ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರುತ್ತಿದೆ ಸಿಸೇರಿಯನ್‌ ಹೆರಿಗೆಯ ಪ್ರಮಾಣ

Last Updated 30 ಜೂನ್ 2018, 18:31 IST
ಅಕ್ಷರ ಗಾತ್ರ

ಬೆಂಗಳೂರು: ಮನೆ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಆಗುತ್ತಿದ್ದ ಸಹಜ ಹೆರಿಗೆಗಳ ಸಂಖ್ಯೆ ಇಳಿಮುಖವಾಗುತ್ತಿದ್ದು, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಆಗುವ ಹೆರಿಗೆಗಳ ಪೈಕಿ ಸಿಸೇರಿಯನ್ ಹೆರಿಗೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.

2012 ರಲ್ಲಿ ಸುಮಾರು 8 ಲಕ್ಷ ಹೆರಿಗೆಗಳಾಗಿದ್ದು, ಈ ಪೈಕಿ ಸುಮಾರು 1.73 ಲಕ್ಷ ಸಿಸೇರಿಯನ್‌ ಹೆರಿಗೆಗಳಾಗಿದ್ದವು. ಆದರೆ, 2017 ರಲ್ಲಿ ಸುಮಾರು 9 ಲಕ್ಷ ಹೆರಿಗೆಗಳಾಗಿದ್ದು, ಈ ಪೈಕಿಸುಮಾರು 2.56 ಲಕ್ಷ ಸಿಸೇರಿಯನ್‌ ಹೆರಿಗೆಗಳಾಗಿವೆ. ಒಟ್ಟಾರೆ ವಾರ್ಷಿಕ ಹೆರಿಗೆ ಪ್ರಮಾಣದಲ್ಲಿ ಗಣನೀಯವಾಗಿ ಹೆಚ್ಚಳವಾಗದೇ ಇದ್ದರೂ, ಸಿಸೇರಿಯನ್‌ ಹೆರಿಗೆ ಮಾಡಿಸಿಕೊಳ್ಳುವವರ ಸಂಖ್ಯೆ ಐದು ವರ್ಷಗಳಲ್ಲಿ ಗಮನಾರ್ಹವಾಗಿ ಏರಿಕೆಯಾಗಿದೆ ಎಂದುಆರೋಗ್ಯ ಇಲಾಖೆಯ ಆರೋಗ್ಯ ನಿರ್ವಹಣೆ ಮಾಹಿತಿ ವ್ಯವಸ್ಥೆ (ಎಚ್‌ಎಮ್‌ಐಎಸ್‌) ವರದಿ ತಿಳಿಸಿದೆ ಎಂದು ಇಲಾಖೆಯ ಉಪ ನಿರ್ದೇಶಕ ಎನ್.ರಾಜಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಸಿಸೇರಿಯನ್ ಹೆರಿಗೆಗಳ ಪ್ರಮಾಣ ಹೆಚ್ಚುತ್ತಿರುವುದಕ್ಕೆ ಖಾಸಗಿ ಆಸ್ಪತ್ರೆ ಮಾಲೀಕರ ಲಾಭದ ಆಸೆಯೇ ಕಾರಣ. ಆಸ್ಪತ್ರೆಗೆ ಹಾಗೂ ತಮಗೆ ಲಾಭವಾಗುತ್ತದೆ ಎಂಬ ಉದ್ದೇಶದಿಂದ ಸಣ್ಣಪುಟ್ಟ ಕಾರಣಗಳನ್ನು ನೀಡಿ ಸಿಸೇರಿಯನ್ ಹೆರಿಗೆ ಮಾಡಿಸಲು ವೈದ್ಯರು ಮುಂದಾಗುತ್ತಾರೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿದೆ.

ಆದರೆ, ವೈದ್ಯರು ಈ ಮಾತನ್ನು ಒಪ್ಪಲು ತಯಾರಿಲ್ಲ.ಗರ್ಭಿಣಿಯರ ಆರೋಗ್ಯ ಸ್ಥಿತಿ, ಸುಲಭ ಹೆರಿಗೆ ಆಗುವ ಮತ್ತು ಆಗದಿರುವ ಸಾಧ್ಯಾಸಾಧ್ಯತೆಗಳನ್ನು ತಪಾಸಣೆ ನಡೆಸಿದ ಬಳಿಕವೇ ಸಿಸೇರಿಯನ್ ಹೆರಿಗೆ ಬಗ್ಗೆ ತೀರ್ಮಾನಿಸಲಾಗುತ್ತದೆ. ಹಣದ ಆಸೆಗಾಗಿ ಸಿಸೇರಿಯನ್ ಮಾಡಲು ಮುಂದಾಗುವುದಿಲ್ಲ ಎಂಬುದುವೈದ್ಯ ಸಮೂಹದ ಪ್ರತಿಪಾದನೆ.

ಸಿಸೇರಿಯನ್‌ ಹೆರಿಗೆಗಳು ಕುಟುಂಬಕ್ಕೆ ಆರ್ಥಿಕ ಹೊರೆಯಾಗುತ್ತಿರುವುದರ ಜತೆಗೆ, ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೂ ಪ್ರಭಾವ ಬೀರುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಆರೋಗ್ಯ ಸಚಿವಾಲಯ, ಸಿಸೇರಿಯನ್ ಹೆರಿಗೆಗಳ ಬಗ್ಗೆ ಮಾಹಿತಿ ಕಲೆ ಹಾಕಿ ವರದಿ ಸಲ್ಲಿಸುವಂತೆ ಸೂಚಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ ಅಭಿಮತ

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಒಂದು ದೇಶದಲ್ಲಿ ಒಟ್ಟು ಹೆರಿಗೆಗಳಲ್ಲಿ ಸಿಸೇರಿಯನ್ ಹೆರಿಗೆಗಳ ಪ್ರಮಾಣ ಶೇ10 ರಿಂದ ಶೇ 15 ಇರಬೇಕು. ಮಗುವಿನ ಜನನ ಸಂದರ್ಭದಲ್ಲಿ ಯಾವುದೇ ರೀತಿಯ ಸಮಸ್ಯೆ ಎದುರಾದಲ್ಲಿ ಮತ್ತು ತಾಯಿಯ ಆರೋಗ್ಯವನ್ನು ಗಮನದಲ್ಲಿರಿಸಿಕೊಂಡು ಮಾತ್ರವೇ ಸಿಸೇರಿಯನ್ ಹೆರಿಗೆ ಮಾಡಿಸಬೇಕು ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ.

ಕಡ್ಡಾಯ ತರಬೇತಿ

‘ಗ್ರಾಮ ಮತ್ತು ತಾಲೂಕುಗಳಲ್ಲಿ ಆಶಾ ಕಾರ್ಯಕರ್ತೆಯರಿಂದ ಹೆರಿಗೆ ಕುರಿತು ಮಾಹಿತಿ ಮತ್ತು ಜಾಗೃತಿ ನೀಡಲಾಗುತ್ತಿದೆ.ತುರ್ತು ಹೆರಿಗೆಗಾಗಿ ತಾಲೂಕುಗಳಲ್ಲಿ ವಾರದ 24 ಗಂಟೆ ಸೇವಾ ಸೌಲಭ್ಯ ನೀಡಲು ಉಪಕರಣ ಹಾಗೂ ಸಿಬ್ಬಂದಿಗಳ ಸಂಖ್ಯೆ ಹೆಚ್ಚಿಸಲಾಗಿದೆ’ ಎಂದು ಉಪ ನಿರ್ದೇಶಕ ಎನ್.ರಾಜಕುಮಾರ್‌ ತಿಳಿಸಿದರು.

‘ತಾಯಿ ಮತ್ತು ಮಗುವಿನ ರಕ್ಷಣೆ ಕುರಿತು ವೈದ್ಯರು ಮತ್ತು ಸಿಬ್ಬಂದಿಗಳಿಗೆ ಕಡ್ಡಾಯ ತರಬೇತಿ ನೀಡಲಾಗುತ್ತಿದೆ. ಗರ್ಭಿಣಿಯರಿಗೆ ಸಹಜ ಹೆರಿಗೆ ಕುರಿತು ಅರಿವು ಮೂಡಿಸಲಾಗುತ್ತಿದೆ. ಈ ಮೂಲಕ ಸೀಸೇರಿಯನ್‌ ಹೆರಿಗೆಗೆ ಕಡಿವಾಣ ಹಾಕಲು ಪ್ರಯತ್ನಿಸಲಾಗುತ್ತಿದೆ’ ಎಂದರು.

ನೋವಿಲ್ಲದೆ ಹೆರಿಗೆ ಬಯಕೆ...!

‘ನೋವಿಲ್ಲದೆ ಹೆರಿಗೆ ಬಯಸುವ ಗರ್ಭಿಣಿಯ‌ರು, ವೈದ್ಯರು ಮತ್ತು ಜೀವ ವಿಮಾ ಕಂಪನಿಗಳೇ ಸಿಸೇರಿಯನ್‌ ಹೆರಿಗೆಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲು ಮುಖ್ಯ ಕಾರಣ’ ಎಂದು ಮಾತೃ ಮೆಡಿಕೆರ್‌ ಸಂಸ್ಥೆಯ ಡಾ.ಜಯಲಕ್ಷ್ಮೀ ತಿಳಿಸಿದರು.

‘ಪ್ರಸ್ತುತ ಖಾಸಗಿ ಆಸ್ಪತ್ರೆಗಳಲ್ಲಿ ಸಹಜ ಹೆರಿಗೆಗೆ ಕನಿಷ್ಠ ₹40 ರಿಂದ ಗರಿಷ್ಠ ₹70 ಸಾವಿರ ಖರ್ಚಾಗುತ್ತಿದ್ದು, ಸಿಸೇರಿಯನ್‌ ಹೆರಿಗೆಗೆ ಕನಿಷ್ಠ ₹60 ರಿಂದ ಗರಿಷ್ಠ ₹80 ಸಾವಿರ, ಕೆಲವೊಮ್ಮೆ ₹1 ಲಕ್ಷಕ್ಕೂ ಮೀರಿ ಖರ್ಚಾಗುತ್ತದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT