ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಕ್ಕೆ ನಾಲ್ಕು ಪ್ರಶಸ್ತಿ ಲಭಿಸಿರುವುದು ನಮ್ಮ ಹೆಮ್ಮೆ ಹೆಚ್ಚಿಸಿದೆ: ಡಿಕೆಶಿ

Published 25 ಆಗಸ್ಟ್ 2023, 10:49 IST
Last Updated 25 ಆಗಸ್ಟ್ 2023, 10:49 IST
ಅಕ್ಷರ ಗಾತ್ರ

ಬೆಂಗಳೂರು: 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಭಾಗದಲ್ಲಿ ಕನ್ನಡಕ್ಕೆ ನಾಲ್ಕು ಪ್ರಶಸ್ತಿಗಳು ಲಭಿಸಿರುವುದು ಕನ್ನಡಿಗರ ಹೆಮ್ಮೆಯನ್ನು ಹೆಚ್ಚಿಸಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಚಾರವಾಗಿ ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಪ್ರತಿಕ್ರಿಯಿಸಿರುವ ಅವರು, ‘ಅತ್ಯುತ್ತಮ ಕನ್ನಡ ಸಿನಿಮಾ ಪಶಸ್ತಿ ಪಡೆದ ‘ಚಾರ್ಲಿ 777’ ಚಿತ್ರ ತಂಡಕ್ಕೆ, ನಾನ್ ಫೀಚರ್ ವಿಭಾಗದ ಅತ್ಯುತ್ತಮ ಅನ್ವೇಷಣೆ ಸಿನಿಮಾ ಪ್ರಶಸ್ತಿ ಪಡೆದ ‘ಆಯುಷ್ಮಾನ್’ ಚಿತ್ರ ತಂಡಕ್ಕೆ, ತೀರ್ಪುಗಾರರ ವಿಶೇಷ ಮೆಚ್ಚುಗೆ ಪಡೆದ ನಾನ್ ಫೀಚರ್ ವಿಭಾಗದ ಸಾಕ್ಷ್ಯಚಿತ್ರ ಪ್ರಶಸ್ತಿ ಪಡೆದ ಅನಿರುದ್ಧ್ ಜಟ್ಕರ್ ನಿರ್ದೇಶನದ ‘ಬಾಳೆ ಬಂಗಾರ’ ಚಿತ್ರ ತಂಡಕ್ಕೆ ಹಾಗೂ ಅತ್ಯುತ್ತಮ ಸಿನೆಮಾ ವಿಮರ್ಶಕ ಪ್ರಶಸ್ತಿ ಪಡೆದ (ಸ್ಪೆಷಲ್ ಮೆನ್ಷನ್ - ಕ್ರಿಟಿಕ್) ಹಿರಿಯ ಪತ್ರಕರ್ತ ಬಿ.ಎನ್‌ ಸುಬ್ರಮಣ್ಯ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಾ, ಕನ್ನಡದಲ್ಲಿ ಇನ್ನಷ್ಟು ಅತ್ಯುತ್ತಮ ಸಿನಿಮಾಗಳು ಮೂಡಿಬರಲಿ ಎಂದು ಶುಭ ಹಾರೈಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

2021ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗುರುವಾರ ಘೋಷಣೆಯಾಗಿದ್ದು, ಕನ್ನಡ ಭಾಷೆ ವಿಭಾಗದಲ್ಲಿ ರಕ್ಷಿತ್‌ ಶೆಟ್ಟಿ ನಟನೆಯ ‘777 ಚಾರ್ಲಿ’ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದಿದೆ. 69ನೇ ರಾಷ್ಟ್ರೀಯ ಪ್ರಶಸ್ತಿ ಇದಾಗಿದ್ದು, ಪುರಸ್ಕೃತರ ಪಟ್ಟಿಯನ್ನು ತೀರ್ಪುಗಾರರ ಮಂಡಳಿಯ ಅಧ್ಯಕ್ಷ ಕೇತನ್‌ ಮೆಹ್ತಾ ಘೋಷಿಸಿದ್ದಾರೆ.

ಅಲ್ಲು ಅರ್ಜುನ್‌ ಅತ್ಯುತ್ತಮ ನಟ: ಆರ್‌.ಮಾಧವನ್‌ ನಟಿಸಿ, ನಿರ್ದೇಶಿಸಿರುವ ರಾಕೆಟ್ರಿ–ದಿ ನಂಬಿ ಎಫೆಕ್ಟ್‌ ಅತ್ಯುತ್ತಮ ಫೀಚರ್‌ ಫಿಲ್ಮ್‌ ಪ್ರಶಸ್ತಿ ಪಡೆದಿದೆ. ‘ಪುಷ್ಪ’ ಚಿತ್ರದಲ್ಲಿನ ನಟನೆಗಾಗಿ ನಟ ಅಲ್ಲು ಅರ್ಜುನ್‌ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರದಲ್ಲಿನ ನಟನೆಗಾಗಿ ಆಲಿಯಾ ಭಟ್‌ ಹಾಗೂ ‘ಮಿಮಿ’ ಚಿತ್ರದಲ್ಲಿನ ನಟನೆಗಾಗಿ ಕೃತಿ ಸೆನನ್‌ ಅತ್ಯುತ್ತಮ ನಟಿ ಪ್ರಶಸ್ತಿ ಹಂಚಿಕೊಂಡಿದ್ದಾರೆ.

ವಿವೇಕ್‌ ರಂಜನ್‌ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್‌ ಫೈಲ್ಸ್‌’ ರಾಷ್ಟ್ರೀಯ ಭಾವೈಕ್ಯ ಸಾರುವ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದಿದೆ. ಎಸ್‌.ಎಸ್‌.ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌’ ಸಿನಿಮಾ ಆರು ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT