ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟ ಸುದೀಪ್ ಹೇಳಿಕೆ ದಾಖಲು: ಆದೇಶ ಕಾಯ್ದಿರಿಸಿದ ಕೋರ್ಟ್

Published 10 ಆಗಸ್ಟ್ 2023, 15:26 IST
Last Updated 10 ಆಗಸ್ಟ್ 2023, 15:26 IST
ಅಕ್ಷರ ಗಾತ್ರ

ಬೆಂಗಳೂರು: ನಿರ್ಮಾಪಕ ಎಂ.ಎನ್. ಕುಮಾರ್ ವಿರುದ್ಧ ದಾಖಲಿಸಿರುವ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಫಿರ್ಯಾದುದಾರರೂ ಆದ ಚಿತ್ರನಟ ಸುದೀಪ್ ಗುರುವಾರ ನಗರದ 13 ನೇ ಎಸಿಎಂಎಂ ಕೋರ್ಟ್ ಗೆ ಖುದ್ದು ಹಾಜರಾಗಿ ತಮ್ಮ ಸ್ವಯಂ ಹೇಳಿಕೆ ದಾಖಲಿಸಿದರು.

ನ್ಯಾಯಾಧೀಶ ವೆಂಕಣ್ಣ ಬಸಪ್ಪ ಹೊಸಮನಿ ಅವರು ಹೇಳಿಕೆ ದಾಖಲು ಮಾಡಿಕೊಂಡು ಆದೇಶವನ್ನು ಶುಕ್ರವಾರಕ್ಕೆ (ಆ.11) ಕಾಯ್ದಿರಿಸಿದರು.

ಕೋರ್ಟ್ ಕಟಕಟೆಯಲ್ಲಿ ನಿಂತು ಪ್ರಮಾಣಿತ ಹೇಳಿಕೆ ದಾಖಲಿಸಿದ ಸುದೀಪ್; "ನಿರ್ಮಾಪಕ ಎಂ.ಎನ್. ಕುಮಾರ್ ಮಾಧ್ಯಮ ಗೋಷ್ಟಿಯಲ್ಲಿ ನನ್ನ ವಿರುದ್ದ ಮಾಡಿರುವ ಆರೋಪಗಳೆಲ್ಲಾ ಸುಳ್ಳು. ರಾಜರಾಜೇಶ್ವರಿ ನಗರದಲ್ಲಿ ಮನೆ ಕಟ್ಟಲು ಹಣದ ನೆರವಿನ ಆರೋಪವೂ ಸುಳ್ಳು" ಎಂದು ಸ್ಪಷ್ಟನೆ ನೀಡಿದರು.

"ಕುಮಾರ್ ಹೇಳಿಕೆಯನ್ನು ಎಂ.ಎನ್. ಸುರೇಶ್ ಬೆಂಬಲಿಸಿದ್ದಾರೆ. ಈ ಕುರಿತಾಗಿ ಹಲವರು ನನ್ನನ್ನು ಪ್ರಶ್ನಿಸುತ್ತಿದ್ದಾರೆ. ಕುಮಾರ್ ಹೇಳಿಕೆಯಿಂದ ನಾನು ಇಷ್ಟು ವರ್ಷ ಕಷ್ಟಪಟ್ಟು ಗಳಿಸಿದ ವರ್ಚಸ್ಸಿಗೆ ಹಾನಿಯಾಗಿದೆ. ಇವರ ಮಾಧ್ಯಮ ಗೋಷ್ಟಿಯಿಂದ ನನ್ನ ಮಾನಹಾನಿಯಾಗಿದೆ" ಎಂದರು.

ತಮ್ಮ ಹೇಳಿಕೆಗೆ ಪೂರಕವಾಗಿ ಕೆಲವು ಫೋಟೊಗಳನ್ನೂ ನ್ಯಾಯಾಧೀಶರಿಗೆ ನೀಡಿದರು.

ಹೇಳಿಕೆ ದಾಖಲು ಮಾಡಿಕೊಂಡ ನ್ಯಾಯಾಧೀಶರು, "ಒಂದು ವೇಳೆ ನಿರ್ಮಾಪಕರು ಕ್ಷಮಾಪಣೆ ಕೇಳಿದರೆ ನೀವು ಅವರನ್ನು ಕ್ಷಮಿಸುತ್ತೀರಾ ರಾಜಿ ಸಂಧಾನ ಮಾಡಿಕೊಂಡು ಕಕ್ಷಿದಾರರಿಗೆ ಮಾದರಿಯಾಗುತ್ತೀರಾ" ಎಂದು ಪ್ರಶ್ನಿಸಿದರು.

ಇದಕ್ಕೆ ಸುದೀಪ್, "ಒಬ್ಬ ಸುದೀಪ್ ನನ್ನು ಬಗ್ಗಿಸಿದರೆ ಹಲವರನ್ನು ಬಗ್ಗಿಸಬಹುದು ಎಂದು ಅವರು ತಿಳಿದಂತಾಗುತ್ತದೆ" ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.

ಸುದೀಪ್ ಪರ ವಕೀಲ ಅಜಯ್ ಕಡಕೋಳ್ ಹಾಜರಾಗಿದ್ದರು. ಅಂತೆಯೇ, ಸುದೀಪ್ ಜೊತೆಯಲ್ಲಿ ಚಂದ್ರಚೂಡ್, ನಿರ್ಮಾಪಕ ಜಾಕ್ ಮಂಜು ಕೂಡ ಇದ್ದರು.

"ಸುದೀಪ್‌ ಕಳೆದ 7-8 ವರ್ಷಗಳ ಹಿಂದೆ ನನ್ನ ಸಿನಿಮಾದಲ್ಲಿ ನಟಿಸುತ್ತೇನೆ ಎಂದು ಹೇಳಿ, ನನ್ನಿಂದ ಮುಂಗಡ ಹಣ ಪಡೆದಿದ್ದರು. ಆದರೆ ಇದುವರೆಗೂ ಅವರು ಕಾಲ್‌ಶೀಟ್‌ ಕೊಟ್ಟಿಲ್ಲ. ನನ್ನ ಹಣವನ್ನೂ ವಾಪಸ್‌ ನೀಡುತ್ತಿಲ್ಲ'' ಎಂದು ನಿರ್ಮಾಪಕ ಎಂ.ಎನ್.ಕುಮಾರ್‌ ಆರೋಪಿಸಿದ್ದರು. ಸಮಸ್ಯೆ ಬಗೆಹರಿಸುವಂತೆ ಕೋರಿ ಫಿಲ್ಮ್‌ ಛೇಂಬರ್‌ ಮೆಟ್ಟಿಲೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT