ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯ ಸಂಸ್ಥೆ ಚುನಾವಣೆ ಮುಂದೂಡಿಕೆಗೆ ‘ತೆನೆ’ಗೆ ‘ಕೈ’ ದುಂಬಾಲು

ಸಮನ್ವಯ ಸಮಿತಿ ಸಭೆಯಲ್ಲಿ ಜೆಡಿಎಸ್‌ ಮನವೊಲಿಸಲು ನಿರ್ಧಾರ
Last Updated 29 ಜುಲೈ 2018, 19:30 IST
ಅಕ್ಷರ ಗಾತ್ರ

ನವದೆಹಲಿ/ ಬೆಂಗಳೂರು: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ‘ದೋಸ್ತಿ ಪಕ್ಷ’ಗಳ ‘ಸ್ನೇಹದ ಸೆಣಸಾಟ’ದಿಂದ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆ ಆಗಲಿದೆ ಎಂಬ ಕಾರಣಕ್ಕೆ ಸ್ಥಳೀಯ ಸಂಸ್ಥೆ ಚುನಾವಣೆ ಮುಂದೂಡಲು ಕಾಂಗ್ರೆಸ್‌ ಪ್ರಯತ್ನ ನಡೆಸಿದೆ.

ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಲೋಕಸಭೆ ಚುನಾವಣೆ ಮುಗಿಯುವವರೆಗೆ ಮುಂದೂಡಿದರೆ 2019ರ ಲೋಕಸಭೆ ಚುನಾವಣೆಯನ್ನು ನೆಮ್ಮದಿಯಿಂದ ಎದುರಿಸಬಹುದು. ಇಲ್ಲವಾದರೆ ಹೆಚ್ಚು ಸೀಟುಗಳನ್ನು ಗೆಲ್ಲುವ ಕನಸಿಗೆ ಕೊಡಲಿ ಏಟು ಬೀಳಬಹುದು ಎಂಬ ಆತಂಕ ಕಾಂಗ್ರೆಸ್‌ ನಾಯಕರನ್ನು ಕಾಡಿದೆ.

ಈ ಸಂಬಂಧ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮತ್ತು ಪಕ್ಷದ ಇತರ ನಾಯಕರು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಜತೆ ಮಾತುಕತೆ ನಡೆಸಿದ್ದಾರೆ. ಜೆಡಿಎಸ್‌ ವರಿಷ್ಠರ ಜತೆ ಮಾತನಾಡಿ ಚುನಾವಣೆ ಮುಂದೂಡಲು ಮನವೊಲಿಸುವಂತೆ ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಕೆಲವು ಕಾಂಗ್ರೆಸ್ ನಾಯಕರು ಜೆಡಿಎಸ್‌ ಮುಖಂಡರ ಬಳಿ ಈ ವಿಷಯ ಪ್ರಸ್ತಾಪಿಸಿದ್ದಾರೆ. ಆದರೆ, ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿಲ್ಲ. ಆದ್ದರಿಂದ ಮುಂದಿನ ಸಮನ್ವಯ ಸಮಿತಿ ಸಭೆಯಲ್ಲಿ ಈ ವಿಷಯ ಕೈಗೆತ್ತಿಕೊಳ್ಳಲು ಕಾಂಗ್ರೆಸ್‌ ನಾಯಕರು ನಿರ್ಧರಿಸಿದ್ದಾರೆ. ಸಭೆಯಲ್ಲಿ ಹೇಗಾದರೂ ಮಾಡಿ ಚುನಾವಣೆ ಮುಂದೂಡಿಕೆಗೆ ಮಿತ್ರ ಪಕ್ಷದ ನಾಯಕರ ಮನವೊಲಿಸಬೇಕು ಎಂದೂ ತೀರ್ಮಾನಿಸಲಾಗಿದೆ.

ವಿವಿಧ ನಗರಪಾಲಿಕೆಗಳೂ ಸೇರಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ದಿನಾಂಕವನ್ನು ಇನ್ನಷ್ಟೆ ಪ್ರಕಟಿಸಬೇಕಾಗಿದೆ. ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ಸೆಪ್ಟಂಬರ್‌ ಅಥವಾ ಅಕ್ಟೋಬರ್‌ ನಲ್ಲಿ ಚುನಾವಣೆ ನಡೆಸಲು ಚಿಂತನೆ ನಡೆಸಿರುವುದು ಕಾಂಗ್ರೆಸ್‌ನಲ್ಲಿ ಆತಂಕ ಹುಟ್ಟುಹಾಕಿದೆ.

ಈ ಮಧ್ಯೆ ರಾಜ್ಯ ಸರ್ಕಾರ ಚುನಾವಣೆ ದಿನಾಂಕ ಪ್ರಕಟಿಸುವುದಕ್ಕೆ ಮೊದಲೇ ವಾರ್ಡ್‌ಗಳ ಮೀಸಲು ಪ್ರಕಟಿಸಲು ಸರ್ಕಾರ ತಯಾರಿ ನಡೆಸಿದೆ.

‘ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್‌ ಜತೆ ಹೊಂದಾಣಿಕೆ ಇಲ್ಲ. ಪ್ರತ್ಯೇಕವಾಗಿಯೇ ಸೆಣಸಲಾಗುವುದು’ ಎಂದು ಜೆಡಿಎಸ್‌ ಈಗಾಗಲೇ ಸ್ಪಷ್ಟವಾಗಿ ತಿಳಿಸಿದೆ. ರಾಜ್ಯ ಸರ್ಕಾರದಲ್ಲಿ ಮೈತ್ರಿ ಇದ್ದರೂ ಕೆಲವು ಜಿಲ್ಲೆಗಳಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಜಿದ್ದಾಜಿದ್ದಿನ ಹೋರಾಟ ನಡೆಸುತ್ತಾರೆ. ಇದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಮೂಲಗಳು ಹೇಳಿವೆ.

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್‌ ಜತೆ ಹೊಂದಾಣಿಕೆ ಮಾಡಿಕೊಳ್ಳಬಹುದು ಎಂದು ಕಾಂಗ್ರೆಸ್‌ನ ಕೆಲವು ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಇದಕ್ಕೆ ಶಾಸಕಾಂಗ ಪಕ್ಷದ ಸಭೆಯಲ್ಲೇ ತೀವ್ರ ವಿರೋಧ ವ್ಯಕ್ತವಾಗಿದೆ.

ಈ ಹಿಂದೆ 2013 ರ ಫೆಬ್ರುವರಿಯಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ನಡೆದಿತ್ತು. ಆದರೆ, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಮೊದಲ ಸಭೆಗಳ ನಡೆದದ್ದು ಸೆಪ್ಟಂಬರ್‌ನಲ್ಲಿ. ಆದ್ದರಿಂದ ಅವಧಿ ಮುಕ್ತಾಯವನ್ನು ಸೆಪ್ಟಂಬರ್‌ ಎಂದೇ ಪರಿಗಣಿಸಬೇಕು ಎಂದು ಒತ್ತಡ ತಂತ್ರ ಅನುಸರಿಸಲು ಕಾಂಗ್ರೆಸ್‌ ನಿರ್ಧರಿಸಿದೆ.

ಮುಂದೂಡಿಕೆ ಸಾಧ್ಯವಿಲ್ಲ:ನೈಸರ್ಗಿಕ ವಿಕೋಪ ಸಂದರ್ಭ ಅಥವಾ ನ್ಯಾಯಾಲಯ ಸ್ಥಳೀಯ ಸಂಸ್ಥೆ ಸೂಪರ್‌ ಸೀಡ್‌ ಮಾಡಿ ಆಡಳಿತಾಧಿಕಾರಿ ನೇಮಕ ಮಾಡಿದಾಗ ಮಾತ್ರ ಚುನಾವಣೆ ಮುಂದೂಡಲು ಸಾಧ್ಯ. ಇಲ್ಲವಾದರೆ, ಯಾವುದೇ ಕಾರಣಕ್ಕೂ ಚುನಾವಣೆ ಮುಂದೂಡಲು ಆಗುವುದಿಲ್ಲ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಪಿ.ಎನ್‌.ಶ್ರೀನಿವಾಸಚಾರಿ ಹೇಳಿದ್ದಾರೆ.

ಚುನಾವಣೆಗೆ ಆಯೋಗದ ಸಿದ್ಧತೆ

116 ನಗರ ಸ್ಥಳೀಯ ಸಂಸ್ಥೆಗಳ 2,822 ವಾರ್ಡ್‌ಗಳಿಗೆ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಸಿದ್ಧತೆ ನಡೆಸಿದೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೋಲಾರ ಮತ್ತು ರಾಮನಗರ ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳನ್ನು ಬಿಟ್ಟು, ಉಳಿದ ಜಿಲ್ಲೆಗಳಲ್ಲಿರುವ ನಗರ ಸ್ಥಳೀಯ ಸಂಸ್ಥೆಗಳ ಅವಧಿ ಇದೇ ಸೆಪ್ಟೆಂಬರ್‌ಗೆ ಅಂತ್ಯವಾಗಲಿದೆ.

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪೂರ್ವಸಿದ್ಧತೆ ಮಾಡಿಕೊಳ್ಳುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ರಾಜ್ಯ ಚುನಾವಣಾ ಆಯೋಗ ಈಗಾಗಲೇ ಸುತ್ತೋಲೆ ಹೊರಡಿಸಿದೆ. ಮತದಾನ ಕೇಂದ್ರಗಳ ಪಟ್ಟಿ, ಚುನಾವಣೆ‌ ನಡೆಯುವ ವಾರ್ಡ್‌ಗಳಿಗೆ ಅನುಗುಣವಾಗಿ ಚುನಾವಣಾ ಅಧಿಕಾರಿ ಗಳ ಮತ್ತು ಸಿಬ್ಬಂದಿಯ ನೇಮಕ, ವಿದ್ಯುನ್ಮಾನ ಮತಯಂತ್ರಗಳ ಸಂಗ್ರಹಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದೂ ಆಯೋಗ ಸ್ಪಷ್ಟಪಡಿಸಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮೀಸಲು ಪಟ್ಟಿ ಪ್ರಕಟಿಸದ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್, ಇದೇ 31ರೊಳಗೆ ಕ್ರಮ ಕೈಗೊಳ್ಳುವಂತೆ ಇತ್ತೀಚೆಗೆ ನಿರ್ದೇಶನ ನೀಡಿದೆ. ಆಗಸ್ಟ್ ಮೊದಲ ವಾರದಲ್ಲಿ ಮೀಸಲು ಪಟ್ಟಿ ಪ್ರಕಟಿಸುವುದಾಗಿ ವಿಚಾರಣೆ ವೇಳೆ ಹಾಜರಿದ್ದ ಅಡ್ವೊಕೇಟ್ ಜನರಲ್ (ಎ.ಜಿ) ಉದಯ ಹೊಳ್ಳ ಹೇಳಿದ್ದರು.

* ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡಲು ಸಾಧ್ಯವಿಲ್ಲ. ಅವಧಿ ಮುಗಿಯುತ್ತಿದ್ದಂತೆ ಚುನಾವಣೆ ನಡೆಸಲಾಗುತ್ತದೆ

–ಪಿ.ಎನ್.ಶ್ರೀನಿವಾಸಾಚಾರಿ, ಆಯುಕ್ತರು, ರಾಜ್ಯ ಚುನಾವಣಾ ಆಯೋಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT