ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು ಬೀದಿಗೆ ತಂದ ಕೋವಿಡ್‌| ದೇವರ ಸೇವಕರಿಗೂ ದೈನೇಸಿ ಸ್ಥಿತಿ

ಕೋವಿಡ್‌ ಬಳಿಕ ಕಂಗಾಲಾಗಿವೆ ಕುಟುಂಬಗಳು l ಅನ್ಯರ ಅವಲಂಬನೆಗೆ ಕೈಚಾಚಬೇಕಾದ ಅರ್ಚಕರು
Last Updated 27 ಸೆಪ್ಟೆಂಬರ್ 2021, 18:21 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಕಾಲದ ಕಷ್ಟಕೋಟಲೆಗಳು ದೇವರ ಪೂಜಾ ಕೈಂಕರ್ಯ ನೆರವೇರಿಸುವ ಅರ್ಚಕ ಸಮುದಾಯವನ್ನು, ಮಸೀದಿಗಳ ಮೌಲ್ವಿಗಳನ್ನೂ ಕಾಡಿವೆ.ಭಕ್ತರಿಗೆ ದೇವರು ಹರಸಲೆಂದು ಪ್ರಾರ್ಥಿಸುವವರು ಕೂಡಾ, ‘ಭಗವಂತನೂ ನಮ್ಮ ಕಷ್ಟಕ್ಕೆ ಒದಗಲಿಲ್ಲವಲ್ಲ’ ಎಂದು ಕಣ್ಣಿರಿಡುವಂತಹ ಕರುಣಾಜನಕ ಸ್ಥಿತಿಯನ್ನು ಎದುರಿಸುತ್ತಿದ್ದಾರೆ.

ದಶಕಗಳಿಂದ ಕೊರಟಗೆರೆ ಚನ್ನರಾಯನದುರ್ಗದ ಮುರಹರಿಸ್ವಾಮಿ ದೇವಸ್ಥಾನದ ಅರ್ಚಕ ವೃತ್ತಿಯನ್ನು ಮಾಡಿಕೊಂಡು ಬಂದಿದ್ದ ಕುಟುಂಬ ಜನಾರ್ದನ ಅವರದು. ಜನಾರ್ಧನ ಅವರು ಕೋವಿಡ್‌ನಿಂದ ಕೊನೆಯುಸಿರೆಳೆದರು. ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜಾರಿಯಾಗಿದ್ದ ಅವರ ತಂದೆಯವರು ಇದಾಗಿ ಅಲ್ಪದಿನಗಳಲ್ಲೇ ರಸ್ತೆ ಅಪಘಾತದಲ್ಲಿ ಅಸುನೀಗಿದರು. ವರ್ಷಕ್ಕೆ ತಸ್ತೀಕ್‌ ರೂಪದಲ್ಲಿ ಸಿಗುವ ₹ 48 ಸಾವಿರ ಹಾಗೂ ದಕ್ಷಿಣೆ ಕಾಸಿನಲ್ಲೇ ದೇವಸ್ಥಾನದ ವೆಚ್ಚಗಳನ್ನು ಭರಿಸಿ ಸಂಸಾರದ ಭಾರವನ್ನೂ ಅವರಿಬ್ಬರು ನಿಭಾಯಿಸುತ್ತಿದ್ದರು. ಕುಟುಂಬದ ಆಧಾರ ಸ್ತಂಭಗಳಂತಿದ್ದ ತಂದೆ ಹಾಗೂ ಮಗನನ್ನು ಕಳೆದುಕೊಂಡ ಕುಟುಂಬಕ್ಕೆ ದಿಕ್ಕೇ ತೋಚದ ಸ್ಥಿತಿ ಎದುರಾಗಿದೆ.

‘ಜನಾರ್ದನ ಅವರ ಪುತ್ರ ಈ ವರ್ಷವಷ್ಟೇ ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸಿದ್ದು, ಅವನ ಶೈಕ್ಷಣಿಕ ಭವಿಷ್ಯವೂ ತೂಗುಯ್ಯಾಲೆಯಲ್ಲಿದೆ. ಈ ಕುಟುಂಬಕ್ಕೆ ಸರ್ಕಾರದಿಂದ ಬಿಡಿಗಾಸಿನ ಪರಿಹಾರವೂ ಸಿಕ್ಕಿಲ್ಲ. ಎರಡು ವರ್ಷಗಳಿಂದ ತಸ್ತೀಕ್‌ ಹಣವೂ ಬಿಡುಗಡೆಯಾಗಿಲ್ಲ. ಪೂಜಾ ಕೈಂಕರ್ಯ ನಿಲ್ಲಿಸಲಾಗದೇ, ಜನಾರ್ದನ ಅವರ ಸಹೋದರ ಮಾರುತಿ ಬೆಂಗಳೂರಿನಲ್ಲಿ ಹೊಂದಿದ್ದ ಉದ್ಯೋಗವನ್ನು ತೊರೆದು ಊರು ಸೇರಿದ್ದಾರೆ. ಅವರ ತಾಯಿಯೂ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಜೀವನೋಪಾಯಕ್ಕೆ ಅನ್ಯ ಕೆಲಸವನ್ನೂ ಮಾಡಲಾಗದ ಸ್ಥಿತಿ ಅವರದ್ದು’ ಎಂದು ಈ ಕುಟುಂಬವನ್ನು ಹತ್ತಿರದಿಂದ ಬಲ್ಲವರೊಬ್ಬರು ತಿಳಿಸಿದರು.

ಕೋಲಾರ ಜಿಲ್ಲೆಯ ಕೆಜಿಎಫ್‌ನ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯದ ಅರ್ಚಕ ಸಹೋದರರಾದ ಹರಿ (54) ಹಾಗೂ ವೆಂಕಟೇಶ್‌ (43) ಅವರಿಬ್ಬರೂ ಕೋವಿಡ್‌ ಸಂದರ್ಭದಲ್ಲಿ ಅಸುನೀಗಿದ್ದಾರೆ. ಇದೇ ಕೊರಗಿನಲ್ಲಿ ಅವರ ತಾಯಿಯೂ ಕೊನೆಯುಸಿರೆಳೆದಿದ್ದಾರೆ. ವೆಂಕಟೇಶ್‌ ಅವರ ಮಗ ಇನ್ನೂ ಪ್ರೌಢಶಾಲೆಯ ವಿದ್ಯಾರ್ಥಿ. ಹಿರಿಯ ಮಗಳು ಈ ವರ್ಷ ಪಿ.ಯು ಓದು ಪೂರೈಸಿದ್ದಾರೆ. ಕುಟುಂಬವು ಜೀವನ ನಿರ್ವಹಣೆಗೂ ಸಮಸ್ಯೆ ಎದುರಿಸುತ್ತಿದೆ’ ಎಂದು ತಾಲ್ಲೂಕಿನ ಅರ್ಚಕರೊಬ್ಬರು ತಿಳಿಸಿದರು.

ಮುಜರಾಯಿ ಇಲಾಖೆಯ ಸಿ ವರ್ಗದ ದೇವಾಲಯಗಳ ಬಹುತೇಕ ಅರ್ಚಕರ ಹಾಗೂ ಸಿಬ್ಬಂದಿಯ ಕತೆ ಇದಕ್ಕಿಂತ ಭಿನ್ನವಾಗಿಲ್ಲ ಎನ್ನುತ್ತಾರೆ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ನೌಕರರ ಸಂಘದ ಅಧ್ಯಕ್ಷ ಶ್ರೀವತ್ಸ.

‘ಸಿ –ವರ್ಗದ ದೇವಸ್ಥಾನಗಳ ನಿರ್ವಹಣೆಗೆ ಸರ್ಕಾರ ನೀಡುವ ತಸ್ತೀಕ್‌ನ ಬಹುಪಾಲು ಪೂಜಾ ಪರಿಕರಗಳ ವೆಚ್ಚಕ್ಕೇ ಸರಿಹೊಂದುತ್ತದೆ. ಈ ಹಣ ಬಿಡುಗಡೆಗೂ ಅಧಿಕಾರಿಗಳಿಗೆ ಲಂಚ ನೀಡಬೇಕು. ಈ ದೇವಾಲಯಗಳ ಅರ್ಚಕರಿಗೆ ಸಿಗುವ ದಕ್ಷಿಣೆಯೂ ಅಷ್ಟಕ್ಕಷ್ಟೇ. ದೇವಾಲಯಗಳಿಗೆ ಭಕ್ತರ ಪ್ರವೇಶಕ್ಕೆ ತಿಂಗಳಾನುಗಟ್ಟಲೆ ನಿರ್ಬಂಧ ಹೇರಿ, ಧಾರ್ಮಿಕ ಸೇವೆಗಳನ್ನು ಸ್ಥಗಿತಗೊಳಿಸಿದ್ದ ಸಂದರ್ಭದಲ್ಲಿ ಅರ್ಚಕರು ಹಾಗೂ ದೇವಾಲಯದ ಇತರ ಸಿಬ್ಬಂದಿ ಎದುರಿಸಿದ ಕಷ್ಟ ದೇವರಿಗೇ ಪ್ರೀತಿ’ ಎಂದು ಶ್ರೀವತ್ಸ ವಿವರಿಸಿದರು.

‘ಕೋವಿಡ್‌ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ ಅರ್ಚಕರಿಗೆ ತಲಾ ₹ 3 ಸಾವಿರ ಪರಿಹಾರ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿತು. ಈಗಲೂ ಬಹುತೇಕ ಅರ್ಚಕರ ಕುಟುಂಬಗಳಿಗೆ ಪರಿಹಾರ ತಲುಪಿಲ್ಲ. ಎ– ವರ್ಗದ ದೇವಾಲಯಗಳ ಮೂಲಕ ಸಿ–ವರ್ಗದ ದೇವಸ್ಥಾನಗಳ ಅರ್ಚಕರು ಮತ್ತು ಸಿಬ್ಬಂದಿಗೆ ಧವಸ ಧಾನ್ಯಗಳ ಕಿಟ್‌ ನೀಡುವುದಾಗಿ ಸರ್ಕಾರ ಹೇಳಿತು. 10ಕ್ಕೂ ಅಧಿಕ ಜಿಲ್ಲೆಗಳ ಅರ್ಚಕರಿಗೆ ಈ ಸವಲತ್ತೂ ಸಿಕ್ಕಿಲ್ಲ’ ಎಂದು ಅವರು ದೂರಿದರು.

ಮುಜರಾಯಿ ಇಲಾಖೆಗೆ ಸೇರದ ದೇವಾಲಯಗಳ ಅರ್ಚಕರಿಗೆ ಸರ್ಕಾರದಿಂದಲೂ ಸವಲತ್ತೂ ಸಿಕ್ಕಿಲ್ಲ. ಅಂತಹ ಕೆಲವು ದೇವಾಲಯಗಳ ಅರ್ಚಕರ ಪರಿಸ್ಥಿತಿಯೂ ಚಿಂತಾಜನಕವಾಗಿದೆ.

‘10 ಸಾವಿರಕ್ಕೂ ಅಧಿಕ ಅರ್ಚಕರಿಗೆ ಸಿಕ್ಕಿಲ್ಲ ಪರಿಹಾರ’

‘ರಾಜ್ಯದಲ್ಲಿ ಮುಜರಾಯಿ ಇಲಾಖೆಗೆ ಸೇರಿದ 32,562 ದೇವಸ್ಥಾನಗಳಿವೆ. ಸಿ ಗುಂಪಿನ ದೇವಸ್ಥಾನಗಳ 28,900 ಅರ್ಚಕ ಕುಟುಂಬಗಳು ಕೋವಿಡ್‌ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದು, ಅವರಿಗೆ ತಲಾ ₹ 3 ಸಾವಿರ ಪರಿಹಾರ ಬಿಡುಗಡೆಗೆ ಸರ್ಕಾರ ₹ 10.81 ಕೋಟಿ ಮಂಜೂರು ಮಾಡಿತ್ತು. ಅದರಲ್ಲಿ ₹ 8.67 ಕೋಟಿ ಬಿಡುಗಡೆಯಾಗಿದೆ. ಇದುವರೆಗೆ 16,300 ಅರ್ಚಕರ ಕುಟುಂಬಗಳಿಗೆ ಪರಿಹಾರ ಒದಗಿಸಲಾಗಿದ್ದು ಇದಕ್ಕಾಗಿ ₹ 5.83 ಕೋಟಿ ಬಳಸಲಾಗಿದೆ. ಇನ್ನುಳಿದ ಕುಟುಂಬಗಳಿಗೆ ಇನ್ನಷ್ಟೇ ಪರಿಹಾರ ತಲು‍ಪಬೇಕಿದೆ’ ಎಂದು ಮುಜರಾಯಿ ಇಲಾಖೆಯ ಮೂಲಗಳು ತಿಳಿಸಿವೆ.

‘ಮಾಸ್ಕ್‌ ಖರೀದಿಗೂ ಹಣವಿಲ್ಲ’

ಅರ್ಚಕರು ಹಾಗೂ ದೇವಸ್ಥಾನಗಳ ಸಿಬ್ಬಂದಿಯ ಆಪತ್ತಿಗೆ ಒದಗುವ ಯಾವುದೇ ವ್ಯವಸ್ಥೆಯನ್ನೂ ಸರ್ಕಾರ ಕಲ್ಪಿಸಿಲ್ಲ. ಬಹುತೇಕರಿಗೆ ಸ್ವಂತ ಸೂರಿಲ್ಲ. ಪಿಂಚಣಿ ವ್ಯವಸ್ಥೆಯೂ ಇಲ್ಲ. ಅನೇಕ ಕುಟುಂಬಗಳು ಒಪ್ಪೊತ್ತಿನ ಕೂಳಿಗೂ ತತ್ವಾರ ಎದುರಿಸುತ್ತಿವೆ. ಸರ್ಕಾರವೇ ಅವರಿಗೆ ನೆರವಾಗಬೇಕು

– ಶ್ರೀವತ್ಸ, ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ,‌ ಆಗಮಿಕರ ಮತ್ತು ನೌಕರರ ಸಂಘ

‘ಕಂಗೆಟ್ಟ ಕುಟುಂಬಗಳಿಗೆ ನೆರವು ಸಿಗಲಿ’

ಅರ್ಚಕರು ತೀರಿಹೋದಾಗ ಅವರ ಕುಟುಂಬ ಬೀದಿಗೆ ಬೀಳುವಂತಹ ಸ್ಥಿತಿ ಇದೆ. ಈ ರೀತಿ ಸಂಕಷ್ಟಕ್ಕೆ ಸಿಲುಕಿದ ಕುಟುಂಬಗಳನ್ನು ಗುರುತಿಸಿ ಸರ್ಕಾರ ಅವರ ಬದುಕಿಗೆ ಭದ್ರತೆ ಒದಗಿಸಬೇಕು.

– ಗುರು ದೀಕ್ಷಿತ್‌, ಸಂಚಾಲಕರು, ಕರ್ನಾಟಕ ಮುಜರಾಯಿ, ದೇವಾಲಯಗಳ ಅರ್ಚಕರ ಮತ್ತು ಆಗಮಿಕರ ಸಂಘ

ಮೌಲ್ವಿಗಳದೂ ಅಸಹಾಯಕ ಸ್ಥಿತಿ

ಲಾಕ್‌ಡೌನ್‌ ಸಂದರ್ಭದಲ್ಲಿ ಮಸೀದಿಗಳ ಮೌಲ್ವಿಗಳೂ ಜೀವನ ನಿರ್ವಹಣೆಗೆ ತ್ರಾಸಪಟ್ಟಿದ್ದಾರೆ. ವರಮಾನ ಕಡಿಮೆ ಇರುವ ಸಣ್ಣ ಪುಟ್ಟ ಮಸೀದಿಗಳ ಮೌಲ್ವಿಗಳಂತೂ ನೆರವಿಗಾಗಿ ಅನ್ಯರ ಬಳಿ ಕೈಚಾಚಲೂ ಆಗದೇ, ತಮ್ಮ ಕಷ್ಟವನ್ನು ಹೇಳಿಕೊಳ್ಳಲು ಆಗದೇ ಪಡಿಪಾಟಲು ಅನುಭವಿಸಿದ್ದಾರೆ.

‘ಮಸೀದಿ ಅಭಿವೃದ್ಧಿಗೆ ಸಂಗ್ರಹಿಸುವ ದೇಣಿಗೆಯಿಂದ ಬರುವ ಪಾಲು, ಟ್ರಸ್ಟ್ ನೀಡುವ ಹಣ ಹಾಗೂ ಜನ ಹದಿಯ (ಉಡುಗೊರೆ) ರೂಪದಲ್ಲಿ ನೀಡುವ ಹಣದಿಂದಲೇ ನಾವು ಕುಟುಂಬ ನಿರ್ವಹಿಸಬೇಕಿದೆ. ಮಸೀದಿಗಳು ಮುಚ್ಚಿದ್ದಾಗ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸುವುದಕ್ಕೂ ಸಮಸ್ಯೆ ಆಯಿತು. ನಮ್ಮ ಸಂಕಷ್ಟವನ್ನು ಯಾರ ಬಳಿ ಹೇಳಿಕೊಳ್ಳುವಂತೆಯೂ ಇರಲಿಲ್ಲ’ ಎಂದು ಲಕ್ಕಸಂದ್ರದ ಅಲಿ ಅಬುಲ್‌ ಹಸ್ನೈನ್‌ ಮಸೀದಿಯ ಮೌಲ್ವಿ ಎಚ್‌.ಎಸ್‌.ನಜೀರ್‌ ಅಹ್ಮದ್‌ ತಿಳಿಸಿದರು.

‘ಬಹುತೇಕ ಮೌಲ್ವಿಗಳು ಆರ್ಥಿಕ ಬಿಕ್ಕಟ್ಟು ಎದುರಿಸಿದ್ದಾರೆ. ಮಸೀದಿ ಟ್ರಸ್ಟ್‌ಗಳು ಅಲ್ಪಸ್ವಲ್ಪ ನೆರವಾಗಿವೆ. ಸರ್ಕಾರದಿಂದ ಸಹಾಯ ಸಿಗಲಿಲ್ಲ’ ಎಂದು ಇನ್ನೊಬ್ಬ ಮೌಲ್ವಿ ವಾಜಿದ್‌ ಆಲಿ ತಿಳಿಸಿದರು.

ಅಂಕಿ ಅಂಶ
34,218: ರಾಜ್ಯದ ಮುಜರಾಯಿ ಇಲಾಖೆಗೆ ಸೇರಿದ ಸಿ ಗುಂಪಿನ ದೇವಾಲಯಗಳು
139: ಬಿ ಗುಂಪಿನ ದೇವಸ್ಥಾನಗಳು
205: ಎ ಗುಂಪಿನ ದೇವಸ್ಥಾನಗಳು

***

ಕೋವಿಡ್‌ ಸಮಯದಲ್ಲಿ ದೇವಸ್ಥಾನಗಳಿಗೆ ಭಕ್ತರಿಗೆ ಪ್ರವೇಶಕ್ಕೆ ಅವಕಾಶವಿಲ್ಲದೆ ನಮ್ಮ ಜೀವನೋಪಾಯಕ್ಕೆ ವರಮಾನವೇ ಇಲ್ಲದ ಸ್ಥಿತಿ ನಿರ್ಮಾಣವಾಯಿತು.

ಯಲ್ಲಪ್ಪ, ಪೂಜಾರಿ, ನಿಟ್ಟುವಳ್ಳಿ ದುರ್ಗಮ್ಮ ದೇವಸ್ಥಾನ, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT