ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಮಂಡಳಿ ಆರ್ಥಿಕ ಸ್ಥಿತಿ ಚಿಂತಾಜನಕ: ವೇತನ, ವಿದ್ಯುತ್ ಬಿಲ್ ಪಾವತಿಗೂ ಹಣವಿಲ್ಲ –ಡಿಕೆಶಿ

Published 7 ಜೂನ್ 2023, 6:34 IST
Last Updated 7 ಜೂನ್ 2023, 6:34 IST
ಅಕ್ಷರ ಗಾತ್ರ

ಬೆಂಗಳೂರು: ‘ಜಲಮಂಡಳಿಯ ಆರ್ಥಿಕ ಪರಿಸ್ಥಿತಿ ಬಹಳ ಚಿಂತಾಜನಕವಾಗಿದೆ. ವೇತನ ಹಾಗೂ ವಿದ್ಯುತ್‌ ಬಿಲ್‌ ಪಾವತಿಸಲೂ ಹಣವಿಲ್ಲ. ಸಿಬ್ಬಂದಿ ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

‘2014ರಿಂದ ಇಲ್ಲಿಯವರೆಗೂ ನೀರಿನ ದರ ಪರಿಷ್ಕರಣೆಯಾಗಿಲ್ಲ. ಮಂಡಳಿ ತನ್ನ ಆದಾಯ ಮೂಲವನ್ನು ವೃದ್ಧಿಸಿಕೊಳ್ಳಬೇಕಿದೆ. ಅಕ್ರಮ ಸಂಪರ್ಕವನ್ನು ಶೇ 48ರಿಂದ ಶೇ 28ಕ್ಕೆ ಇಳಿಸಿ ನೀರಿನ ಸೋರಿಕೆಯನ್ನು ಇಳಿಸಿದ್ದಾರೆ. ಆದರೂ ಅನಧಿಕೃತ ನೀರಿನ ಸಂಪರ್ಕ ಹೆಚ್ಚಾಗಿವೆ. ಅದರ ಬಗ್ಗೆ ಪತ್ತೆ ಹಚ್ಚಿ, ವರದಿ ನೀಡಲು ಸೂಚಿಸಲಾಗಿದೆ’ ಎಂದು ಮಂಡಳಿಯ ಅಧಿಕಾರಿಗಳೊಂದಿಗಿನ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

‘ಮಂಡಳಿಗೆ ವಿದ್ಯುತ್‌ ದರದಲ್ಲಿ ರಿಯಾಯಿತಿ ಇದ್ದರೂ ₹104 ಕೋಟಿ ಮೊತ್ತದ ಬಿಲ್‌ ಬರುತ್ತದೆ. ಅದರಲ್ಲೂ ₹90ರಿಂದ ₹95 ಕೋಟಿ ಪಾವತಿಸುವಂತಾಗಿದೆ. ಹೀಗಾಗಿ, ಮಂಡಳಿ ಹೆಚ್ಚು ಸಂಪನ್ಮೂಲ ಕ್ರೂಡೀಕರಿಸಿಕೊಳ್ಳಬೇಕು. ಇಲ್ಲದಿದ್ದರೆ ಉಳಿಗಾಲವಿಲ್ಲ’ ಎಂದರು.

‘ನಗರದ ಎಲ್ಲ ಭಾಗಗಳಲ್ಲಿಯೂ ಶುದ್ಧವಾದ ನೀರನ್ನೇ ಪೂರೈಸಬೇಕು. ಎಲ್ಲೆಲ್ಲಿ ಸಮಸ್ಯೆ  ಇದೆಯೋ ಅಲ್ಲೆಲ್ಲ ನೀರಿನ ಪರೀಕ್ಷೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ. ಹೊರವಲಯದ 110 ಹಳ್ಳಿಗಳಿಗೆ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಕಾಮಗಾರಿ ಪೂರ್ಣಗೊಳಿಸಿ ಸಂಪರ್ಕ ಕಲ್ಪಿಸಬೇಕು. ಕಾವೇರಿ 5ನೇ ಹಂತದ ಯೋಜನೆಯಿಂದ ವರ್ಷಾಂತ್ಯದೊಳಗೆ ನೀರು ಪೂರೈಕೆಯಾಗುವಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಬಿಬಿಎಂಪಿಯಿಂದ ಮಂಡಳಿಗೆ ಬರಬೇಕಾದ ಹಣ ಬಂದಿಲ್ಲ ಎಂಬುದನ್ನು ಅಧಿಕಾರಿಗಳು ತಿಳಿಸಿದ್ದರೆ. ಈ ಬಗ್ಗೆ ಗಮನಹರಿಸಲಾಗುತ್ತದೆ. ನೀರಿನ  ದರ ಏರಿಕೆಗೆ ಸಂಬಂಧಿಸಿದಂತೆ ಮುಂದಿನ ಸಭೆಗಳಲ್ಲಿ ಚರ್ಚಿಸಲಾಗುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT