ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗಮೋಹನದಾಸ್‌ ಕುರಿತಾದ ಸಿ.ಟಿ.ರವಿ ಹೇಳಿಕೆಗೆ ದಲಿತ, ಪ್ರಗತಿಪರ ಮುಖಂಡರ ಖಂಡನೆ

Published 23 ಆಗಸ್ಟ್ 2023, 16:27 IST
Last Updated 23 ಆಗಸ್ಟ್ 2023, 16:27 IST
ಅಕ್ಷರ ಗಾತ್ರ

ಬೆಂಗಳೂರು: ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನದಾಸ್‌ ಅವರ ವಿರುದ್ಧ ನೀಡಿರುವ ಹೇಳಿಕೆಯನ್ನು ಹಿಂಪಡೆಯದಿದ್ದರೆ ಬಿಜೆಪಿ ಮುಖಂಡ ಸಿ.ಟಿ.ರವಿ ಅವರ ಮನೆಯ ಮುಂದೆ ಧರಣಿ ನಡೆಸಲಾಗುವುದು ಎಂದು ದಲಿತ ಪ್ರಗತಿಪರ ಸಂಘಟನೆಗಳ ರಾಜ್ಯ ಒಕ್ಕೂಟ ಹೇಳಿದೆ.

‘ಶೇ 40 ಲಂಚ ಆರೋಪದ ತನಿಖೆಗೆ ನಾಗಮೋಹನದಾಸ್‌ ಸಮಿತಿ ರಚನೆ ಕಾಂಗ್ರೆಸ್‌ ಟೂಲ್‌ ಕಿಟ್‌ನ ಭಾಗವಾಗಿದ್ದು, ನಿಷ್ಪಕ್ಷಪಾತವಾಗಿ ತನಿಖೆ ಮಾಡುತ್ತಾರೆ ಎನ್ನುವ ವಿಶ್ವಾಸವಿಲ್ಲ’ ಎಂದು ರವಿ ನೀಡಿರುವ ಹೇಳಿಕೆ ಅಕ್ಷಮ್ಯ. ನಾಗಮೋಹನ್‌ದಾಸ್‌ ಅವರು ವಿದ್ಯಾರ್ಥಿ ದಿಸೆಯಿಂದಲೂ ಪ್ರಗತಿಪರ ಆಲೋಚನೆಗಳೊಂದಿಗೆ ಬೆಳೆದವರು. ವಿದ್ಯಾರ್ಥಿ-ಯುವಜನರ ಮುಖಂಡರಾಗಿದ್ದವರು. ಅಂತವರ ಮೇಲೆ ಪಕ್ಷಪಾತದ ಆರೋಪ ಮಾಡುವುದು ಸಲ್ಲದು ಎಂದು ಒಕ್ಕೂಟದ ಮುಖಂಡರಾದ ಬಿ.ರಾಜಶೇಖರಮೂರ್ತಿ, ಜಿ.ರಾಮಕೃಷ್ಣ, ಕೆ. ಮರುಳಸಿದ್ದಪ್ಪ, ಬರಗೂರು ರಾಮಚಂದ್ರಪ್ಪ, ಎಸ್.ಜಿ ಸಿದ್ದರಾಮಯ್ಯ, ಎನ್.ವೆಂಕಟೇಶ್, ಮಾವಳ್ಳಿ ಶಂಕರ್, ಆರ್. ಮೋಹನರಾಜ್, ವಿ.ನಾಗರಾಜ್, ಗುರುಪ್ರಸಾದ್ ಕೆರಗೋಡು, ಇಂದೂಧರ ಹೊನ್ನಾಪುರ ಸೇರಿದಂತೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅವರ ಜನಪರ ಕಾಳಜಿ, ನ್ಯಾಯಾಂಗದಲ್ಲಿನ ಸೇವೆ ಅನನ್ಯ. ನ್ಯಾಯಮೂರ್ತಿಗಳಾಗಿ 10 ವರ್ಷಗಳಲ್ಲಿ 45 ಸಾವಿರಕ್ಕೂ ಹೆಚ್ಚು ತೀರ್ಪುಗಳನ್ನು ನೀಡಿದ್ದಾರೆ. ನ್ಯಾಯಾಂಗದ ಘನತೆ ಎತ್ತಿ ಹಿಡಿದ್ದಾರೆ. ರೈತ-ಕಾರ್ಮಿಕ, ದಲಿತ, ಮಹಿಳಾ ಪರ ಧ್ವನಿಯಾಗಿ ಸರ್ವರ ಹಿತಕ್ಕೆ ಶ್ರಮಿಸಿದ್ದಾರೆ. 2018ರಲ್ಲಿ ‘ಸಂವಿಧಾನ ಓದು’ ಕೃತಿ ರಚಿಸಿ ‘ಸಂವಿಧಾನ ಓದು ಅಭಿಯಾನ’ ಆರಂಭಿಸಿದ್ದರು. ಸಂವಿಧಾನ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದನ್ನು ಸಹಿಸದೆ ಸಿ.ಟಿ.ರವಿ ಇಂತಹ ಕೀಳು ಹೇಳಿಕೆ ನೀಡಿದ್ದಾರೆ. ಅವರು ತಕ್ಷಣ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.

ಬಿಜೆಪಿ ಸರ್ಕಾರ ಅವಧಿಯಲ್ಲಿಯೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲಾತಿ ಹೆಚ್ಚಳ ಆಯೋಗದ ಅಧ್ಯಕ್ಷರಾಗಿ  ಯಾವುದೇ ರಾಜಕೀಯ ಶಕ್ತಿಗಳಿಗೆ ಮಣಿಯದೆ ನ್ಯಾಯಪರ ವರದಿ ನೀಡಿದ್ದರು. ಇವರದ್ದೇ ಬಿಜೆಪಿ ಸರ್ಕಾರ ಆಯೋಗದ ವರದಿಯನ್ನು ಅಂಗೀಕರಿಸಿ, ಜಾರಿಗೊಳಿಸಿದೆ. ಹಿಂದೂ ಮೂಲಭೂತವಾದಿ ರವಿ ಅವರು ಇಂತಹ ಹೇಳಿಕೆ ಮೂಲಕ ಪ್ರಗತಿಪರ ಆಶಯವಿರುವ ಅವರ ಬಾಯಿಮುಚ್ಚಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT