ಬೆಂಗಳೂರು: ‘ಎತ್ತಿನಹೊಳೆ ಯೋಜನೆ ಅನುಷ್ಠಾನ ನಿಧಾನಗತಿಯಲ್ಲಿ ಸಾಗುತ್ತಿದ್ದು, ಈ ವಿಚಾರವಾಗಿ ಚರ್ಚಿಸಲು ಜಲಸಂಪನ್ಮೂಲ ಖಾತೆಯನ್ನೂ ಹೊಂದಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನನ್ನ ಮನೆಗೆ ಬಂದಿದ್ದರು. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
ಸದಾಶಿವನಗರದ ತಮ್ಮ ನಿವಾಸದಲ್ಲಿ ಡಿ.ಕೆ. ಶಿವಕುಮಾರ್ ಜೊತೆ ಕೆಲಹೊತ್ತು ಚರ್ಚಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಪರಮೇಶ್ವರ, ‘ಎತ್ತಿನಹೊಳೆ ಯೋಜನೆಯ ಹಣ ಬಿಡುಗಡೆ ಆಗಬೇಕಿದೆ. ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ನೀರು ಸಂಗ್ರಹಕ್ಕೆ ಐದು ಸಾವಿರ ಎಕರೆ ಭೂಮಿ ಪ್ರಸ್ತಾಪಿಸಲಾಗಿತ್ತು. ಅದರಲ್ಲಿ 2,500 ಎಕರೆ ಭೂಮಿ ನನ್ನ ಕ್ಷೇತ್ರ (ಕೊರಟಗೆರೆ) ವ್ಯಾಪ್ತಿಗೆ ಬರುತ್ತದೆ. ಈ ಬಗ್ಗೆ ಚರ್ಚೆ ನಡೆಸಿದ್ದೇವೆ’ ಎಂದರು.
‘ಗುಬ್ಬಿಯಿಂದ ಕುಣಿಗಲ್‌ವರೆಗೆ ಎಕ್ಸ್‌ಪ್ರೆಸ್ ಕಾಲುವೆ ಮಾಡಲು ಅನುಮತಿ ಸಿಕ್ಕಿದೆ. ಕೆಲಸ ಆರಂಭಿಸುವಾಗ ಸ್ಥಳೀಯರು ಅಡ್ಡಿಪಡಿಸಿದ್ದಾರೆ. ಈ ಬಗ್ಗೆಯೂ ಚರ್ಚಿಸಿದ್ದೇವೆ. ಡಿ.ಕೆ. ಶಿವಕುಮಾರ್ ಅವರು ತಾಂತ್ರಿಕ ಸಮಿತಿ ರಚಿಸಿದ್ದು, ಈ ಸಮಿತಿ ವರದಿ ಕೊಟ್ಟ ಬಳಿಕ ಈ ಕೆಲಸ ಮುಂದುವರಿಯಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.