ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜ್ವಲ್ ರೇವಣ್ಣ ಕೇಸ್‌ ಸಿಬಿಐಗೆ ವಹಿಸಲು ಬಿಜೆಪಿ ಮುಖಂಡ ಬೈರತಿ ಬಸವರಾಜ ಆಗ್ರಹ

Published 3 ಮೇ 2024, 7:56 IST
Last Updated 3 ಮೇ 2024, 7:56 IST
ಅಕ್ಷರ ಗಾತ್ರ

ಹುಬ್ಬಳ್ಳಿ: 'ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ವಿರುದ್ಧ ಕೇಳಿಬಂದಿರುವ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಸಿಬಿಐಗೆ ವಹಿಸಬೇಕು' ಎಂದು ಬಿಜೆಪಿ ಮುಖಂಡ ಬೈರತಿ ಬಸವರಾಜ ಆಗ್ರಹಿಸಿದರು.

ಇಲ್ಲಿನ ಅರವಿಂದನಗರದ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

'ಈ ಪ್ರಕರಣದ ತನಿಖೆ ಪೂರ್ಣಗೊಂಡ ನಂತರ ಸತ್ಯಾಸತ್ಯತೆ ಹೊರಬೀಳಲಿದೆ. ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂಬ ಎಚ್.ಡಿ. ಕುಮಾರಸ್ವಾಮಿ ಅವರ ಆಗ್ರಹಕ್ಕೆ ನನ್ನ ಸಹಮತವಿದೆ' ಎಂದರು.

'ಧಾರವಾಡ ಲೋಕಸಭಾ ಕ್ಷೇತ್ರ ಬಿಜೆಪಿ ಭದ್ರಕೋಟೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲ್ಲಿ ಕುರುಬ ಸಮಾಜದ ಯುವಕನನ್ನು (ವಿನೋದ ಅಸೂಟಿ) ಕಣಕ್ಕಿಳಿಸುವ ಮೂಲಕ ಹರಕೆಯ ಕುರಿಯನ್ನಾಗಿ ಮಾಡಿದ್ದಾರೆ. ಕಳೆದ ವಿಧನಸಭಾ ಚುನಾವಣೆಯಲ್ಲಿ ಅವರು ನವಲಗುಂದ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರೂ ಏಕೆ ನೀಡಲಿಲ್ಲ? ನವಲಗುಂದ ಹೊರತುಪಡಿಸಿ ಬಹುತೇಕ ಕಡೆಗಳಲ್ಲಿನ ಜನರಿಗೆ ಅವರ ಬಗ್ಗೆಯೇ ಗೊತ್ತಿಲ್ಲ' ಎಂದು ಲೇವಡಿ ಮಾಡಿದರು.

'ಈಶ್ವರಪ್ಪ ಅವರ ವಿಚಾರ ಮುಗಿದ ಅಧ್ಯಾಯ. ಯಾರೋ ಕೆಲವರು ಪಕ್ಷ ತೊರೆದರೆ ಯಾವುದೇ ತೊಂದರೆ ಇಲ್ಲ. ಕೇಂದ್ರ ಚುನಾವಣಾ ಸಮಿತಿಯು ಸಮರ್ಥ ಅಭ್ಯರ್ಥಿ ಹುಡುಕಿ, ಟಿಕೆಟ್ ನೀಡಿದೆ. ಅಂತೆಯೇ, ಕೇಂದ್ರದಲ್ಲಿ ಸಮರ್ಥವಾಗಿ ಸಚಿವ ಸ್ಥಾನ ನಿರ್ವಹಿಸಿದ, ಎಲ್ಲ ಸಮಾಜವನ್ನೂ ಒಗ್ಗೂಡಿಸಿಕೊಂಡು ಬಂದ ಪ್ರಲ್ಹಾದ ಜೋಶಿ ಅವರಿಗೆ ಆದ್ಯತೆ ನೀಡಲಾಯಿತು' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

'ಪ್ರಲ್ಹಾದ ಜೋಶಿ ಅವರು ಈ ಭಾಗಕ್ಕೆ ಅನೇಕ ಯೋಜನೆಗಳನ್ನು ತಂದಿದ್ದಾರೆ. ನಾನು ಸಚಿವನಾಗಿದ್ದಾಗ ಹುಬ್ಬಳ್ಳಿ-ಧಾರವಾಡದ ಸ್ಮಾರ್ಟ್ ಸಿಟಿ ಯೋಜನೆಗೆ ವೇಗ ನೀಡಿದ್ದೆ. ಕೇಂದ್ರ ಸರ್ಕಾರ ಜಾರಿಗೊಳಿಸಿದ ಹಲವಾರು ಯೋಜನೆಗಳ ಬಗ್ಗೆ ಜನರಿಗೆ ತಿಳಿಸಿದ್ದೇವೆ. ಕಳೆದ ಬಾರಿಗಿಂತ ಈ ಬಾರಿ ಅತಿ ಹೆಚ್ಚು ಅಂತರದಿಂದ ಪ್ರಲ್ಹಾದ‌ ಜೋಶಿ ಅವರನ್ನು ಗೆಲ್ಲಿಸಲು ಜನರೇ ಉತ್ಸುಕರಾಗಿದ್ದಾರೆ' ಎಂದರು.

'ಹಾಲುಮತ ಸಮಾಜ ಸೇರಿದಂತೆ ಎಲ್ಲಾ ಸಮಾಜದವರೊಂದಿಗೂ ಸಭೆ ನಡೆಸಲಾಗಿದೆ. ಎಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ತಾವು ಗ್ಯಾರಂಟಿ ಬಗ್ಗೆ ಯೋಚಿಸುತ್ತಿಲ್ಲ, ದೇಶದ ಭವಿಷ್ಯದ ಬಗ್ಗೆ ಯೋಚಿಸಿರುವುದಾಗಿ ಮಹಿಳೆಯರು ಹೇಳುತ್ತಿದ್ದಾರೆ' ಎಂದರು.

'ರಜಾ ದಿನಗಳಲ್ಲಿ ಚುನಾವಣೆ ನಡೆಸಿದರೆ, ಬಹುತೇಕರು ಮತದಾನ ಮಾಡವುದಿಲ್ಲ. ಈ ಬಗ್ಗೆ ಚುನಾವಣೆ ಆಯೋಗ ಸೂಕ್ತ ಕ್ರಮ ಕೈಗೊಂಡರೆ ಮತದಾನ ಪ್ರಮಾಣ ಹೆಚ್ಚಾಗಲಿದೆ' ಎಂದು ಅವರು ತಿಳಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT