ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೂಲನಿಧಿ: ನಿವಾಸಿಗಳ ಸಂಘಕ್ಕೆ ವರ್ಗಾಯಿಸಲು ಕೆ–ರೇರಾ ಆದೇಶ

Published 25 ಅಕ್ಟೋಬರ್ 2023, 23:57 IST
Last Updated 25 ಅಕ್ಟೋಬರ್ 2023, 23:57 IST
ಅಕ್ಷರ ಗಾತ್ರ

ಬೆಂಗಳೂರು: ಅಪಾರ್ಟ್‌ಮೆಂಟ್‌ ಅಸೋಸಿಯೇಷನ್‌ಗಳಿಗೆ ‘ಮೂಲನಿಧಿ’ಯನ್ನು (ಕಾರ್ಪಸ್‌ ಫಂಡ್‌) 60 ದಿನಗಳಲ್ಲಿ ವರ್ಗಾಯಿಸಬೇಕು ಎಂದು ಬಿಲ್ಡರ್‌ಗಳಿಗೆ ಕರ್ನಾಟಕ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರ
(ಕೆ–ರೇರಾ) ಆದೇಶಿಸಿದೆ.

ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿರುವ ‘ಅಸೋಸಿಯೇಷನ್‌ ಆಫ್‌ ಎ ಸೀನಿಯರ್ಸ್’ ನಿವಾಸಿಗಳ ಸಂಘ ದಾಖಲಿಸಿದ್ದ ಪ್ರಕರಣದಲ್ಲಿ, ಕಾರ್ಪಸ್‌ ಫಂಡ್‌ ಅನ್ನು ನಿವಾಸಿಗಳ ಸಂಘಕ್ಕೆ ವರ್ಗಾಯಿಸುವಂತೆ ಸೂಚಿಸಿದೆ.

ಕರ್ನಾಟಕ ರಿಯಲ್‌ ಎಸ್ಟೇಟ್‌ (ನಿಯಮಗಳು ಮತ್ತು ಅಭಿವೃದ್ಧಿ) ಕಾಯ್ದೆ 2016 ಪ್ರಕಾರ, ಪ್ರಮೋಟರ್‌ ಅಥವಾ ಬಿಲ್ಡರ್‌ಗಳು ಮಾಲೀಕರ ಸಂಘ ಸ್ಥಾಪನೆಗೆ ಉತ್ತೇಜಿಸಬೇಕು. ಆ ಸಂಘಕ್ಕೆ ಕಾರ್ಪಸ್‌ ಫಂಡ್‌ ಅನ್ನು ವರ್ಗಾಯಿಸಬೇಕು. ಆದರೆ, ಬಹುತೇಕ ಬಿಲ್ಡರ್‌ಗಳು ನಿಧಿಯನ್ನು ಸಂಘಗಳಿಗೆ ವರ್ಗಾಯಿಸಿಲ್ಲ. ಇದನ್ನು ಪಡೆಯಲು ಸಂಘಗಳು ಹೋರಾಟ ಮಾಡುತ್ತಿವೆ. ಈ ಐತಿಹಾಸಿಕ ತೀರ್ಪು ಮುಂದಿನ ಪ್ರಕರಣಗಳಲ್ಲೂ ನ್ಯಾಯ ಪಡೆಯಲು ದಾರಿಮಾಡಿಕೊಟ್ಟಿದೆ ಎಂದು ನಿವಾಸಿಗಳ ಸಂಘಗಳ ಪ್ರತಿನಿಧಿಗಳು ಹೇಳಿದ್ದಾರೆ.

‘ಮಾಲೀಕರ ಸಂಘಗಳು ಕಾರ್ಪಸ್‌ ಫಂಡ್‌ ಅನ್ನು ಪಡೆಯಲು ಅನುವಾಗುವಂತೆ ಪ್ರಥಮ ಬಾರಿಗೆ ಇಂತಹ ಸ್ಪಷ್ಟ ಆದೇಶವನ್ನು ನೀಡಲಾಗಿದೆ. ಹಲವು ಪ್ರಕರಣಗಳಲ್ಲಿ ನಿಧಿ ಕೋಟ್ಯಂತರ ರೂಪಾಯಿಗಳಿದ್ದು, ಪ್ರಮೋಟರ್‌ಗಳು ಅಥವಾ ಬಿಲ್ಡರ್‌ಗಳು ನಿಧಿಯನ್ನು ವರ್ಗಾಯಿಸಲು ವಿಳಂಬ ಮಾಡುತ್ತಾರೆ. ಇಂತಹ ಸಂದರ್ಭಗಳಲ್ಲಿ ಈ ಪ್ರಕರಣದ ತೀರ್ಪನ್ನು ಉಲ್ಲೇಖಿಸಬಹುದು. ಇದರಿಂದ ಪ್ರಕ್ರಿಯೆ ಖಂಡಿತಾ ಸುಗಮವಾಗುತ್ತದೆ’ ಎಂದು ಫೋರಂ ಫಾರ್‌ ಪೀಪಲ್ಸ್‌ ಕಲೆಕ್ಟೀವ್‌ ಎಫರ್ಟ್ಸ್‌ನ ಪ್ರಧಾನ ಕಾರ್ಯದರ್ಶಿ ಎಂ.ಎಸ್‌. ಶಂಕರ್‌ ಹೇಳಿದರು.

‘ಕಾರ್ಪಸ್‌ ಫಂಡ್‌ ವರ್ಗಾವಣೆ ಮಾತ್ರವಲ್ಲ, ತೀರ್ಪಿನಲ್ಲಿನ ಅವಲೋಕನ ಹೊಸ ಚರ್ಚೆಯನ್ನು ಹುಟ್ಟುಹಾಕಬಲ್ಲವು ಮತ್ತು ಇವೆಲ್ಲ ಮಾಲೀಕರಿಗೆ ಸಹಕಾರಿಯಾಗಲಿವೆ’ ಎಂದು  ಕರ್ನಾಟಕ ಹೋಮ್‌ ಬೈಯರ್ಸ್‌ ಫೋರಂನ ಸಂಚಾಲಕ ಧನಂಜಯ ಪದ್ಮನಾಭಾಚಾರ್‌ ಅಭಿಪ್ರಾಯಪಟ್ಟರು.

‘ವಿಭಾಗವಾಗದ ಭೂಮಿಯ ಷೇರುಗಳನ್ನು ವರ್ಗಾವಣೆ ಮಾಡದಿರುವುದನ್ನು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಮನೆ ಖರೀದಿಸುವವರಿಗೆ ಮತ್ತು ಸಂಘಗಳಿಗೆ ಕ್ರಯಪತ್ರ ವರ್ಗಾಯಿಸುವ ಸಂದರ್ಭದಲ್ಲಿ ಭೂಮಿ ಮೌಲ್ಯ ಅತ್ಯಂತ ಪ್ರಮುಖವಾದದ್ದು. ಈ ವಿಷಯದ ಬಗ್ಗೆ ಕೆ–ರೇರಾ ಪರಾಮರ್ಶಿಸಿರುವುದು ಸಂತಸಕರ’ ಎಂದು ಹೇಳಿದರು.

‘ಕರ್ನಾಟಕ ಸೊಸೈಟೀಸ್‌ ನೋಂದಣಿ ಕಾಯ್ದೆ ಅಥವಾ ಕರ್ನಾಟಕ ಅಪಾರ್ಟ್‌ಮೆಂಟ್‌ ಓನರ್‌ಶಿಪ್‌ ಕಾಯ್ದೆ ಎರಡೂ ಇದ್ದು, ಇದರಲ್ಲಿ ಯಾವ ಕಾಯ್ದೆಯಡಿ ಸಂಘಗಳನ್ನು ನೋಂದಣಿ ಮಾಡಿಸಬೇಕು ಎಂಬ ಗೊಂದಲದಲ್ಲಿ ಹಲವರು ಇದ್ದಾರೆ. ಪ್ರಕ್ರಿಯೆಯನ್ನು ವಿಳಂಬಗೊಳಿಸಲು ಈ ಗೊಂದಲವನ್ನು ಬಿಲ್ಡರ್‌ಗಳು ಅವಕಾಶವಾಗಿ ಬಳಸಿಕೊಂಡಿದ್ದಾರೆ. ಕರ್ನಾಟಕ ಅಪಾರ್ಟ್‌ಮೆಂಟ್‌ ಓನರ್‌ಶಿಪ್‌ ಕಾಯ್ದೆಯಡಿ ರಚನೆಯಾದ ಸಂಘಗಳಿಗೆ ಕಾನೂನಾತ್ಮಕ ಬಲವನ್ನು ನೀಡಲು ಈ ಆದೇಶ ನೆರವಾಗಲಿದೆ’ ಎಂದು ಶಂಕರ್‌ ಹೇಳಿದರು.

‘ಗುಜರಾತ್, ಒಡಿಶಾ ಸೇರಿದಂತೆ ಹಲವು ರಾಜ್ಯಗಳು ಸಂಘಗಳು ನೋಂದಣಿಗೆ ಸ್ಪಷ್ಟ ಮಾರ್ಗಸೂಚಿಗಳನ್ನು ಹೊಂದಿವೆ. ಹಲವು ಬಾರಿ ಈ ವಿಚಾರವನ್ನು ಚರ್ಚೆ ಮಾಡಿದ್ದರೂ, ಈ ಬಗ್ಗೆ ಯಾವುದೇ ಸರ್ಕಾರಿ ಆದೇಶವಾಗಿಲ್ಲ. ಸರ್ಕಾರ ಹಾಗೂ ಕೆ–ರೇರಾ ಈ ಬಗ್ಗೆ ಆದೇಶ ಹೊರಡಿಸಿ ಮನೆ ಖರೀದಿದಾರರಿಗೆ ನೆರವಾಗಬೇಕು’ ಎಂದು ಪದ್ಮನಾಭಾಚಾರ್‌ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT