ನಲ್ಲಿ ಆದೇಶವನ್ನು ಪ್ರಶ್ನಿಸುತ್ತಿದ್ದಾರೆ. ಅರ್ಜಿದಾರ ಆರೋಪಿ ಡಿ.ಕೆ.ಶಿವಕುಮಾರ್ ಸಂಬಂಧಿಯಾದ ಶಶಿಕುಮಾರ್ ಶಿವಣ್ಣ ಎಂಬುವರೂ ಈ ಹಿಂದೆ ಇದೇ ರೀತಿಯಲ್ಲಿ ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಿದ್ದನ್ನು ಪ್ರಶ್ನಿಸಿದ್ದರು. ಆದರೆ, ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠ, ಈ ಅರ್ಜಿಯನ್ನು 2022ರ ಜುಲೈ 22ರಂದು ವಜಾಗೊಳಿಸಿತ್ತು. ನಂತರ ವಿಭಾಗೀಯ ನ್ಯಾಯಪೀಠ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಎತ್ತಿ ಹಿಡಿದಿತ್ತು’ ಎಂಬ ಅಂಶವನ್ನು ಮನವಿಯಲ್ಲಿ ಕಾಣಿಸಲಾಗಿದೆ.

ಪ್ರಕರಣವೇನು?: ‘ಭ್ರಷ್ಟಾಚಾರ ನಿಗ್ರಹ ಕಾಯ್ದೆ–1988ರ ಕಲಂ 13 (2), 13 (1)(ಇ) ಅಡಿಯಲ್ಲಿ ಸಿಬಿಐ 2020ರ ಅಕ್ಟೋಬರ್ 3ರಂದು ಪ್ರಕರಣ ದಾಖಲಿಸಿದೆ. ‘ಸಿಬಿಐ ದಾಖಲಿಸಿರುವ ಈ ಎಫ್‌ಐಆರ್‌ ಕಾನೂನು ಬಾಹಿರವಾಗಿದ್ದು ಇದನ್ನು ರದ್ದುಗೊಳಿಸಬೇಕು’ ಎಂದು ಕೋರಿ ಡಿ.ಕೆ.ಶಿವಕುಮಾರ್‌ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಕೆ.ನಟರಾಜನ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಇದೇ 11ರಂದು ವಿಚಾರಣೆ ನಡೆಸಿ ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಈ ತಡೆ ಆದೇಶವನ್ನು ತೆರವುಗೊಳಿಸುವಂತೆ ಕೋರಿ ಸಿಬಿಐ ಈ ಮನವಿ ಸಲ್ಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT