ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Dengue Fever | ಕಾರ್ಯಪಡೆ ರಚಿಸಲು ಸಿಎಂ ಸೂಚನೆ

Published 9 ಜುಲೈ 2024, 15:26 IST
Last Updated 9 ಜುಲೈ 2024, 15:26 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ಡೆಂಗಿ ಪ್ರಕರಣಗಳು ಹೆಚ್ಚುತ್ತಿದ್ದು, ನಿಯಂತ್ರಿಸಲು ಜಿಲ್ಲಾ ಮಟ್ಟದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಕಾರ್ಯಪಡೆ ರಚಿಸಬೇಕು’ ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.

‘ಪ್ರತಿ ಜಿಲ್ಲಾಸ್ಪತ್ರೆಯಲ್ಲಿ ಡೆಂಗಿ ಜ್ವರ ಚಿಕಿತ್ಸೆಗೆ ವಿಶೇಷ ವಾರ್ಡ್‌ ಸಜ್ಜುಗೊಳಿಸಬೇಕು. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ವೈದ್ಯಾಧಿಕಾರಿ ಪ್ರತಿ ದಿನ ಸಮನ್ವಯದಿಂದ ಸಭೆ ನಡೆಸಿ ಡೆಂಗಿ ಹರಡದಂತೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಅವರು ಸೂಚನೆ ನೀಡಿದರು. 

‘ವೈದ್ಯಕೀಯ ಕಾಲೇಜುಗಳಲ್ಲಿಯೂ ಡೆಂಗಿ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಬೇಕು. ಡೆಂಗಿ ಪತ್ತೆಗೆ ತಪಾಸಣೆ ಹೆಚ್ಚಿಸಬೇಕು. ಡೆಂಗಿ ಪಾಸಿಟಿವ್‌ ಇರುವ ವ್ಯಕ್ತಿಗಳ ಆರೋಗ್ಯ ಸ್ಥಿತಿಯ ಮೇಲೆ ನಿಗಾ ಇರಿಸಬೇಕು. ಮಳೆಗಾಲ ಮುಗಿಯುವ ತನಕ ಅಧಿಕಾರಿಗಳು ಪ್ರತಿದಿನ ಪರಿಶೀಲನೆ ನಡೆಸಬೇಕು. ಒಂದೂ ಸಾವು ಆಗದಂತೆ ಕ್ರಮವಹಿಸಬೇಕು. ಯಾವುದೇ ರೀತಿಯ ಉದಾಸೀನ ಪ್ರವೃತ್ತಿಯನ್ನು ಸಹಿಸುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

185 ಪ್ರಕರಣ ದೃಢ

ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ರಾಜ್ಯದಲ್ಲಿ ಮಂಗಳವಾರ 185 ಡೆಂಗಿ ಪ್ರಕರಣಗಳು ದೃಢಪಟ್ಟಿವೆ. ಡೆಂಗಿ ಪತ್ತೆ ಸಂಬಂಧ 24 ಗಂಟೆಗಳ ಅವಧಿಯಲ್ಲಿ 948 ಪರೀಕ್ಷೆಗಳನ್ನು ನಡೆಸಲಾಗಿತ್ತು. ಹೊಸದಾಗಿ ಡೆಂಗಿ ಪೀಡಿತರಾದವರಲ್ಲಿ ಒಬ್ಬರು ಒಂದು ವರ್ಷದೊಳಗಿನವರಾದರೆ 81 ಮಂದಿ ಒಂದರಿಂದ 18 ವರ್ಷದೊಳಗಿನವರಾಗಿದ್ದಾರೆ. 103 ಮಂದಿ 18 ವರ್ಷ ಮೇಲ್ಪಟ್ಟವರಾಗಿದ್ದಾರೆ.  ಸದ್ಯ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 346 ಡೆಂಗಿ ಪೀಡಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ವರ್ಷ ವರದಿಯಾದ ಒಟ್ಟು ಡೆಂಗಿ ಪ್ರಕರಣಗಳ ಸಂಖ್ಯೆ 7547ಕ್ಕೆ ಏರಿಕೆಯಾಗಿದೆ. ಡೆಂಗಿ ಪೀಡಿತರಲ್ಲಿ ಈವರೆಗೆ ಏಳು ಮಂದಿ ಮೃತಪಟ್ಟಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸದಾಗಿ 95 ಪ್ರಕರಣಗಳು ದೃಢಪಟ್ಟಿವೆ. ಇದರಿಂದಾಗಿ ಒಟ್ಟು ಪ್ರಕರಣಗಳ ಸಂಖ್ಯೆ 2174ಕ್ಕೆ ಏರಿಕೆಯಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT