ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮಸ್ಥಳ ಪಾದಯಾತ್ರೆ: ಸೌಲಭ್ಯ ಕೊರತೆ

ಚಾರ್ಮಾಡಿ ಘಾಟಿಯಲ್ಲಿ ಸ್ವಚ್ಛತೆ ಕಡೆಗಿಲ್ಲ ಲಕ್ಷ್ಯ
Last Updated 13 ಫೆಬ್ರುವರಿ 2023, 18:33 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಶಿವರಾತ್ರಿ ಆಚರಣೆಗೆ ಧರ್ಮಸ್ಥಳಕ್ಕೆ ಭಕ್ತರು ಪಾದಯಾತ್ರೆ ಸಾಗುವ ಚಾರ್ಮಾಡಿ ಘಾಟಿ ಮಾರ್ಗದಲ್ಲಿ ಕಸದ ಬುಟ್ಟಿ, ಕುಡಿಯುವ ನೀರು, ತಾತ್ಕಾಲಿಕ ತಂಗುದಾಣ ಸೌಲಭ್ಯ ಕಲ್ಪಿಸಿಲ್ಲ. ನೀರಿನ ಖಾಲಿ ಬಾಟಲಿಗಳು, ಕುರುಕುಲು ತಿಂಡಿ ಖಾಲಿ ಪೊಟ್ಟಣಗಳು ಅರಣ್ಯದ ಒಡಲು ಸೇರುತ್ತಿವೆ.

ಚಿಕ್ಕಮಗಳೂರು, ಬೆಂಗಳೂರು, ತುಮಕೂರು, ಮೈಸೂರು, ಮಂಡ್ಯ, ಹಾಸನ, ಕೋಲಾರ, ಬಳ್ಳಾರಿ ಸಹಿತ ವಿವಿಧ ಜಿಲ್ಲೆಗಳ ಸಹಸ್ರಾರು ಭಕ್ತರು ಪ್ರತಿ ವರ್ಷ ಯಾತ್ರೆಗೆ ತೆರಳುತ್ತಾರೆ. ಪಾದಯಾತ್ರಿಗಳ ದಂಡು ಶುರುವಾಗಿದ್ದು, ಇನ್ನು ನಾಲ್ಕು ದಿನ ಮೂಡಿಗೆರೆ, ಕೊಟ್ಟಿಗೆಹಾರ, ಚಾರ್ಮಾಡಿ ಮಾರ್ಗದಲ್ಲಿ ಭಕ್ತರು ಸಾಗುವರು.

ಯಾತ್ರಿಗಳು ಘಾಟಿ ಮಾರ್ಗದ ಬದಿ, ಹಳ್ಳಕೊಳ್ಳಗಳ ಸೇತುವೆ ಪ್ರದೇಶಗಳಲ್ಲಿ ಆಹಾರ ತಯಾರಿಸುತ್ತಾರೆ. ಊಟ, ಉಪಾಹಾರ, ನೀರು ಸೇವಿಸಿ ಪ್ಲಾಸ್ಟಿಕ್‌ ತಟ್ಟೆ, ಲೋಟ, ಪೊಟ್ಟಣ, ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಾರೆ. ಇವು ದಟ್ಟ ಕಾನನದ ಪ್ರಪಾತ, ಜಲಮೂಲಗಳನ್ನು ಸೇರುತ್ತಿವೆ.

ಅರಣ್ಯ ಇಲಾಖೆಯವರು ಚಾರ್ಮಾಡಿ ಘಾಟಿಯಲ್ಲಿ ಕಸದ ಬುಟ್ಟಿ ಇತ್ಯಾದಿ ವ್ಯವಸ್ಥೆ ಕಲ್ಪಿಸಿಲ್ಲ. ಕೊಟ್ಟಿಗೆಹಾರದಿಂದ ಚಾರ್ಮಾಡಿ ಘಾಟಿ ಮಾರ್ಗದ ಅಣ್ಣಪ್ಪ ಸ್ವಾಮಿ ದೇಗುಲದವರೆಗೆ ಶೌಚಾಲಯ ವ್ಯವಸ್ಥೆ ಇಲ್ಲ. ದೇಗುಲ ಸಮೀಪದಲ್ಲಿ ಶೌಚಾಲಯ ಇದೆ. ಮಿಕ್ಕಂತೆ ಭಕ್ತರಿಗೆ ರಸ್ತೆ ಬದಿ, ಜಲಮೂಲ ಪ್ರದೇಶಗಳೇ ಗತಿ.

‘ಚಾರ್ಮಾಡಿ ಘಾಟಿ ಮಾರ್ಗದಲ್ಲಿ ಅಲ್ಲಲ್ಲಿ ಕಸದ ಬುಟ್ಟಿ, ಶೌಚಾಲಯ ವ್ಯವಸ್ಥೆ ಕಲ್ಪಿಸಿಲ್ಲ.

ಅರಣ್ಯ ಇಲಾಖೆಯವರು ಮುಂಜಾಗ್ರತೆ ಕ್ರಮ ಕೈಗೊಂಡಿಲ್ಲ. ಪ್ಲಾಸ್ಟಿಕ್‌ ಇತ್ಯಾದಿ ತ್ಯಾಜ್ಯ ಅರಣ್ಯದ ಒಡಲು ಸೇರುವುದರಿಂದ ಪರಿಸರ ಮಲಿನವಾಗುತ್ತದೆ’ ಎಂದು ತುಮಕೂರಿನ ಪಾದಯಾತ್ರಿ ಟಿ.ಎಚ್‌.ಹರಿಣಿ ಬೇಸರ ವ್ಯಕ್ತಪಡಿಸಿದರು.

ಮೂಡಿಗೆರೆ– ಕೊಟ್ಟಿಗೆಹಾರ ಮಾರ್ಗ: ರಸ್ತೆ ಬದಿ ಕಸದ ಚೀಲ ವ್ಯವಸ್ಥೆ

ಕಸ ಹಾಕಲು ರಸ್ತೆ ಬದಿಯಲ್ಲಿ ಚೀಲಗಳನ್ನು ಮೂಡಿಗೆರೆಯಿಂದ ಕೊಟ್ಟಿಗೆಹಾರದವರೆಗೆ ವ್ಯವಸ್ಥೆ ಮಾಡಲಾಗಿದೆ. ಖಾಲಿ ಬಾಟಲಿ, ಕಸ ಹೆಕ್ಕಿ ವಿಲೇವಾರಿ ಮಾಡಲು ಕೆಲಸಗಾರರು, ಸ್ವಚ್ಛವಾಹಿನಿಗಳನ್ನು ವಿವಿಧ ಗ್ರಾಮ ಪಂಚಾಯಿತಿಗಳು ವ್ಯವಸ್ಥೆ ಮಾಡಿವೆ.

ಚಕ್ಕಮಕ್ಕಿ ಗ್ರಾಮದಲ್ಲಿ ಹೊಸದಾಗಿ ಸಮುದಾಯ ಶೌಚಾಲಯ ಕಲ್ಪಿಸಲಾಗಿದೆ. ಸಂಘ– ಸಂಸ್ಥೆಯವರು, ದಾನಿಗಳು ಭಕ್ತರು ತಂಗಲು ರಸ್ತೆ ಮಗ್ಗುಲಿನ ಜಮೀನು, ಅಂಗಳದಲ್ಲಿ ಶಾಮಿಯಾನ ಅಳವಡಿಸಿ ಕೆಲವೆಡೆ ವ್ಯವಸ್ಥೆ ಮಾಡಿದ್ದಾರೆ. ಕುಡಿಯುವ ನೀರಿನ ವ್ಯವಸ್ಥೆ, ಇನ್ನಷ್ಟು ಕಡೆ ತಾತ್ಕಾಲಿಕ ಶೌಚಾಲಯ, ತಂಗುದಾಣ ಕಲ್ಪಿಸಬೇಕು ಎಂಬುದು ಭಕ್ತರ ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT