ಬೆಂಗಳೂರು: ಜಾತಿ ನಿಂದನೆ ಪ್ರಕರಣದಲ್ಲಿ ನಟ ಉಪೇಂದ್ರ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ, ಹೋರಾಟಗಾರ ಬಿ.ಆರ್.ಭಾಸ್ಕರ್ ಪ್ರಸಾದ್ ಹಾಗೂ ಹರಿರಾಮ್ ಅವರ ನೇತೃತ್ವದಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ತೆರಳುತ್ತಿದ್ದ ಹೋರಾಟಗಾರರನ್ನು ಬುಧವಾರ ರಾತ್ರಿ ಪೊಲೀಸರು ವಶಕ್ಕೆ ಪಡೆದುಕೊಂಡರು.
ಹೋರಾಟಗಾರ ಬೈರಪ್ಪ ಹರೀಶ್ ಕುಮಾರ್, ಸುನಿಲ್, ನವೀನ್ ಸೇರಿದಂತೆ ಹಲವರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ವಿಧಾನಸೌಧದ ಎದುರು ವಶಕ್ಕೆ ಪಡೆದರು. ಇದರಿಂದ ಕೆರಳಿದ ಹೋರಾಟಗಾರರು ಪೊಲೀಸರು ವಿರುದ್ಧ ಆಕ್ರೋಶ ಹೊರಹಾಕಿದರು.
‘ತಳ ಸಮುದಾಯಗಳ ಬಗ್ಗೆ ನಟ ಉಪೇಂದ್ರ ಅವರು ಕೀಳಾಗಿ ಮಾತನಾಡಿದ್ದಾರೆ. ಅವರ ಹೇಳಿಕೆ ಖಂಡನಾರ್ಹ. ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಹೋರಾಟ ನಡೆಸಿದರೆ, ಪೊಲೀಸರು ಹೋರಾಟಗಾರರ ಮೇಲೆಯೇ ದೌರ್ಜನ್ಯ ಎಸಗುತ್ತಿದ್ದಾರೆ’ ಎಂದು ಭಾಸ್ಕರ್ ಪ್ರಸಾದ್ ದೂರಿದರು.
‘ಉಪೇಂದ್ರ ಹೇಳಿಕೆ ನೀಡಿ ಸಾಕಷ್ಟು ದಿನ ಕಳೆದಿದ್ದರೂ ಅವರನ್ನು ಪೊಲೀಸರು ಬಂಧಿಸಿಲ್ಲ. ಗೃಹ ಸಚಿವರ ಮನೆ ಎದುರು ಧರಣಿ ಮಾಡಲು ಮುಂದಾಗಿದ್ದೆವು. ಆದರೆ, ಪೊಲೀಸರು ನಮ್ಮನ್ನು ವಿಧಾನಸೌಧದ ಎದುರೇ ತಡೆದರು’ ಎಂದು ಹೋರಾಟಗಾರರು ತಿಳಿಸಿದರು.
ಪೊಲೀಸ್ ಆಯುಕ್ತರಿಗೆ ಮನವಿ: ‘ಉಪೇಂದ್ರ ಅವರ ವಿರುದ್ಧ ನೀಡಿರುವ ದೂರನ್ನು ವಾಪಸ್ ಪಡೆಯಬೇಕೆಂದು ಬೆದರಿಕೆ ಹಾಕಲಾಗುತ್ತಿದೆ. ನನಗೆ ರಕ್ಷಣೆ ನೀಡಬೇಕು’ ಎಂದು ಕೋರಿ ಗೋಪಾಲ್ ಗಿರಿಯಪ್ಪ ಅವರು ಪೊಲೀಸ್ ಕಮಿಷನರ್‌ಗೆ ಮನವಿ ಸಲ್ಲಿಸಿದ್ದಾರೆ. ಇವರು ಉಪೇಂದ್ರ ವಿರುದ್ಧ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಸಮ್ಮಖದಲ್ಲೇ ದೂರು ನೀಡಿದ್ದೆವು. ಉಪೇಂದ್ರ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣ ಮತ್ತು ಮೊಬೈಲ್‌ನಲ್ಲಿ ಕರೆ ಮಾಡಿ ದೂರು ವಾಪಸ್ ಪಡೆಯುವಂತೆ ಬೆದರಿಕೆ ಹಾಕುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.