ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಧಾನ ಪರಿಷತ್: ಪರಿಶೀಲನಾ ಸಮಿತಿಗೆ ‘ಸಹಕಾರ ಸಂಘಗಳ ಮಸೂದೆ’

Published 28 ಫೆಬ್ರುವರಿ 2024, 15:46 IST
Last Updated 28 ಫೆಬ್ರುವರಿ 2024, 15:46 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ಮಸೂದೆ–2024’ರ ಕೆಲ ಅಂಶಗಳಿಗೆ ವಿಧಾನ ಪರಿಷತ್‌ನಲ್ಲಿ ಬಿಜೆಪಿ–ಜೆಡಿಎಸ್‌ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರಿಂದ ಮಸೂದೆಯನ್ನು ಸಭಾಪತಿ ಬಸವರಾಜ ಹೊರಟ್ಟಿ ಪರಿಶೀಲನಾ ಸಮಿತಿಗೆ ವಹಿಸಿದರು.

ಸಹಕಾರಿ ಒಕ್ಕೂಟ, ಅಪೆಕ್ಸ್‌ ಸಹಕಾರ ಸಂಘ ಮತ್ತು ಜಿಲ್ಲಾ ಸಹಕಾರ ಸಂಘಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ ತಿದ್ದುಪಡಿ ಮಸೂದೆಗೆ ವಿಧಾನಸಭೆ ಅಂಗೀಕಾರ ನೀಡಿದ್ದು, ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಬುಧವಾರ ವಿಧಾನ ಪರಿಷತ್‌ನಲ್ಲಿ ಮಂಡಿಸಿದರು. 

‘ಪ್ರಾಥಮಿಕ ಸಹಕಾರ ಸಂಘಗಳಲ್ಲಿ ನಾಮನಿರ್ದೇಶನದಲ್ಲಿ ಮೂರಕ್ಕೆ ಒಂದು ಸ್ಥಾನವನ್ನು ಮೀಸಲಾತಿ ಅಡಿಯಲ್ಲಿ ಒದಗಿಸಲು ಈ ಮಸೂದೆ ಅವಕಾಶ ಕಲ್ಪಿಸಲಿದೆ. ಇದು ದೇಶದಲ್ಲೇ ಮೊದಲು. ತಳಸಮುದಾಯಗಳಿಗೆ ಪ್ರಾತಿನಿಧ್ಯ ಕಲ್ಪಿಸುವ ಇಂತಹ ಮಸೂದೆಗೆ ಸದನ ಒಪ್ಪಿಗೆ ನೀಡಬೇಕು. ಇಲ್ಲದಿದ್ದರೆ  ಮೀಸಲಾತಿಗೆ ಬಿಜೆಪಿ–ಜೆಡಿಎಸ್‌ ವಿರೋಧವಿದೆ ಎಂದು ಭಾವಿಸಬೇಕಾಗುತ್ತದೆ’ ಎಂದು ಸಚಿವ ರಾಜಣ್ಣ ಹೇಳಿದರು.

‘ತಳಸಮುದಾಯಗಳ ಮೀಸಲಾತಿಗೆ ಬಿಜೆಪಿಯ ಸಂಪೂರ್ಣ ಬೆಂಬಲವಿದೆ. ನಮ್ಮ ವಿರೋಧ ಇರುವುದು ಸಹಕಾರ ಇಲಾಖೆಯ ಅಧಿಕಾರಿಯನ್ನೇ ಚುನಾವಣಾಧಿಕಾರಿಯಾಗಿ ನೇಮಿಸುವ ಹಾಗೂ ಸುಪ್ರೀಂ ಕೋರ್ಟ್‌ ತೀರ್ಪು ಇಟ್ಟುಕೊಂಡು ಮಹಾಸಭೆಯಲ್ಲಿ ಭಾಗವಹಿಸದ ಸದಸ್ಯರಿಗೂ ಮತದಾನದ ಹಕ್ಕು ನೀಡುವುದೂ ಸೇರಿದಂತೆ ಕೆಲ ವಿಷಯಗಳಲ್ಲಿ. ಹಾಗಾಗಿ, ಮಸೂದೆಯನ್ನು ಜಂಟಿ ಪರಿಶೀಲನಾ ಸಮಿತಿಗೆ ವಹಿಸಬೇಕು’ ಎಂದು ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

‘ಪರಿಶೀಲನಾ ಸಮಿತಿಗೆ ವಹಿಸಲು ನಮ್ಮದೇನು ಅಭ್ಯಂತರವಿಲ್ಲ’ ಎಂದು ರಾಜಣ್ಣ ಪ್ರತಿಕ್ರಿಯಿಸಿದರು. ಚರ್ಚೆಗೆ ಅವಕಾಶ ನೀಡುವಂತೆ ಕೆಲ ಸದಸ್ಯರ ಬೇಡಿಕೆಯನ್ನು ಒಪ್ಪದ ಸಭಾಪತಿ ಪರಿಶೀಲನಾ ಸಮಿತಿ ರಚಿಸುವ ಘೋಷಣೆ ಮಾಡಿದರು.

‘ವಿಧಾನಸೌಧದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೂಗಿರುವವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿ ಬಿಜೆಪಿ–ಜೆಡಿಎಸ್‌ ಸದಸ್ಯರು ಸಭಾಪತಿ ಪೀಠದ ಮುಂದೆ ಧರಣಿ ನಡೆಸಿದರು. ಗದ್ದಲದ ಮಧ್ಯೆಯೇ ಯಾವುದೇ ಚರ್ಚೆ ಇಲ್ಲದೆ ‘ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ’, ಘಾಟಿ ಸುಬ್ರಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ’, ‘ಹುಲಿಗೆಮ್ಮ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ’, ‘ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣಾ) ಮಸೂದೆ’ ಹಾಗೂ ‘ಕರ್ನಾಟಕ ಭೂ ಕಂದಾಯ ತಿದ್ದುಪಡಿ’ ಮಸೂದೆಗಳಿಗೆ ಅಂಗೀಕಾರ ನೀಡಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT