ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೇಣುಕಾಸ್ವಾಮಿ ಕೊಲೆ ಖಂಡಿಸಿ ಚಿತ್ರದುರ್ಗದಲ್ಲಿ ಪ್ರತಿಭಟನೆ

ವಿಆರ್ ಎಸ್ ಬಡಾವಣೆ ನಿವಾಸಿ ರೇಣುಕಾಸ್ವಾಮಿ ಕೊಲೆ ಖಂಡಿಸಿ ವಿವಿಧ ಸಂಘಟನೆಗಳ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
Published 12 ಜೂನ್ 2024, 7:57 IST
Last Updated 12 ಜೂನ್ 2024, 7:57 IST
ಅಕ್ಷರ ಗಾತ್ರ

ಚಿತ್ರದುರ್ಗ: ವಿಆರ್ ಎಸ್ ಬಡಾವಣೆ ನಿವಾಸಿ ರೇಣುಕಾಸ್ವಾಮಿ ಕೊಲೆ ಖಂಡಿಸಿ ವಿವಿಧ ಸಂಘಟನೆಗಳ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ವೀರಶೈವ ಲಿಂಗಾಯತ, ಜಂಗಮ ಸಮುದಾಯ ಸೇರಿ ವಿವಿಧ ಸಮುದಾಯಗಳ ಸದಸ್ಯರು ನಟ ದರ್ಶನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅವರಿಗೆ ಗಲ್ಲು‌ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದಾದ್ಯಂತ ದರ್ಶನ್ ಸಿನಿಮಾಗಳು ಬಿಡುಗಡೆಯಾಗಬಾರದು. ಸಾರ್ವಜನಿಕರು‌ ಕೂಡ ಅವರ ಚಿತ್ರ ಬಹಿಷ್ಕರಿಸಬೇಕು ಎಂದು ಪ್ರತಿಭಟನಾಕಾರರು ಹೇಳಿದರು.

ರೇಣುಕಾಸ್ವಾಮಿಯನ್ನು ಚಿತ್ರಹಿಂಸೆ ನೀಡಿ‌ ಕೊಲೆ ಮಾಡಲಾಗಿದೆ. ತಪ್ಪು ಮಾಡಿದ್ದರೆ ಪೊಲೀಸರಿಗೆ ದೂರು ನೀಡಲು ಅವಕಾಶವಿತ್ತು. ಆದರೆ ಕಾನೂನು ಕೈಗೆತ್ತಿಕೊಂಡಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ಪೊಲೀಸರು ಆರೋಪಿಗಳನ್ನು ಬಂಧಿಸಿ ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ, ಮುಂದೆ ಆರೋಪಗಳನ್ನು ರಕ್ಷಿಸುವ ಕೆಲಸ ಮಾಡಿದರೆ ನಾವು ಸುಮ್ಮನೆ ಕೂರುವುದಿಲ್ಲ. ಮುಖ್ಯಮಂತ್ರಿ, ಗೃಹಸಚಿವರು ಈ ನಿಟ್ಟಿನಲ್ಲಿ ಪೊಲೀಸರಿಗೆ ಸಂಪೂರ್ಣ ಸ್ವತಂತ್ರ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್, ಬಿಜೆಪಿ ಮುಖಂಡರಾದ ಜಿ.ಎಸ್.ತಿಪ್ಪಾರೆಡ್ಡಿ, ಎಸ್ ಕೆ ಬಸವರಾಜನ್, ವಿವಿಧ ಸಮಾಜದ ಮುಖಂಡ ಮಲ್ಲಿಕಾರ್ಜುನ ಸ್ವಾಮಿ, ಷಡಾಕ್ಷರಯ್ಯ, ಬಸವನಾಗುದೇವ ಸ್ವಾಮೀಜಿ, ನಾಗರಾಜ ಸಂಗಂ ಇದ್ದರು.

‘ಇಡೀ ಪ್ರಕರಣದಲ್ಲಿ ಪೊಲೀಸರು ದಿಟ್ಟ ಹೆಜ್ಜೆ ಇರಿಸಿದ್ದಾರೆ. ಶೀಘ್ರವೇ ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ, ಚುನಾವಣೆಯಲ್ಲಿ ದರ್ಶನ್‌ ಕಾಂಗ್ರೆಸ್‌ ಪರ ಪ್ರಚಾರ ಮಾಡಿರುವ ಕಾರಣಕ್ಕೆ ರಾಜ್ಯ ಸರ್ಕಾರ ಆತನ ಪರವಾಗಿ ನಿಲ್ಲಬಾರದು. ಆರೋಪಿಗಳನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಮುಖ್ಯಮಂತ್ರಿ ಹಾಗೂ ಗೃಹಸಚಿವರು ತನಿಖೆ ದಿಕ್ಕು ತಪ್ಪದಂತೆ ನೋಡಿಕೊಳ್ಳಬೇಕು. ಆರೋಪಿಯನ್ನು ರಕ್ಷಿಸುವ ಕೆಲಸ ಮಾಡಿದರೆ ಹೋರಾಟ ರೂಪಿಸಲಾಗುವುದು’ ಎಂದು ಮಾಜಿ ಶಾಸಕ, ಬಿಜೆಪಿ ಮುಖಂಡ ಎಸ್‌.ಕೆ. ಬಸವರಾಜನ್‌ ಎಚ್ಚರಿಸಿದರು. 

‘ದರ್ಶನ್‌ ಅವರ ಹೆಸರಿನ ಜೊತೆ ಡಿ ಬಾಸ್‌ ಎಂಬ ಬಿರುದು ಇತ್ತು. ಆದರೆ, ಅವರು ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದ್ದಾರೆ’ ಎಂದು ಕಾಂಗ್ರೆಸ್‌ ಮುಖಂಡ ಮರುಳಾರಾಧ್ಯ ಹೇಳಿದರು. ವಿಧಾನ ಪರಿಷತ್‌ ಸದಸ್ಯ ಕೆ.ಎಸ್‌.ನವೀನ್‌, ಮಾಜಿ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ, ಛಲವಾದಿ ಗುರುಮಠದ ಬಸವನಾಗಿದೇವ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮಿ, ಷಡಾಕ್ಷರಯ್ಯ, ನಾಗರಾಜ ಸಂಗಮ್‌ ಇದ್ದರು.

‘ಸಿಬಿಐಗೆ ಕೊಡಿ, ಮುಚ್ಚಿ ಹಾಕಬೇಡಿ’

ವಿವಿಧ ಸಂಘಟನೆ ಸದಸ್ಯರು, ರಾಜಕೀಯ ಪಕ್ಷಗಳ ಮುಖಂಡರು ಹಾಗೂ ವಿವಿಧ ಮಠಗಳ ಶ್ರೀಗಳು ನಗರದ ವಿಆರ್‌ಎಸ್‌ ಬಡಾವಣೆಯಲ್ಲಿರುವ ರೇಣುಕಾಸ್ವಾಮಿ ನಿವಾಸಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಈ ವೇಳೆ ಮಾತನಾಡಿದ ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ‘ನನ್ನ ಮಗನನ್ನು ಕೊಂದವರಿಗೆ ಕಠಿಣ ಶಿಕ್ಷೆಯಾಗಬೇಕು. ಪ್ರಕರಣ ಮುಚ್ಚಿ ಹಾಕುತ್ತಾರೆ ಎಂದು ಕೆಲವರು ಮಾತನಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಪ್ರಕರಣ ಮುಚ್ಚಿ ಹಾಕಬಾರದು, ತನಿಖೆಯನ್ನು ಸಿಬಿಐಗೆ ವಹಿಸಬೇಕು. ಮಗನ ಸಾವಿಗೆ ನ್ಯಾಯ ಕೊಡಿಸಬೇಕು’ ಎಂದು ಕಣ್ಣೀರಿಟ್ಟರು.

ರೇಣುಕಾಸ್ವಾಮಿ ಕ್ರಿಕೆಟ್‌ ಪ್ರಿಯ

‘ನನ್ನ ಮಗ ದರ್ಶನ್‌ ಅಭಿಮಾನಿಯಲ್ಲ. ಆತ ಮನೆಯಲ್ಲಿ ಸಿನಿಮಾ, ಧಾರಾವಾಹಿ ನೋಡುತ್ತಿರಲಿಲ್ಲ, ಸಿನಿಮಾಗಳ ಬಗ್ಗೆ ಮಾತನಾಡುತ್ತಿರಲಿಲ್ಲ, ಕ್ರಿಕೆಟ್‌ ಮಾತ್ರ ನೋಡುತ್ತಿದ್ದ. ಕ್ರಿಕೆಟ್‌ ಪ್ರಿಯನಾಗಿದ್ದ’ ಎಂದು ರೇಣುಕಾಸ್ವಾಮಿ ತಂದೆ ಕಾಶಿನಾಥ ಶಿವಣ್ಣಗೌಡರ್‌ ತಿಳಿಸಿದರು.

‘ಗಂಡುಮಗ ಎಲ್ಲೋ ಹೋಗಿದ್ದಾನೆ, ಬರುತ್ತಾನೆ ಎಂದು ನಾವು ನಂಬಿದ್ದೆವು. ಹೀಗಾಗಿ ಪೊಲೀಸ್‌ ಠಾಣೆಗೆ ದೂರು ನೀಡಿರಲಿಲ್ಲ. ಸೋಮವಾರ ಮಧ್ಯಾಹ್ನ 12.30ರವರೆಗೂ ಸಾವಿನ ಸುದ್ದಿ ಗೊತ್ತಿರಲಿಲ್ಲ. ನನ್ನ ಮಗನನ್ನು ಬರ್ಬರವಾಗಿ ಕೊಂದಿದ್ದಾರೆ. ತಲೆಯಲ್ಲಿ ತೂತು ಗಳಾಗಿದ್ದವು. ಎದೆ, ಬೆನ್ನು ಮೂಳೆ ಪುಡಿಯಾಗಿತ್ತು, ಮರ್ಮಾಂಗಕ್ಕೂ ಹೊಡೆದಿದ್ದರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT