ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಗೀತೆ ರಾಗ ಸಂಯೋಜನೆ ಪ್ರಶ್ನಿಸಿ ರಿಟ್‌

ರಾಜ್ಯ ಸರ್ಕಾರಕ್ಕೆ ತುರ್ತು ನೋಟಿಸ್ ಜಾರಿ
Last Updated 30 ಸೆಪ್ಟೆಂಬರ್ 2022, 20:01 IST
ಅಕ್ಷರ ಗಾತ್ರ

ಬೆಂಗಳೂರು: ‘ನಾಡಗೀತೆ, ಜಯ ಭಾರತ ಜನನಿಯ ತನುಜಾತೆಯನ್ನು ನಿರ್ದಿಷ್ಟ ಧಾಟಿ ಮತ್ತು ಕಾಲಾವಧಿಯಲ್ಲಿ ಹೀಗೇ ಹಾಡಬೇಕು ಎಂಬುದನ್ನು ಪುಷ್ಟೀಕರಿಸುವ ಶಾಸನ ಅಥವಾ ಕಾನೂನಿನ ಅಧಿಕಾರ ಎಲ್ಲಿದೆ’ ಎಂದು ಪ್ರಶ್ನಿಸಿರುವ ಹೈಕೋರ್ಟ್‌, ಈ ಸಂಬಂಧ ಸಮರ್ಪಕ ದಾಖಲೆಗಳನ್ನು ಕೋರ್ಟ್‌ಗೆ ಹಾಜರುಪಡಿಸುವಂತೆ ನಿರ್ದೇಶಿಸಿ ರಾಜ್ಯ ಸರ್ಕಾರಕ್ಕೆ ತುರ್ತು ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ.

‘ನಾಡಗೀತೆಗೆ ಮೈಸೂರು ಅನಂತಸ್ವಾಮಿ ಅವರ ಧಾಟಿಯನ್ನು ಅಳವಡಿಸಿಕೊಂಡು ಅದರ ಪೂ‌ರ್ಣಪಾಠ
ಬಳಸಬೇಕು ಹಾಗೂ ಆಲಾಪವಿಲ್ಲದೇ, ಪುನರಾವರ್ತನೆ ಇಲ್ಲದೆ 2 ನಿಮಿಷ 30 ಸೆಕೆಂಡುಗಳಲ್ಲಿ ಹಾಡಬೇಕು ಎಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶಕ್ಕೆ ತಡೆ ನೀಡಬೇಕು’ ಎಂದು ಕೋರಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಚ್‌.ಎಂ.ವಿಶ್ವನಾಥ ಅವರು, ‘ನಾಡಗೀತೆಗೆಮೈಸೂರು ಅನಂತಸ್ವಾಮಿಯೊಬ್ಬರೇ ಸಂಪೂರ್ಣ ರಾಗ ಸಂಯೋಜನೆ ಮಾಡಿಲ್ಲ. ಈ ರೀತಿ ಮಾಡಿದ್ದಾರೆ ಎಂಬುದಕ್ಕೆ ಯಾವ ದಾಖಲೆಗಳೂ ಇಲ್ಲ. ಹಾಗಾಗಿ, ಈ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ರದ್ದುಗೊಳಿಸಬೇಕು‘ ಎಂದು ಕೋರಿದರು.

ಪ್ರಕರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ ಮತ್ತು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯವನ್ನುಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

‘ಹತ್ತಾರು ರಾಗಗಳಲ್ಲಿ ಹಾಡಬಹುದಲ್ಲವೇ?’

‘ನಾಡಗೀತೆಯ ಕರ್ತೃ ರಾಷ್ಟ್ರಕವಿ ಕುವೆಂಪು ಅವರ ಬಗ್ಗೆ ಎಲ್ಲರಿಗೂ ಅಪಾರ ಗೌರವ ಇದೆ. ನಾವೆಲ್ಲಾ ಚಿಕ್ಕವರಿದ್ದಾಗಿನಿಂದಲೂ ಇದನ್ನು ಹಾಡುತ್ತಲೇ ಬಂದಿದ್ದೇವೆ. ಆದರೆ, ಇಂತಹುದೇ ರಾಗದಲ್ಲಿ ಹಾಡುವಂತೆ ಯಾರೂ ಎಲ್ಲಿಯೂ ಹೇಳಿದ ಉದಾಹರಣೆ ಇಲ್ಲ. ಒಂದು ಹಾಡನ್ನು ಮೇಘ ಮಲ್ಹಾರ, ಮಿಯಾ ಕಿ ಮಲ್ಹಾರ, ನಟ ಮಲ್ಹಾರ, ಮಿಯಾ ಕಿ ತೋಡಿ, ಝಿಂಝೋಟಿ ಹೀಗೆ... ಹತ್ತಾರು ರಾಗಗಳಲ್ಲಿ ಹಾಡಬಹುದಲ್ಲವೇ’ ಎಂದು ನ್ಯಾಯಪೀಠ ಪ್ರಶ್ನಿಸಿತು.

‘ಹಾಡುವುದು ಕಲಾಕಾರನ ಅಭಿವ್ಯಕ್ತಿ ಸ್ವಾತಂತ್ರ್ಯ. ಒಂದು ಹಾಡಿನ ತಾಳ, ರಾಗ, ಭಾವ, ಅರ್ಥ ಮತ್ತು ಸನ್ನಿವೇಶವನ್ನು ಹಾಡುಗಾರರೇ ನಿರ್ಧರಿಸುತ್ತಾರೆ. ರಾಷ್ಟ್ರಗೀತೆಯನ್ನು ಹೀಗೇಯೇ ಹಾಡಬೇಕು ಎಂಬುದಕ್ಕೆ ಕಾನೂನಿದೆ. ಆದರೆ, ನಾಡಗೀತೆಯನ್ನು ಇಂತಹುದೇ ರಾಗದಲ್ಲಿ ಹಾಡಬೇಕು, ಅದರ ರಾಗ ಸಂಯೋಜನೆ ಹೀಗೇ ಇರಬೇಕು ಎಂಬುದಕ್ಕೆ ಕಾನೂನಿನ ಸಮರ್ಥನೆ ಏನಿದೆ?, ಈ ರೀತಿ ಹಾಡಬೇಕು ಎಂಬುದನ್ನು ಶಾಸನದಿಂದ ಮಾತ್ರವೇ ನಿಯಂತ್ರಿಸಬಹುದು. ಸಾಮಾನ್ಯ ಆದೇಶದಿಂದಲ್ಲ’ ಎಂಬ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT