ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನಸಿಕ ಸ್ಥಿಮಿತ ಕಳೆದುಕೊಂಡ ಕೇಜ್ರಿವಾಲ್: ಆರ್‌. ಅಶೋಕ

Published 12 ಮೇ 2024, 16:20 IST
Last Updated 12 ಮೇ 2024, 16:20 IST
ಅಕ್ಷರ ಗಾತ್ರ

ಬೆಂಗಳೂರು: ‘ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದರಿಂದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಈಗ ಹುಚ್ಚರಂತೆ ವರ್ತಿಸುತ್ತಿದ್ದಾರೆ. ಬಿಜೆಪಿ ವಿರುದ್ಧ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ ’ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ವಾಗ್ದಾಳಿ ನಡೆಸಿದರು.

‘ನಮ್ಮ ಪಕ್ಷದಲ್ಲಿ ವಯಸ್ಸಿನ ಆಧಾರದ ಮೇಲೆ ಟಿಕೆಟ್ ನೀಡುವ ಅಥವಾ ನೀಡದಿರುವ ಕುರಿತು ಅಧಿಕೃತ ತೀರ್ಮಾನಗಳೇ ಆಗಿಲ್ಲ. ಆದರೆ, ಅಂತಹದ್ದೊಂದು ಸುಳ್ಳುಗಳನ್ನು ಹಬ್ಬಿಸಿರುವುದು ಕಾಂಗ್ರೆಸ್‌ ಪಕ್ಷ. ಅದನ್ನು ಉಲ್ಲೇಖಿಸಿ ಕೇಜ್ರಿವಾಲ್‌ ಮಾತನಾಡುತ್ತಿದ್ದಾರೆ’ ಎಂದು ಅವರು ಭಾನುವಾರ ಸುದ್ದಿಗಾರರ ಜತೆ ಮಾತನಾಡಿ ತಿಳಿಸಿದರು.

‘ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೂ ಮೋದಿ ಅವರಿಗೆ 75 ವರ್ಷ ಆದ ಬಳಿಕ ಪ್ರಧಾನಿ ಹುದ್ದೆಯನ್ನು ಅಮಿತ್‌ ಶಾ ಅವರಿಗೆ ನೀಡಲಾಗುತ್ತದೆ ಎಂದು ಕೇಜ್ರಿವಾಲ್‌ ಹೇಳಿದ್ದಾರೆ. ಇದು ತಲೆಬುಡ ಇಲ್ಲದ ಹುಚ್ಚು– ಹುಚ್ಚಾದ ಹೇಳಿಕೆ. ಎನ್‌ಡಿಎ ಪ್ರಧಾನಿ ಬಗ್ಗೆ ಯಾವುದೇ ಸಂಶಯವಿಲ್ಲ. ಮೋದಿ ಅವರೇ ಮೂರನೇ ಬಾರಿಗೆ ಪ್ರಧಾನಿ ಆಗುತ್ತಾರೆ. ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ ಯಾರು ಎಂಬುದು ಅವರಿಗೇ ಗೊತ್ತಿಲ್ಲ. ಕೇಜ್ರೀವಾಲ್ ಅವರು ಮತ್ತೆ ಜೈಲಿಗೆ ಹೋಗಬೇಕಾಗಿದೆ. ಬಿಡುಗಡೆ ಆಗುವುದಿಲ್ಲ. ಹೀಗಾಗಿ ಏನೇನೋ ಮಾತನಾಡುತ್ತಿದ್ದಾರೆ’ ಎಂದರು.

‘ಅರವಿಂದ ಕೇಜ್ರಿವಾಲ್‌ ತಪ್ಪು ಮಾಡಿಲ್ಲವಾಗಿದ್ದರೆ ನ್ಯಾಯಾಲಯ ಕೂಡಲೇ ಜಾಮೀನು ನೀಡುತ್ತಿತ್ತು. ತಪ್ಪು ಮಾಡಿರುವ ಕಾರಣಕ್ಕೇ ಜೈಲಿಗೆ ಹೋಗಿದ್ದು, ಬಲವಾದ ಸಾಕ್ಷ್ಯಗಳು ಇದ್ದ ಕಾರಣಕ್ಕೆ ಅವರಿಗೆ ಜಾಮೀನು ನೀಡಿರಲಿಲ್ಲ. ತಪ್ಪು ಮಾಡಿದವರು ಮತ್ತು ಅದಕ್ಕೆ ಸಾಕ್ಷ್ಯಗಳಿದ್ದವರ ವಿರುದ್ಧ ಮಾತ್ರ ನ್ಯಾಯಾಲಯ ಕ್ರಮ ತೆಗೆದುಕೊಳ್ಳುತ್ತದೆ’ ಎಂದು ಹೇಳಿದರು.

ಅಭ್ಯರ್ಥಿ ಆಯ್ಕೆ ಕೇಂದ್ರದ ನಿರ್ಧಾರ:

ವಿಧಾನಪರಿಷತ್‌ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಯನ್ನು ಕೇಂದ್ರದ ನಾಯಕರು ತೀರ್ಮಾನ ಮಾಡಿದ್ದಾರೆ. ಇದರಲ್ಲಿ ರಾಜ್ಯ ನಾಯಕರ ಪಾತ್ರವಿಲ್ಲ ಎಂದು ಅಶೋಕ ಹೇಳಿದರು.

‘ಪ್ರಜ್ವಲ್‌ ರೇವಣ್ಣ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂಬ ಜೆಡಿಎಸ್‌ ಹೋರಾಟಕ್ಕೆ ಬಿಜೆಪಿ ಬೆಂಬಲ ನೀಡುತ್ತದೆ. ನಾವೂ ಕೂಡಾ ಸಿಬಿಐಗೆ ಒಪ್ಪಿಸಲು ಆಗ್ರಹಿಸುತ್ತೇವೆ’ ಎಂದು ಹೇಳಿದರು.

ಎಸ್‌ಎಂಕೆ ಆರೋಗ್ಯ ವಿಚಾರಿಸಿದ ಅಶೋಕ:

ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ಆರೋಗ್ಯವನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ವಿರೋಧ ಪಕ್ಷದ ನಾಯಕ ಆರ್‌.ಅಶೋಕ ವಿಚಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT