ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಂದೇ ಭಾರತ್‌ ದರ ಪರಿಷ್ಕರಣೆಗೆ ಚಿಂತನೆ: ವಿ. ಸೋಮಣ್ಣ

Published 29 ಜೂನ್ 2024, 14:53 IST
Last Updated 29 ಜೂನ್ 2024, 14:53 IST
ಅಕ್ಷರ ಗಾತ್ರ

ಬೆಂಗಳೂರು: ಕಾರ್ಮಿಕರು, ಕೃಷಿಕರು, ಬಡವರಿಗೂ ಅನುಕೂಲವಾಗುವಂತೆ ವಂದೇ ಭಾರತ್‌ ಸೇರಿದಂತೆ ವಿವಿಧ ರೈಲುಗಳ ದರ ಪರಿಷ್ಕರಣೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು.

ರೈಲ್ವೆ ಅಧಿಕಾರಿಗಳೊಂದಿಗೆ ಶನಿವಾರ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಪ್ರಧಾನಿ ನರೇಂದ್ರ ಮೋದಿಯವರ ಜೊತೆಗೆ ರೈಲ್ವೆ ಸಚಿವರು, ನಾನು ಬಗ್ಗೆ 2 ಗಂಟೆ ಚರ್ಚೆ ನಡೆಸಿದ್ದೇವೆ. ಅದರಲ್ಲಿ ರೈಲು ದರದ ಪರಿಷ್ಕರಣೆ ಮಾಡುವ ಚಿಂತನೆಯೂ ಸೇರಿತ್ತು. ಹಳ್ಳಿಗಳಿಂದ ಬರುವವರಿಗೂ ಉತ್ತಮ ಸೌಲಭ್ಯ ಇರುವ ವಂದೇ ಭಾರತ್‌ ರೈಲಿನಲ್ಲಿ ಸಂಚರಿಸಬೇಕು ಎಂಬ ಆಸೆ ಇರುತ್ತದೆ. ಅದು ನೆರವೇರುವ ಕಾಲ ಬರಲಿದೆ’ ಎಂದರು.

1997–98ರಲ್ಲಿ ಮಂಜೂರಾಗಿ ನನೆಗುದಿಗೆ ಬಿದ್ದಿದ್ದ ಬೆಂಗಳೂರು–ವೈಟ್‌ಫೀಲ್ಡ್‌ ನಡುವಿನ 38 ಕಿ.ಮೀ. ಕ್ವಾಡ್ರುಪ್ಲಿಂಗ್‌ (ನಾಲ್ಕು ಪಥ) ಯೋಜನೆಯನ್ನು ಮತ್ತೆ ಕೈಗೆತ್ತಿಕೊಂಡು ಕಾಮಗಾರಿಗೆ ವೇಗ ನೀಡಲಾಗಿದೆ. ದಂಡು–ಬೈಯಪ್ಪನಹಳ್ಳಿ ನಡುವೆ ಕಾಮಗಾರಿ ನಡೆಯುತ್ತಿದೆ. ₹ 492 ಕೋಟಿ ವೆಚ್ಚದ ಈ ಯೋಜನೆ 2025ರ ಜೂನ್‌ ಒಳಗೆ ಪೂರ್ಣಗೊಳಿಸುವ ಗುರಿ ಇದೆ ಎಂದು ವಿವರಿಸಿದರು.

ಹೆಜ್ಜಾಲ–ಚಾಮರಾಜನಗರ ಡಿಪಿಆರ್‌: ಹೆಜ್ಜಾಲ–ಚಾಮರಾಜನಗರ ನಡುವೆ 142 ಕಿ.ಮೀ. ಹೊಸ ರೈಲು ಮಾರ್ಗ ನಿರ್ಮಿಸಲು ಉದ್ದೇಶಿಸಲಾಗಿದೆ. ಎಲ್ಲಿಯೂ ಅರಣ್ಯ ಭೂಮಿ ಬರುವುದಿಲ್ಲ. ಒಟ್ಟು 692 ಎಕರೆ ಭೂಮಿ ಬೇಕಾಗಿದ್ದು, ರೈತರ ಜಮೀನುಗಳು ಮಧ್ಯೆ ಇವೆ. ಅವರಿಗೆ ಪರಿಹಾರ ನೀಡಿ ಭೂಸ್ವಾಧೀನ ಮಾಡಿಕೊಳ್ಳಲಾಗುವುದು. ಈ ಯೋಜನೆ ಬಗ್ಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಶೀಘ್ರ ಸಿದ್ಧಪಡಿಸಲಾಗುವುದು ಎಂದು ಮಾಹಿತಿ ನೀಡಿದರು.

ಬೆಂಗಳೂರು ಉಪನಗರ ರೈಲು ಯೋಜನೆ ಕಾಮಗಾರಿ ನಿಧಾನವಾಗಿದೆ. ಇದಕ್ಕೆ ವೇಗ ನೀಡುವುದಕ್ಕಾಗಿ ರೈಲ್ವೆ ಸಚಿವರೇ ಪರಿಶೀಲನೆ ಮಾಡಿ ಸೂಚನೆ ನೀಡಲಿದ್ದಾರೆ.
–ವಿ. ಸೋಮಣ್ಣ, ರೈಲ್ವೆ ಖಾತೆ ರಾಜ್ಯ ಸಚಿವ

ತುಮಕೂರು–ಚಿತ್ರದುರ್ಗ–ದಾವಣಗೆರೆ ಕಾರಿಡಾರ್‌ ಕಾಮಗಾರಿ ಬಹಳ ನಿಧಾನವಾಗಿ ನಡೆಯುತ್ತಿದ್ದು, ಅದಕ್ಕೆ ವೇಗ ನೀಡಲಾಗುತ್ತಿದೆ. 2026ಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ಬಂಗಾರಪೇಟೆ, ದೊಡ್ಡಬಳ್ಳಾಪುರ, ಕೆಂಗೇರಿ, ವೈಟ್‌ಫೀಲ್ಡ್‌, ಚನ್ನಪಟ್ಟಣ, ಕೆ.ಆರ್‌.ಪುರ, ರಾಮನಗರ ನಿಲ್ದಾಣಗಳನ್ನು ‘ಅಮೃತ್‌ ಭಾರತ್‌’ ಯೋಜನೆಯಡಿ ಮೇಲ್ದರ್ಜೆಗೆ ಏರಿಸುವ ಕಾರ್ಯ ಸಾಗಿದೆ. ನಗರದ 8 ರೈಲ್ವೆ ಮೇಲ್ಸೇತುವೆ, 4 ರೈಲ್ವೆ ಕೆಳಸೇತುವೆ ನಿರ್ಮಾಣವಾಗಿದೆ ಎಂದು ವಿವರ ನೀಡಿದರು.

ಕೇಂದ್ರದಿಂದಲೇ ಕಾಮಗಾರಿ

ರಾಜ್ಯದಲ್ಲಿ ₹1699 ಕೋಟಿ ವೆಚ್ಚದ 93 ರೈಲ್ವೆ ಮೇಲ್ಸೇತುವೆ/ಕೆಳಸೇತುವೆಗಳಿಗೆ ಅನುಮೋದನೆ ನೀಡಲಾಗಿತ್ತು. ಅದರಲ್ಲಿ 49 ಕಾಮಗಾರಿಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವೆಚ್ಚ ಹಂಚಿಕೆ ಆಧಾರದಲ್ಲಿ ಅನುಮೋದನೆಯಾಗಿದ್ದವು. ಅದರಂತೆ ರೈಲ್ವೆ ಇಲಾಖೆಯ ಪಾಲು ₹850 ಕೋಟಿ ರಾಜ್ಯದ ಪಾಲು ₹849 ಕೋಟಿ ಆಗಿತ್ತು. ಬಿಬಿಎಂಪಿ ವ್ಯಾಪ್ತಿ ಹೊರತುಪಡಿಸಿ ಉಳಿದ ಎಲ್ಲ ಕಾಮಗಾರಿಗಳ ವೆಚ್ಚವನ್ನು ರೈಲ್ವೆ ಇಲಾಖೆಯೇ ಭರಿಸಲು ನಿರ್ಧರಿಸಿದೆ. ಅದರಂತೆ 49 ಕಾಮಗಾರಿಗಳ ಪೈಕಿ 32 ಕಾಮಗಾರಿಗಳಿಗೆ ರಾಜ್ಯ ಸರ್ಕಾರದ ಹಂಚಿಕೆ ಒಪ್ಪಂದವನ್ನು ಹಿಂಪಡೆಯಲಾಗಿದೆ ಎಂದು ಸಚಿವ ವಿ. ಸೋಮಣ್ಣ ತಿಳಿಸಿದರು.

ಬೆಂಗಳೂರು ನಗರ ರೈಲ್ವೆ ಸಂಪರ್ಕ ಉತ್ತಮಗೊಳಿಸಲು ಸುಮಾರು ₹43 ಸಾವಿರ ಕೋಟಿ ಮೊತ್ತದಲ್ಲಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು. ಬೆಟ್ಟಹಲಸೂರು–ರಾಜಾನುಕುಂಟೆ ಹೊಸ ಮಾರ್ಗ ವೈಟ್‌ಫೀಲ್ಡ್‌–ಬಂಗಾರಪೇಟೆ ಕ್ವಾಡ್ರುಪ್ಲಿಂಗ್‌ ಬೈಯಪ್ಪನಹಳ್ಳಿ–ಹೊಸೂರು ಕ್ವಾಡ್ರುಪ್ಲಿಂಗ್‌ ಯಲಹಂಕ–ದೇವನಹಳ್ಳಿ ದ್ವಿಪ‍ಥ ಬೆಂಗಳೂರು–ತುಮಕೂರು ಕ್ವಾಡ್ರುಪ್ಲಿಂಗ್‌ ಚಿಕ್ಕಬಾಣಾವರ–ಹಾಸನ ಕ್ವಾಡ್ರುಪ್ಲಿಂಗ್‌ ಬೆಂಗಳೂರು–ಮೈಸೂರು ಕ್ವಾಡ್ರುಪ್ಲಿಂಗ್‌ ದೇವನಹಳ್ಳಿ–ಬಂಗಾರಪೇಟೆ ಡಬಲಿಂಗ್‌ ಸರ್ವೆಗಳು ನಡೆಯುತ್ತಿವೆ ಎಂದರು.

ವರ್ತುಲ ರೈಲು ಯೋಜನೆ ಡಿಪಿಆರ್‌ ಪ್ರಗತಿಯಲ್ಲಿ

ಮುಂದಿನ ಹಲವು ದಶಕಗಳ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು ನಗರಕ್ಕೆ 287 ಕಿ.ಮೀ. ಉದ್ದದ ವರ್ತುಲ ರೈಲ್ವೆ (ಸರ್ಕ್ಯುಲರ್‌ ರೈಲ್‌ ನೆಟ್‌ವರ್ಕ್‌) ವ್ಯವಸ್ಥೆಗೆ ನೀಲನಕ್ಷೆ ರೂಪಿಸಲಾಗಿದೆ ಎಂದು ಸಚಿವ ವಿ. ಸೋಮಣ್ಣ ತಿಳಿಸಿದರು.

ನಿಡುವಂದ–ವಡ್ಡರಹಳ್ಳಿ–ದೇವನಹಳ್ಳಿ–ಮಾಲೂರು–ಹೀಲಲಿಗೆ–ಹೆಜ್ಜಾಲ–ಸೋಲೂರು–ನಿಡುವಂದ ಸಂಪರ್ಕಿಸುವ ಈ ಯೋಜನೆಗೆ ₹23 ಸಾವಿರ ಕೋಟಿ ವೆಚ್ಚ ತಗಲುವ ನಿರೀಕ್ಷೆ ಇದ್ದು ಡಿಪಿಆರ್‌ ಪ್ರಗತಿಯಲ್ಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT