ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಇಂಗ್ಲಿಷ್‌ ಮಾಧ್ಯಮ ನಿರ್ಧಾರ ಹಿಂಪಡೆಯಲು ಆಗ್ರಹ

Published 29 ಮೇ 2024, 15:27 IST
Last Updated 29 ಮೇ 2024, 15:27 IST
ಅಕ್ಷರ ಗಾತ್ರ

ಬೆಂಗಳೂರು: ಮೂರು ಸಾವಿರ ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಇಂಗ್ಲಿಷ್‌ ಮಾಧ್ಯಮ ತರಗತಿಗಳ ಆರಂಭಕ್ಕೆ ಸರ್ಕಾರ ಸಿದ್ಧತೆ ನಡೆಸಿದೆ. ಇಂತಹ ನಿರ್ಧಾರಗಳನ್ನು ಮರುಪರಿಶೀಲನೆ ನಡೆಸಬೇಕು ಎಂದು ಸಾಹಿತಿಗಳು, ಶಿಕ್ಷಣ ತಜ್ಞರು ಒತ್ತಾಯಿಸಿದರು.

ಒಂದರಿಂದ ಐದನೇ ತರಗತಿಯವರೆಗೆ ಮಾತೃಭಾಷೆಯಲ್ಲೇ ಶಿಕ್ಷಣ ನೀಡುವುದನ್ನು ಕಡ್ಡಾಯಗೊಳಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಕಾರ್ಪೊರೇಟ್‌ ಕಂಪನಿಗಳು ಸಾಮಾಜಿಕ ಕಾರ್ಯಗಳಿಗೆ ಮೀಸಲಿಡುವ ನಿಧಿ ಬಳಸಿಕೊಂಡು ಸರ್ಕಾರಿ ಶಾಲಾ ಜಾಗದಲ್ಲಿ ಆಂಗ್ಲ ಮಾಧ್ಯಮ ಶಾಲೆಗಳನ್ನು ನಡೆಸುವುದು ಸಮಂಜಸವಲ್ಲ. ಇಂತಹ ಶಾಲೆಗಳಿಗೆ ಶಿಕ್ಷಕರನ್ನು ನೇಮಿಸುವ ಅಧಿಕಾರವೂ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ನೀಡಲಾಗಿದೆ. ಇಂತಹ ನಿರ್ಧಾರಗಳಿಂದ ಸರ್ಕಾರ ಹಿಂದೆ ಸರಿಯಬೇಕು. ಕನಿಷ್ಠ ಐದನೇ ತರಗತಿಯವರೆಗೆ ಮಾತೃಭಾಷಾ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕು ಎಂದು ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ, ಜಿ. ರಾಮಕೃಷ್ಣ, ಅಶ್ವತ್ಥನಾರಾಯಣ, ರಾ.ನಂ. ಚಂದ್ರಶೇಖರ, ಸುದರ್ಶನ, ಸಾಹಿತಿ ವಸುಂಧರಾ ಭೂಪತಿ, ನಿರ್ದೇಶಕ ಟಿ.ಎಸ್‌. ನಾಗಾಭರಣ, ಪತ್ರಕರ್ತ ಬಿ.ಎಂ. ಹನೀಫ್‌, ನಿವೃತ್ತ ಅಧಿಕಾರಿ ವಿಶುಕುಮಾರ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

2015ರಲ್ಲಿ ವಿಧಾನಸಭೆ, ವಿಧಾನಪರಿಷತ್‌ನಿಂದ ಅಂಗೀಕಾರಗೊಂಡು ರಾಷ್ಟ್ರಪತಿ ಒಪ್ಪಿಗೆ ದೊರಕದೇ ನನೆಗುದಿಗೆ ಬಿದ್ದಿರುವ ಮಾತೃಭಾಷಾ ಮಾಧ್ಯಮ ಕಡ್ಡಾಯಗೊಳಿಸುವ ಮಸೂದೆಗೆ ಒಪ್ಪಿಗೆ ಪಡೆಯಬೇಕು. ಅದಕ್ಕಾಗಿ ತಜ್ಞರನ್ನು ಒಳಗೊಂಡ ಅಧಿಕಾರಿಗಳ ನಿಯೋಗವನ್ನು ರಾಷ್ಟ್ರಪತಿಗಳ ಬಳಿಗೆ ಕಳುಹಿಸಬೇಕು. ಆಕ್ಷೇಪಣೆಗಳಿಗೆ ಸಮರ್ಪಕ ಉತ್ತರ ನೀಡುವ ಮೂಲಕ ಒಪ್ಪಿಗೆ ಪಡೆಯಲು ಪ್ರಯತ್ನಿಸಬೇಕು ಎಂದರು.

ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಒಂದು ಸಾವಿರ ದ್ವಿಭಾಷಾ ಮಾಧ್ಯಮ ಶಾಲೆಗಳನ್ನು ಆರಂಭಿಸುವ ತೀರ್ಮಾನವನ್ನು ಕೈಬಿಡಬೇಕು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರ್ಕಾರಕ್ಕೆ ಸಲ್ಲಿಸಿರುವ ಶಾಲಾ ಸಬಲೀಕರಣ ವರದಿಯನ್ನು ಅಂಗೀಕರಿಸಿ, ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.

ಶಿಕ್ಷಣ ಮಾಧ್ಯಮ, ಶಾಲೆಗಳ ಸಬಲೀಕರಣ ಹಾಗೂ ಅಭಿವೃದ್ಧಿ ಕುರಿತು ಚರ್ಚಿಸಲು ಮುಖ್ಯಮಂತ್ರಿ ಬಳಿಗೆ ಶೀಘ್ರ ನಿಯೋಗ ತೆರಳುವುದಾಗಿ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT