ಬೆಂಗಳೂರು: ‘ಐದು ವರ್ಷವೂ ನಾನೇ ಮುಖ್ಯಮಂತ್ರಿ ಆಗಿ ಮುಂದುವರಿಯಲಿದ್ದೇನೆ’ ಎಂದು ನವದೆಹಲಿಯಲ್ಲಿ ಸಿದ್ದರಾಮಯ್ಯ ಪುನರುಚ್ಚರಿಸಿದ ಬೆನ್ನಲ್ಲೆ, ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸಚಿವರು ಸದಾಶಿವನಗರದಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ನಿವಾಸಕ್ಕೆ ದೌಡಾಯಿಸಿ ಚರ್ಚೆ ನಡೆಸಿರುವುದು ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.

ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗುರುವಾರ ಸಂಜೆ ಪಕ್ಷದ ವರಿಷ್ಠರನ್ನು ಭೇಟಿ ಮಾಡುವ ಮೊದಲೇ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ, ‘ಮುಖ್ಯಮಂತ್ರಿ ಬದಲಾವಣೆಯ ವಿಚಾರ ಊಹಾಪೋಹ’ ಎಂದಿದ್ದಾರೆ. ಅವರ ಹೇಳಿಕೆ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ, ಸಚಿವರಾದ ಜಿ. ಪರಮೇಶ್ವರ, ಸತೀಶ ಜಾರಕಿಹೊಳಿ, ಎಚ್.ಸಿ. ಮಹದೇವಪ್ಪ, ಜಮೀರ್ ಅಹಮದ್ಖಾನ್, ಈಶ್ವರ ಖಂಡ್ರೆ, ಶರಣಪ್ರಕಾಶ್ ಪಾಟೀಲ ಮತ್ತು ದಿನೇಶ್ ಗುಂಡೂರಾವ್ ಅವರು ಖರ್ಗೆ ಮನೆಗೆ ತೆರಳಿ ಮಾತುಕತೆ ನಡೆಸಿದರು.

ರಾಜ್ಯ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಕುರಿತ ಚರ್ಚೆಗೆ ತಮ್ಮ ಮಾತಿನ ಮೂಲಕ ಸಿದ್ದರಾಮಯ್ಯ ತೆರೆ ಎಳೆದಿರುವುದು ಕೆಲವು ಸಚಿವರಲ್ಲಿ ಸಂಚಲನ ಮೂಡಿಸಿದೆ. ಸದ್ಯದಲ್ಲೇ ಸಚಿವ ಸಂಪುಟ ಪುನರ್ರಚನೆ ವಿಚಾರ ಮುನ್ನಲೆಗೆ ಬರುವ ಸಾಧ್ಯತೆಯಿದೆ. ಈ ಕಾರಣಕ್ಕೆ ಖರ್ಗೆ ಅವರನ್ನು ಸಚಿವರು ಭೇಟಿ ಮಾಡಿದ್ದಾರೆ. ಹೈಕಮಾಂಡ್ ಮಟ್ಟದಲ್ಲಿನ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆಯುವುದು ಸಚಿವರ ಉದ್ದೇಶವಾಗಿತ್ತು. ಸುಮಾರು 45 ನಿಮಿಷ ಸಚಿವರುಗಳ ಜೊತೆ ಮಾತುಕತೆ ನಡೆಸಿದ ಖರ್ಗೆ, ಬಳಿಕ ದೆಹಲಿಗೆ ತೆರಳಿದರು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಖರ್ಗೆ ಭೇಟಿ ಬಳಿಕ ಮಾತನಾಡಿದ ಸತೀಶ ಜಾರಕಿಹೊಳಿ, ‘ನಾವೆಲ್ಲರೂ ಒಟ್ಟಿಗೆ ಬಂದು ರಾಜ್ಯದ ಸ್ಥಿತಿಯ ಬಗ್ಗೆ ಖರ್ಗೆಯವರ ಜೊತೆ ಚರ್ಚೆ ಮಾಡಿದ್ದೇವೆ. ಅದು ಬಿಟ್ಟು ಬೇರೆ ಏನೂ ಚರ್ಚೆ ಮಾಡಿಲ್ಲ’ ಎಂದರು. ‘ಖರ್ಗೆಯವರ ಬಳಿ ರಾಜಕೀಯ ಚರ್ಚೆ ಮಾಡಿಲ್ಲ. ಸಿದ್ದರಾಮಯ್ಯ ಅನುಯಾಯಿಗಳು ಎನ್ನುವುದಕ್ಕಿಂತ ನಾವು ಕಾಂಗ್ರೆಸ್ ಅನುಯಾಯಿಗಳು’ ಎಂದು ಎಚ್.ಸಿ. ಮಹದೇವಪ್ಪ ಹೇಳಿದರು. ‘ನಮ್ಮ ಪಾಡಿಗೆ ನಾವು ಬಂದಿದ್ದೆವು. ಬೇರೆ ಏನೂ ಇಲ್ಲ’ ಎಂದು ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದರು.

ಮಹದೇವಪ್ಪ– ಸತೀಶ ಪ್ರತ್ಯೇಕ ಚರ್ಚೆ

ಖರ್ಗೆ ಅವರನ್ನು ಭೇಟಿ ಮಾಡುವುದಕ್ಕೂ ಮೊದಲು ಎಚ್.ಸಿ. ಮಹದೇವಪ್ಪ ಅವರ ನಿವಾಸಕ್ಕೆ ತೆರಳಿ ಸತೀಶ ಜಾರಕಿಹೊಳಿ ಸಮಾಲೋಚನೆ ನಡೆಸಿರುವುದು ಕೂಡಾ ಕಾಂಗ್ರೆಸ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಉಭಯ ಸಚಿವರು ಸುಮಾರು 25 ನಿಮಿಷ ಮಾತುಕತೆ ನಡೆಸಿದರು. ಬಳಿಕ ಮಾತನಾಡಿದ ಇಬ್ಬರೂ, ಮುಖ್ಯಮಂತ್ರಿಯ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
‘ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ನಾಯಕರು. ಶಾಸಕರಿಂದ ಆಯ್ಕೆಯಾಗಿದ್ದಾರೆ. ಮುಖ್ಯಮಂತ್ರಿ ಗಾದಿ ವಿಚಾರದ ಚರ್ಚೆಗೆ ಈಗ ತೆರೆ ಬಿದ್ದಿದೆ’ ಎಂದಿದ್ದಾರೆ.

ಎಚ್.ಸಿ. ಮಹದೇವಪ್ಪ ಮಾತನಾಡಿ, ‘ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆ ಇಲ್ಲ ಎಂದು ಹೈಕಮಾಂಡ್ ಈಗಾಗಲೇ ಹೇಳಿದೆ. ಪಕ್ಷದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರೂ ಇದನ್ನು ಸ್ಪಷ್ಟಪಡಿಸಿ
ದ್ದಾರೆ. ಹೈಕಮಾಂಡ್ ಏನು ತೀರ್ಮಾನ ಮಾಡಿದೆಯೊ ಅದನ್ನು ಮುಖ್ಯಮಂತ್ರಿ ಹೇಳಿದ್ದಾರೆ. ಎಲ್ಲರೂ ಹೇಳಿದ ಮೇಲೆ ಇನ್ನೇನಿದೆ? ಪಕ್ಷದಲ್ಲಿ ಯಾವುದೇ ಗೊಂದಲದ ಸನ್ನಿವೇಶ ಇಲ್ಲ’ ಎಂದರು.

‘ಶೇ 10ರಷ್ಟು ಶಾಸಕರಿಗೆ ಸಿ.ಎಂ ಸಂದೇಶ’

‘ಪಂದ್ಯ ಮುಗಿಯಿತು ಎಂಬ ಸಂದೇಶವನ್ನು ಸಿದ್ದರಾಮಯ್ಯ ಅವರು ಕೊಟ್ಟಿದ್ದಾರೆ. ಹೀಗಾಗಿ, ಮುಖ್ಯಮಂತ್ರಿ ಬದಲಾವಣೆ ಚರ್ಚೆ ಇಂದಿಗೇ ಮುಗಿಯಬೇಕು. ಯಾರು ಶೇ 10 ರಷ್ಟು ಶಾಸಕರು ಈ ವಿಚಾರ ಮಾತನಾಡುತ್ತಿದ್ದಾರೊ ಅವರಿಗೂ ಸ್ಪಷ್ಟ ಸಂದೇಶವಿದು’ ಎಂದು ಸತೀಶ ಜಾರಕಿಹೊಳಿ ಹೇಳಿದರು.

‘ಮುಖ್ಯಮಂತ್ರಿ ಹೇಳಿರುವುದರಲ್ಲಿ ಹೊಸದೇನಿಲ್ಲ. ಈಗ ಹೇಳಬೇಕಾದ ಸಂದರ್ಭ ಬಂದಿದೆ. ಅದಕ್ಕೆ ಹೇಳಿದ್ದಾರೆ’ ಎಂದು ಸಮರ್ಥಿಸಿಕೊಂಡರು.

‘ಮುಖ್ಯಮಂತ್ರಿ ಬದಲಾವಣೆ ಎಲ್ಲಿಯೂ ಚರ್ಚೆ ಆಗಿಲ್ಲ. ಅಧಿಕಾರ ಹಂಚಿಕೆ ಇಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ಶಾಸಕರು ಕೂಡಾ ನಾಯಕತ್ವ ಬದಲಾವಣೆ ಮಾಡುವಂತೆ ಬೇಡಿಕೆ ಇಟ್ಟಿಲ್ಲ. ಅನುದಾನ ನೀಡುವಂತೆ ಎಲ್ಲ ಶಾಸಕರು ಸುರ್ಜೇವಾಲಾ ಬಳಿ ಮನವಿ ಮಾಡಿರಬಹುದು. ಕೇವಲ ಶೇ 10ರಷ್ಟು ಮಂದಿ ನಾಯಕತ್ವದ ಬದಲಾವಣೆ ಬಗ್ಗೆ ಮಾತನಾಡಿರಬಹುದು. ಸುಮಾರು 20 ಶಾಸಕರು ಹೇಳಿರಬಹುದು ಅಷ್ಟೇ. ಮುಖ್ಯಮಂತ್ರಿ ಆಯ್ಕೆ ಮಾಡುವಾಗ ಮತದಾನ ಆಗಿತ್ತು. ಹೆಚ್ಚು ಮತ ಪಡೆದ ಕಾರಣಕ್ಕೆ ಸಿದ್ದರಾಮಯ್ಯ ಅವರನ್ನು ವರಿಷ್ಠರು ಮುಖ್ಯಮಂತ್ರಿ ಮಾಡಿದ್ದಾರೆ. ಹೀಗಾಗಿ, ಮುಖ್ಯಮಂತ್ರಿ ಬೆಂಬಲಕ್ಕೆ ಹೆಚ್ಚು ಶಾಸಕರಿದ್ದಾರೆ’ ಎಂದರು.

ಶಾಸಕರ ದಂಡು: ಸತೀಶ ಜಾರಕಿಹೊಳಿ ನಿವಾಸಕ್ಕೆ ಶಾಸಕರಾದ ಕುಣಿಗಲ್ ರಂಗನಾಥ್, ಎಚ್.ಸಿ. ಬಾಲಕೃಷ್ಣ, ಅನಿಲ್ ಚಿಕ್ಕಮಾದು, ಬಸವಂತಪ್ಪ, ಯಾಸೀರ ಅಹಮದ್ ಖಾನ್ ಪಠಾಣ, ತರೀಕೆರೆ ಶ್ರೀನಿವಾಸ್, ದರ್ಶನ್ ಧ್ರುವ ನಾರಾಯಣ್, ಡಿ.ಜಿ. ಶಾಂತನಗೌಡ, ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಸೇರಿದಂತೆ ಹಲವು ಶಾಸಕರು ಭೇಟಿ ನೀಡಿ ಮಾತುಕತೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.