ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾಗುತ್ತಿದೆ ಕೆಂಪು ಬಸ್‌ಗಳ ಸ್ವರೂಪ: 140 ಹೊಸ ಬಸ್‌ ಸಂಚಾರಕ್ಕೆ ಹಸಿರು ನಿಶಾನೆ

Published 7 ಅಕ್ಟೋಬರ್ 2023, 16:19 IST
Last Updated 7 ಅಕ್ಟೋಬರ್ 2023, 16:19 IST
ಅಕ್ಷರ ಗಾತ್ರ

ಬೆಂಗಳೂರು: ಕೆಎಸ್‌ಆರ್‌ಟಿಸಿ ನೂತನ ಮಾದರಿಯ ಕೆಂಪು ಬಸ್‌ಗಳನ್ನು ಪರಿಚಯಿಸಿದ್ದು, ಮೊದಲ ಹಂತದಲ್ಲಿ 100 ಬಸ್‌ಗಳು ರಸ್ತೆಗೆ ಇಳಿಯಲಿವೆ.

ಹವಾನಿಯಂತ್ರಿತ ಸ್ಲೀಪರ್‌ ಬಸ್‌, ಕರ್ನಾಟಕ ಸಾರಿಗೆ ಹಾಗೂ ಹವಾನಿಯಂತ್ರಿತವಲ್ಲದ 40 ‘ಪಲ್ಲಕ್ಕಿ’ ಸೇರಿದಂತೆ 140 ಬಸ್‌ಗಳ ಸಂಚಾರಕ್ಕೆ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹಸಿರು ನಿಶಾನೆ ತೋರಿದರು.

ಜಿಲ್ಲಾ ಕೇಂದ್ರದಿಂದ ಮತ್ತೊಂದು ಜಿಲ್ಲಾ ಕೇಂದ್ರಕ್ಕೆ ಸಂಚರಿಸುವ ಬಸ್‌ಗಳು (ಪಾಯಿಂಟ್‌ ಟು ಪಾಯಿಂಟ್‌) ಹಾಗೂ ದೂರದ ಪ್ರಯಾಣದ ವೇಗದೂತ ಸಾರಿಗೆಗೆ ಒಂದೇ ಮಾದರಿಯ ಕೆಂಪು ಬಸ್‌ಗಳನ್ನು ಇದುವರೆಗೂ ಬಳಸಲಾಗುತ್ತಿತ್ತು. ಈಗ ಜಿಲ್ಲಾ ಕೇಂದ್ರಗಳ ಮಧ್ಯೆ ಸಂಚರಿಸುವ ಬಸ್‌ಗಳ ಸ್ವರೂಪವನ್ನು ಬದಲಾಯಿಸಲಾಗಿದೆ. 

ಹಳೆಯ ಕೆಂಪು ಬಸ್‌ಗಳು 3.2 ಮೀಟರ್‌ ಎತ್ತರ ಇದ್ದರೆ, ನೂತನ ಮಾದರಿ 3.4 ಮೀಟರ್‌ ಎತ್ತರ, ಬಕೆಟ್‌ ವಿನ್ಯಾಸದ 52 ಆಸನಗಳನ್ನು ಒಳಗೊಂಡಿವೆ. ಹಿಂದಿನ ಹಾಗೂ ಮುಂದಿನ ಗಾಜುಗಳು ವಿಶಾಲವಾಗಿವೆ. ಪ್ರಯಾಣಿಕರು ಬಳಸುವ ಕಿಟಕಿಯ ಗಾತ್ರವನ್ನೂ ಹೆಚ್ಚಿಸಲಾಗಿದೆ. ಎಲ್‌ಇಡಿ ದೀಪ, ಸೆನ್ಸರ್‌ ಅಳವಡಿಸಿದ ಬಾಗಿಲುಗಳು, ವಿಶಾಲ ಲಗೇಜ್‌ ಕ್ಯಾರಿಯರ್‌ ಅಳವಡಿಸಲಾಗಿದೆ. 

‘ಪಲ್ಲಕ್ಕಿ’ ಸ್ಲೀಪರ್‌ ಬಸ್‌ಗಳು ‘ಸಂತೋಷವು ಪ್ರಯಾಣಿಸುತ್ತಿದೆ’ ಎಂಬ ಟ್ಯಾಗ್‌ಲೈನ್‌ ಒಳಗೊಂಡಿವೆ. 11.3 ಮೀಟರ್‌ ಉದ್ದದ ಈ ಬಸ್‌ಗಳು 197 ಎಚ್‌ಪಿ ಎಂಜಿನ್‌ ಒಳಗೊಂಡಿವೆ. ಮಲಗಲು ಇರುವಷ್ಟೇ ಆರಾಮದಾಯಕ ವ್ಯವಸ್ಥೆ, ಕುಳಿತುಕೊಳ್ಳಲೂ ಇದೆ. ಪ್ರತಿ ಆಸನಕ್ಕೂ ಮೊಬೈಲ್‌, ಲ್ಯಾಪ್‌ಟಾಪ್‌ ಚಾರ್ಜಿಂಗ್‌, ಆಡಿಯೊ ಸ್ಪೀಕರ್‌, ಪಾದರಕ್ಷೆಗಳನ್ನು ಇಡುವ ಸೌಲಭ್ಯ ಕಲ್ಪಿಸಲಾಗಿದೆ. 

ಕರ್ನಾಟಕ ಸಾರಿಗೆ ಬಸ್‌ಗಳಲ್ಲಿ ಎಲೆಕ್ಟ್ರಾನಿಕ್‌ ವಾಹನ ಸ್ಥಿರತೆ ನಿಯಂತ್ರಣ ವ್ಯವಸ್ಥೆ ಹಾಗೂ ವಾಹನ ಇರುವಿಕೆ ಸ್ಥಳದ ಟ್ರ್ಯಾಕಿಂಗ್‌ ವ್ಯವಸ್ಥೆ, ಹಿನ್ನೋಟದ ಕ್ಯಾಮೆರಾ ಅಳವಡಿಸಲಾಗಿದೆ. 

‘ಶಕ್ತಿ’ ಫಲಾನುಭವಿಗಳು ಸೇರಿದಂತೆ ಪ್ರಯಾಣಿಕರ ಅನುಕೂಲಕ್ಕಾಗಿ ಈ ವರ್ಷ 798 ಹೊಸ ಬಸ್‌ಗಳನ್ನು ಖರೀದಿಸಲಾಗುತ್ತಿದೆ. ಪ್ರತಿ ದಿನದ ಸಂಚಾರವನ್ನು 27 ಲಕ್ಷ ಕಿ.ಮೀಗೆ ವಿಸ್ತರಿಸಲಾಗಿದೆ
-ಸಿದ್ದರಾಮಯ್ಯ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT