ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನ 44 ಮುಖಂಡರು, ಕಾರ್ಯಕರ್ತರಿಗೆ ನಿಗಮ–ಮಂಡಳಿ ಅಧ್ಯಕ್ಷ ಸ್ಥಾನ

Published 28 ಫೆಬ್ರುವರಿ 2024, 23:30 IST
Last Updated 28 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭೆ ಚುನಾವಣೆಗೂ ಮೊದಲೇ, ಕಾಂಗ್ರೆಸ್‌ನ 44 ಮುಖಂಡರು ಹಾಗೂ ಕಾರ್ಯಕರ್ತರಿಗೆ  ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ಭಾಗ್ಯ ಸಿಕ್ಕಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ನೇಮಕಾತಿ ಪಟ್ಟಿಗೆ ಬುಧವಾರ ಅನುಮೋದನೆ ನೀಡಿದ್ದು, ಆಯಾ ಇಲಾಖೆಗಳಿಗೆ ರವಾನೆಯಾಗಿದೆ. ಗುರುವಾರ (ಫೆ.29) ಇಲಾಖೆಗಳಿಂದ ಪ್ರತಿಯೊಬ್ಬರಿಗೂ ವೈಯುಕ್ತಿಕವಾಗಿ ನೇಮಕ ಆದೇಶ ರವಾನೆಯಾಗಲಿದೆ ಎಂದು ಮುಖ್ಯಮಂತ್ರಿ ಸಚಿವಾಲಯದ ಮೂಲಗಳು ತಿಳಿಸಿವೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಬಹುಮತ ಪಡೆದು ಅಧಿಕಾರಕ್ಕೆ ಬಂದಿತ್ತು. 135 ಸ್ಥಾನ ಗೆದ್ದು ಅಧಿಕಾರ ಹಿಡಿದಿದ್ದರಿಂದಾಗಿ, ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ ದೊಡ್ಡದಿತ್ತು.  ಸಚಿವಗಿರಿ ಕೈತಪ್ಪಿದ ಶಾಸಕರ ಅಸಮಾಧಾನ ತಣಿಸಲು ನಿಗಮ–ಮಂಡಳಿಗಳಿಗೆ ನೇಮಕ ಮಾಡುವ ಭರವಸೆ ನೀಡುತ್ತಾ ಬರಲಾಗಿತ್ತು. 32ರಿಂದ 35 ಶಾಸಕರಿಗೆ ಅವಕಾಶ ನೀಡುವ ಕುರಿತು ಚರ್ಚೆ ನಡೆದಿತ್ತು. ಸಾಕಷ್ಟು ಸಮಯದ ನಂತರ ಪಟ್ಟಿ ಸಿದ್ಧಪಡಿಸಲಾಗಿತ್ತು. ಶಾಸಕರ ಜತೆಗೇ ಪಕ್ಷದ ಕಾರ್ಯಕರ್ತರಿಗೂ ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಸೂಚಿಸಿದ್ದರಿಂದ ಮತ್ತೆ ವಿಳಂಬವಾಗಿತ್ತು. 

ನಂತರ ಶಾಸಕರು ಹಾಗೂ ಪಕ್ಷದ ಕಾರ್ಯಕರ್ತರನ್ನು ಒಳಗೊಂಡ ಪಟ್ಟಿ ಸಿದ್ಧಪಡಿಸಲಾಗಿತ್ತು. 34 ಶಾಸಕರಿಗೆ ನಿಗಮ–ಮಂಡಳಿ ಅಧ್ಯಕ್ಷ ಸ್ಥಾನದ ಜತೆಗೆ ಮಂತ್ರಿಗಿರಿಯ ಸೌಲಭ್ಯ ನೀಡಲಾಗಿತ್ತು.

37 ಕಾರ್ಯಕರ್ತರ ಪಟ್ಟಿ ಸಿದ್ಧವಾಗಿದ್ದರೂ ಅದು ಬಿಡುಗಡೆಯಾಗಿರಲಿಲ್ಲ. ಮುಖ್ಯಮಂತ್ರಿ ಹಾಗೂ ಸಚಿವರ ಗಮನಕ್ಕೆ ತರದೆ ಕೆಲ ಹೆಸರು ಸೇರ್ಪಡೆಯಾಗಿವೆ ಎಂಬ ಅಸಮಾಧಾನ ಸ್ಫೋಟವಾದ ಕಾರಣ ಪಟ್ಟಿ ತಡೆಹಿಡಿಯಲಾಗಿತ್ತು. ಪಟ್ಟಿ ಸಿದ್ಧಪಡಿಸುವ ಮುನ್ನ ತಮ್ಮ ಅಭಿಪ್ರಾಯ ಕೇಳಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ, ಸಹಕಾರ ಸಚಿವ ಕೆ.ಎನ್. ರಾಜಣ್ಣ ಸೇರಿದಂತೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದರು. 17ಕ್ಕೂ ಹೆಚ್ಚು ಸಚಿವರು ತಮ್ಮ ಇಲಾಖೆ ವ್ಯಾಪ್ತಿಯ ನಿಗಮ–ಮಂಡಳಿಗಳಿಗೆ ತಮ್ಮನ್ನು ಕೇಳದೇ ನೇಮಕ ಮಾಡುತ್ತಿರುವುದು ಸರಿಯಲ್ಲ ಆಕ್ಷೇಪ ವ್ಯಕ್ತಪಡಿಸಿದ್ದರು.  ಕೊನೆಗೂ ಒಂದೂವರೆ ತಿಂಗಳ ನಂತರ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ನಿಗಮ–ಮಂಡಳಿ ಅಧ್ಯಕ್ಷಗಾದಿ ದೊರೆತಿದೆ. 

ಎಚ್‌.ಎಂ. ರೇವಣ್ಣ 
ಎಚ್‌.ಎಂ. ರೇವಣ್ಣ 

‘ಗ್ಯಾರಂಟಿ’ ಅನುಷ್ಠಾನ ಸಮಿತಿಗೆ ಎಚ್.ಎಂ.ರೇವಣ್ಣ ಅಧ್ಯಕ್ಷ:

ಸರ್ಕಾರದ ಐದು ಗ್ಯಾರಂಟಿ ಯೋಜನೆಯಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ಮಾಜಿ ಸಚಿವ ಎಚ್.ಎಂ.ರೇವಣ್ಣ ಅವರನ್ನು ನೇಮಕ ಮಾಡಲಾಗಿದೆ. ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಲಾಗಿದೆ.  ಉಪಾಧ್ಯಕ್ಷರಾಗಿ ಮೆಹರೂಜ್‌ ಖಾನ್‌ ಪುಷ್ಪಾ ಅಮರನಾಥ್‌ ಎಸ್.ಆರ್.ಪಾಟೀಲ ಮತ್ತು ಸೂರಜ್ ಹೆಗ್ಡೆ ಅವರ ಹೆಸರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT