ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜ್ವಲ್ ಪ್ರಕರಣ | ಸಂತ್ರಸ್ತರ ನೆರವಿಗೆ ನಿಲ್ಲಿ: ಸಿಎಂಗೆ ರಾಹುಲ್‌ ಗಾಂಧಿ ಪತ್ರ

Published 4 ಮೇ 2024, 6:50 IST
Last Updated 4 ಮೇ 2024, 6:50 IST
ಅಕ್ಷರ ಗಾತ್ರ

ಬೆಂಗಳೂರು: ʼಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರಿಂದ ಅತ್ಯಾಚಾರಕ್ಕೊಳಗಾಗಿರುವ ಸಂತ್ರಸ್ತೆಯರ ನೆರವಿಗೆ ನಿಲ್ಲಿ. ಅವರಿಗೆ ಸಾಂತ್ವನ ಹೇಳುವುದರ ಜತೆಗೆ ನ್ಯಾಯ ಪಡೆಯಲು ಅಗತ್ಯವಿರುವ ಎಲ್ಲ ರೀತಿಯ ಬೆಂಬಲವನ್ನೂ ಒದಗಿಸಿʼ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೋರಿದ್ದಾರೆ.

ಮುಖ್ಯಮಂತ್ರಿಯವರಿಗೆ ಶುಕ್ರವಾರ ಪತ್ರ ಬರೆದಿರುವ ರಾಹುಲ್‌, ʼನಮ್ಮ ತಾಯಂದಿರು ಮತ್ತು ಸಹೋದರಿಯರಿಗೆ ನ್ಯಾಯ ಒದಗಿಸಲು ಹೋರಾಟ ನಡೆಸಬೇಕಾದ ಜವಾಬ್ದಾರಿ ಕಾಂಗ್ರೆಸ್‌ ಪಕ್ಷದ ಮೇಲಿದೆ. ಇಂತಹ ಘೋರ ಕೃತ್ಯದಲ್ಲಿ ಭಾಗಿಯಾದ ಎಲ್ಲರನ್ನೂ ಕಾನೂನು ಕ್ರಮದ ವ್ಯಾಪ್ತಿಗೆ ತರಬೇಕಾದ ಸಾಮೂಹಿಕ ಹೊಣೆಗಾರಿಕೆ ನಮ್ಮ ಮೇಲಿದೆ’ ಎಂದಿದ್ದಾರೆ.

ಪ್ರಜ್ವಲ್‌ ರೇವಣ್ಣ ಹಲವು ವರ್ಷಗಳಿಂದ ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ತನ್ನನ್ನು ಸಹೋದರ, ಮಗನಂತೆ ಭಾವಿಸಿದ್ದ ಹಲವು ಮಹಿಳೆಯರನ್ನೂ ಹಿಂಸಿಸಿರುವ ಪ್ರಜ್ವಲ್‌, ಆ ಮಹಿಳೆಯರ ಗೌರವವನ್ನು ಹಾಳು ಮಾಡಿದ್ದಾರೆ. ಅತ್ಯಾಚಾರ ನಡೆಸಿರುವ ವ್ಯಕ್ತಿಗೆ ಕಾನೂನಿನಲ್ಲಿ ಸಾಧ್ಯವಿರುವ ಅತ್ಯಂತ ಕಠಿಣ ಶಿಕ್ಷೆ ಆಗಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಬಿಜೆಪಿ ಮುಖಂಡ ಜಿ. ದೇವರಾಜೇಗೌಡ ಅವರು 2023ರ ಡಿಸೆಂಬರ್‌ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಪತ್ರ ಬರೆದು ಪ್ರಜ್ವಲ್‌ ರೇವಣ್ಣ ಹಿನ್ನೆಲೆ ಮತ್ತು ಅವರಿಂದ ನೂರಾರು ಮಹಿಳೆಯರ ಮೇಲೆ ಅತ್ಯಾಚಾರ ನಡೆದಿರುವ ಮಾಹಿತಿ ನೀಡಿದ್ದರು ಎಂಬುದು ತಿಳಿದು ನನಗೆ ಆಘಾತವಾಯಿತು. ಆರೋಪಿಯ ಲೈಂಗಿಕ ದೌರ್ಜನ್ಯದ ಚರಿತ್ರೆ ಮತ್ತು ಆತನೇ ವಿಡಿಯೊ ಚಿತ್ರೀಕರಿಸಿಕೊಳ್ಳುತ್ತದ್ದ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಿದ್ದರು. ಇಂತಹ ಘೋರ ಕೃತ್ಯದ ಬಗ್ಗೆ ಬಿಜೆಪಿ ನಾಯಕರಿಗೆ ಮಾಹಿತಿ ನೀಡಿದ್ದಾಗ್ಯೂ ಪ್ರಧಾನಿ ನರೇಂಧ್ರ ಮೋದಿ ಅವರು ಸಾಮೂಹಿಕ ಅತ್ಯಾಚಾರಿಯ ಪರ ಮತ ಯಾಚಿಸಿರುವುದು ಇನ್ನೂ ಆಘಾತಕಾರಿ ಸಂಗತಿ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರವು ಪ್ರಜ್ವಲ್‌ ವಿದೇಶಕ್ಕೆ ಪರಾರಿಯಾಗಲು ಇಚ್ಛಾಪೂರ್ವಕವಾಗಿಯೇ ಸಹಕಾರ ನೀಡಿದೆ. ಮಹಿಳೆಯರ ಮೇಲೆ ಅತ್ಯಾಚಾರ ಎಸಗಿರುವ ಆರೋಪಿಯನ್ನು ರಕ್ಷಿಸುತ್ತಿರುವ ಪ್ರಧಾನಿ ಮತ್ತು ಗೃಹ ಸಚಿವರನ್ನು ಕಟುವಾಗಿ ಖಂಡಿಸಬೇಕಿದೆ ಎಂದಿದ್ದಾರೆ.

ಮಹಿಳೆಯರ ಮೇಲೆ ದೌರ್ಜನ್ಯ ಎಸಗಿರುವವರ ವಿರುದ್ಧ ತುಟಿ ಬಿಚ್ಚದೇ ಇರುವ ಇಂತಹ ಹಿರಿಯ ರಾಜಕಾರಣಿಯನ್ನು ನನ್ನ ಎರಡು ದಶಕಗಳ ಸಾರ್ವಜನಿಕ ಜೀವನದಲ್ಲಿ ಯಾವತ್ತೂ ನೋಡಿರಲಿಲ್ಲ. ಮಣಿಪುರದಲ್ಲೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದವರನ್ನು ಪ್ರಧಾನಿ ಬೆಂಬಲಿಸಿದ್ದರು ಎಂದು ದೂರಿದ್ದಾರೆ.

ಪ್ರಜ್ವಲ್‌ ವಿರುದ್ಧದ ಆರೋಪಗಳ ಕುರಿತ ತನಿಖೆಗೆ ಕರ್ನಾಟಕ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ. ಆರೋಪಿಯ ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದುಪಡಿಸುವಂತೆ ಪ್ರಧಾನಿಗೆ ಪತ್ರವನ್ನೂ ಬರೆದಿದೆ. ಪಾಸ್‌ಪೋರ್ಟ್‌ ರದ್ದುಗೊಳಿಸಿ ಆದಷ್ಟು ಬೇಗ ಆರೋಪಿಯನ್ನು ವಶಕ್ಕೆ ಪಡೆಯಬೇಕಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT