ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರ್ಗೆ ಕಾಲದಿಂದಲೂ ಈಡೇರಿಲ್ಲ ದಲಿತ ಸಿಎಂ ಕನಸು: ಸತೀಶ ಜಾರಕಿಹೊಳಿ

Published 7 ಮಾರ್ಚ್ 2024, 12:37 IST
Last Updated 7 ಮಾರ್ಚ್ 2024, 12:37 IST
ಅಕ್ಷರ ಗಾತ್ರ

ಬೆಳಗಾವಿ: ‘ದಲಿತರು ಮುಖ್ಯಮಂತ್ರಿ ಆಗಬೇಕೆಂಬ ಕೂಗು ಇಂದು ನಿನ್ನೆದಲ್ಲ. ಮಲ್ಲಿಕಾರ್ಜುನ ಖರ್ಗೆ ಅವರಿಂದ ಆರಂಭವಾಗಿದ್ದು ಇನ್ನೂ ಮುಂದುವರಿದಿದೆ. ಕಾಂಗ್ರೆಸ್‌ ಮಾತ್ರವಲ್ಲ; ಬಿಜೆಪಿ, ಜೆಡಿಎಸ್‌ನಲ್ಲೂ ಈ ಕೂಗು ಇದೆ. ಆದರೆ, ಇದೂವರೆಗೆ ಯಾವುದೇ ಪಕ್ಷದಲ್ಲಿ ದಲಿತ ವ್ಯಕ್ತಿಯೊಬ್ಬರು ಈ ಹುದ್ದೆ ಏರಿಲ್ಲ’ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

‘ಕಳೆದ 20 ವರ್ಷಗಳಿಂದ ಮಲ್ಲಿಕಾರ್ಜುನ ಖರ್ಗೆ, 2013ರಲ್ಲಿ ಡಾ.ಜಿ.ಪರಮೇಶ್ವರ್‌ ಅವರು ಮುಖ್ಯಮಂತ್ರಿ ಆಗಬೇಕೆಂಬ ಕೂಗು ಇತ್ತು. ಇಬ್ಬರಿಗೂ ಭಾಗ್ಯ ಸಿಗಲಿಲ್ಲ. ಪರಿಶಿಷ್ಟರು ಕಾಂಗ್ರೆಸ್‌ ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುತ್ತಾರೆ. ಅವರಿಗೆ ದೊಡ್ಡ ಸ್ಥಾನ ಸಿಗಬೇಕು. ಆದರೆ, ಹೈಕಮಾಂಡ್‌ ಮೇಲೆ ಪ್ರಭಾವ ಬೀರಲು ನಾವು ವಿಫಲವಾಗಿದ್ದೇವೆ. ಲೋಕಸಭೆ ಚುನಾವಣೆಯ ನಂತರ ಈ ವಿಚಾರ ಮತ್ತೆ ಚರ್ಚಿಸುತ್ತೇವೆ’ ಎಂದರು.

‘ಬೆಳಗಾವಿ, ಚಿಕ್ಕೋಡಿ ಕ್ಷೇತ್ರಗಳ ಲೋಕಸಭೆ ಅಭ್ಯರ್ಥಿಗಳ ಹೆಸರು 1ನೇ ಪಟ್ಟಿಯಲ್ಲಿ ಬಿಡುಗಡೆ ಆಗಲ್ಲ. ಎರಡನೇ ಪಟ್ಟಿಯಲ್ಲಿ ಬಿಡುಗಡೆಯಾಗುತ್ತದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಜಿಲ್ಲೆಯ ಎಲ್ಲ ರಾಜಕಾರಣಿಗಳ ಜತೆ ಇನ್ನೊಂದು ಸಭೆ ಮಾಡಲು ಸೂಚಿಸಿದ್ದಾರೆ’ ಎಂದರು.

ನಿಗಮ, ಮಂಡಳಿಗಳಿಯಲ್ಲಿ ಸ್ಥಾನ ಸಿಗದ ಕಾರಣ ಜಿಲ್ಲೆಯ ಕಾಂಗ್ರೆಸ್‌ ಕಾರ್ಯಕರ್ತರು ನಿರಾಶೆಯಾಗಿದ್ದಾರೆಯೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ, ‘ಯಾರೂ ನಿರಾಶೆಯಾಗಿಲ್ಲ. ಬುಡಾ, ಕಾಡಾದಲ್ಲಿ ಅವಕಾಶ ಇವೆ. ಆ ಎರಡು ಸ್ಥಾನಗಳನ್ನು ಸ್ಥಳೀಯರಿಗೆ ನೀಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT