ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹವಾಮಾನ ವೈಪರೀತ್ಯ: ವಿಮಾನ ಭೂ ಸ್ಪರ್ಶಕ್ಕೆ ಅಡ್ಡಿ

ಕಲಬುರ್ಗಿಯಲ್ಲಿ ‘ಲ್ಯಾಂಡ್’ ಆಗದ 2 ವಿಮಾನಗಳು: ಹುಬ್ಬಳ್ಳಿಯಲ್ಲಿ ವಿಳಂಬ
Last Updated 17 ಆಗಸ್ಟ್ 2020, 1:16 IST
ಅಕ್ಷರ ಗಾತ್ರ

ಹುಬ್ಬಳ್ಳಿ/ಕಲಬುರ್ಗಿ: ಹವಾಮಾನ ವೈಪರೀತ್ಯದಿಂದ ಭಾನುವಾರ ಕಲಬುರ್ಗಿವಿಮಾನ ನಿಲ್ದಾಣದಲ್ಲಿ ಎರಡು ವಿಮಾನಗಳುಭೂ ಸ್ಪರ್ಶ ಮಾಡದೇ ಹಿಂದಿರುಗಿದರೆ, ಹುಬ್ಬಳ್ಳಿಯಲ್ಲಿ ಒಂದೂವರೆ ಗಂಟೆ ಆಗಸದಲ್ಲೇ ಹಾರಾಡಿದ ನಂತರ ವಿಮಾನವು ಸುರಕ್ಷಿತವಾಗಿ ಇಳಿದಿದೆ.

ಬೆಂಗಳೂರಿನಿಂದ ಹೊರಟಿದ್ದ ಇಂಡಿಗೊ 6E7162 ವಿಮಾನವು ಒಂದೂವರೆ ಗಂಟೆ ತಡವಾಗಿ ವಾಣಿಜ್ಯ ನಗರಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಭೂ ಸ್ಪರ್ಶ ಮಾಡಿದ ಈ ವಿಮಾನದಲ್ಲಿ ಸಂಸದ ಅನಂತಕುಮಾರ ಹೆಗಡೆ ಸೇರಿದಂತೆ 49 ಪ್ರಯಾಣಿಕರಿದ್ದರು.

ಬೆಳಿಗ್ಗೆ 7.50ಕ್ಕೆ ಬೆಂಗಳೂರಿನಿಂದ ಹೊರಟಿದ್ದ ವಿಮಾನ 8.55ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಕಾರ್ಮೋಡ ಕವಿದಿದ್ದರಿಂದ ಇಳಿಯಲು ಸಿಗ್ನಲ್ ಸಿಗದೆ ಒಂದೂವರೆ ಗಂಟೆ ಆಗಸದಲ್ಲಿಯೇ ಸುತ್ತಾಡಿದೆ. ಹುಬ್ಬಳ್ಳಿಯಲ್ಲಿ ಇಳಿಯಲು ಸಾಧ್ಯವಾಗದೇ ಹೋದಲ್ಲಿ ಬೆಳಗಾವಿ ಅಥವಾ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಸುವ ಬಗ್ಗೆ ನಿಲ್ದಾಣದ ಅಧಿಕಾರಿಗಳು ಯೋಚನೆ ಮಾಡಿದ್ದರು. ಆದರೆ, 10.20ರ ವೇಳೆ ಸಿಗ್ನಲ್ ದೊರೆತ ಕಾರಣ ಸುರಕ್ಷಿತವಾಗಿ ಇಳಿದಿದೆ.

‘ವಿಮಾನದಲ್ಲಿ ಸಾಕಷ್ಟು ಇಂಧನ ಸಂಗ್ರಹವಿತ್ತು. ಹೀಗಾಗಿ ತೊಂದರೆಯಾಗಲಿಲ್ಲ. ಹವಾಮಾನ ಸಮಸ್ಯೆಯಿಂದ ತಡವಾಗಿ ಲ್ಯಾಂಡ್ ಆಗಿದೆ. ವಾತಾವರಣ ಹಾಗೂ ಲ್ಯಾಂಡಿಂಗ್ ತಡವಾಗುವುದರ ಬಗ್ಗೆ ಮೊದಲೇ‌ ಮಾಹಿತಿಯಿತ್ತು’ ಎಂದು ಇಂಡಿಗೊ ಸಂಸ್ಥೆಯ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ‘ಗೆ ತಿಳಿಸಿದರು.

‘ಬೆಳಿಗ್ಗೆ ಮಳೆ ಹಾಗೂ ವಿಪರೀತ ಮೋಡ ಕವಿದ ವಾತಾವರಣ ಇದ್ದ ಕಾರಣ ವಿಮಾನ ಇಳಿಯಲು ಸಿಗ್ನಲ್ ದೊರೆತಿರಲಿಲ್ಲ. ವಾತಾವರಣ ಸ್ವಲ್ಪ ತಿಳಿಗೊಂಡಾಗ ವಿಮಾನ ಸುರಕ್ಷಿತವಾಗಿ ಇಳಿದಿದೆ’ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದ ಠಾಕರೆ ತಿಳಿಸಿದ್ದಾರೆ.

ವಿಳಂಬ ಹಾರಾಟ:ಹವಾಮಾನ ವೈಪರೀತ್ಯದಿಂದಾಗಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಮಧ್ಯಾಹ್ನ 12ಕ್ಕೆ ಹೊರಡ ಬೇಕಿದ್ದ ಸ್ಟಾರ್‌ ಏರ್‌ ವಿಮಾನ 3ಕ್ಕೆ ಹೊರಟು, 3.48ಕ್ಕೆ ತಲುಪಿದೆ. ಪ್ರತಿದಿನ ಮಧ್ಯಾಹ್ನ 12.50ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣ ತಲುಪುತ್ತಿತ್ತು ಎಂದು ಸ್ಟಾರ್‌ ಏರ್‌ ಸಿಬ್ಬಂದಿ ತಿಳಿಸಿದ್ದಾರೆ.‌

ಲ್ಯಾಂಡ್‌ ಆಗದ ವಿಮಾನ:‘ಬೆಂಗಳೂರಿ ನಿಂದ ಹೊರಟ ಅಲಯನ್ಸ್‌ ಏರ್‌ ಸಂಸ್ಥೆ ವಿಮಾನಕ್ಕೆ ಕಲಬುರ್ಗಿಯಲ್ಲಿ ಎಟಿಸಿ ಸಿಗ್ನಲ್ ದೊರೆಯದ ಕಾರಣ ಹೈದರಾಬಾದ್‌ ವಿಮಾನ ನಿಲ್ದಾಣದಲ್ಲಿ ಇಳಿದಿದೆ. ವಾತಾವರಣ ತಿಳಿಯಾದ ಬಳಿಕ ಸಂಜೆ 4.22ಕ್ಕೆ ಕಲಬುರ್ಗಿಗೆ ಬಂದಿಳಿಯಿತು. ವಿಮಾನದಲ್ಲಿ 50 ಪ್ರಯಾಣಿಕರಿದ್ದರು. ಸಂಜೆ 5.10ಕ್ಕೆ ಕಲಬುರ್ಗಿಯಿಂದ 53 ಪ್ರಯಾಣಿಕರ ಸಮೇತ ಬೆಂಗಳೂರಿಗೆ ಹೊರಟಿತು’ ಎಂದು ಕಲಬುರ್ಗಿ ವಿಮಾನ ನಿಲ್ದಾಣದ ನಿರ್ದೇಶಕ ಜ್ಞಾನೇಶ್ವರ ರಾವ್ ತಿಳಿಸಿದರು.

ವಾಪಸಾದ ಸ್ಟಾರ್‌ ಏರ್: ‘ಬೆಂಗಳೂರಿನಿಂದ ಹೊರಟ ಸ್ಟಾರ್ ಏರ್ ಸಂಸ್ಥೆಯ ವಿಮಾನಕ್ಕೂ ಕಲಬುರ್ಗಿಯಲ್ಲಿ ಇಳಿಯಲು ಸಾಧ್ಯವಾಗಲಿಲ್ಲ. ಕೆಲ ಹೊತ್ತು ಆಗಸದಲ್ಲಿ ಸುತ್ತಾಟ ನಡೆಸಿದರೂ ಎಟಿಸಿಯಿಂದ ಇಳಿಯಲು ಅನುಮತಿ ಸಿಗಲಿಲ್ಲ.

ವಿಮಾನ ನಿಲ್ದಾಣದ ಸುತ್ತ ಮುತ್ತ ಮಂಜು ಕವಿದಿತ್ತು. ರನ್‌ ವೇ ಸರಿಯಾಗಿ ಗೋಚರಿಸದ ಕಾರಣ ಬೆಂಗಳೂರಿಗೆ ವಾಪಸಾಯಿತು’ ಎಂದು ತಿಳಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT