ಬೆಂಗಳೂರು: ‘ತನ್ನ ನೇತೃತ್ವದ ಸರ್ಕಾರವನ್ನು ಉರುಳಿಸಿದವರನ್ನೇ ಜತೆಯಲ್ಲಿ ಕೂರಿಸಿಕೊಂಡು ಪ್ರತಿಭಟಿಸುವ, ಅವರನ್ನು ತಬ್ಬಿಕೊಳ್ಳುವ ದುಃಸ್ಥಿತಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಬಂದಿದೆ’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ನಡೆದ ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದ ವಿವಿಧ ಪಕ್ಷಗಳ ಮುಖಂಡರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಬಿಜೆಪಿ– ಜೆಡಿಎಸ್ ಮೈತ್ರಿ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ, ಸರ್ಕಾರ ಉರುಳಿಸಿದವರ ಬಳಿ ಏಕೆ ನೆಂಟಸ್ತಿಕೆ ಮಾಡಬೇಕು ಎಂಬ ಪ್ರಶ್ನೆ ಜೆಡಿಎಸ್ ಕಾರ್ಯಕರ್ತರಲ್ಲಿದೆ’ ಎಂದರು.
ಚುನಾವಣೆ ಮುಗಿದು 110 ದಿನಗಳಾದರೂ ವಿರೋಧ ಪಕ್ಚದ ನಾಯಕನನ್ನು ಆಯ್ಕೆ ಮಾಡಲು ಬಿಜೆಪಿಗೆ ಸಾಧ್ಯವಾಗಿಲ್ಲ. ಬಿಜೆಪಿ ಮತ್ತು ಜೆಡಿಎಸ್ ಅನುಕೂಲಸಿಂಧು ರಾಜಕಾರಣ ಮಾಡುತ್ತಿವೆ ಎಂದು ದೂರಿದರು.
ಪಕ್ಷ ಸೇರುವವರಿಗೆ ಸ್ವಾಗತ. ಎಲ್ಲರಿಗೂ ಅವಕಾಶಗಳು ದೊರಕುತ್ತವೆ. ಅದಕ್ಕಾಗಿ ತಾಳ್ಮೆಯಿಂದ ಕಾಯಬೇಕು. ಯಾರೂ ಅವಸರ ಮಾಡಬಾರದು. ಕಾಂಗ್ರೆಸ್ ಪಕ್ಷ ಸೇರಲು ಬಂದವರನ್ನು ತಡೆದು, ಅಡ್ಡಿಪಡಿಸಲಾಗಿತ್ತು. ಬಿಜೆಪಿಗೆ ಈಗ ಕಾರ್ಯಕರ್ತರು ನೆನಪಾಗುತ್ತಿದ್ದಾರೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.