ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶೂ, ಸಾಕ್ಸ್‌ ನೀಡಲು ಸರ್ಕಾರದ ಬಳಿ ಹಣವಿಲ್ಲದಿದ್ದರೆ ಭಿಕ್ಷೆ ಬೇಡುವೆ: ಡಿಕೆಶಿ

Published : 8 ಜುಲೈ 2022, 7:27 IST
ಫಾಲೋ ಮಾಡಿ
Comments

ಬೆಂಗಳೂರು: ಶಾಲಾ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್‌ ವಿತರಿಸಲು ಸರ್ಕಾರದ ಬಳಿ ಹಣ ಇಲ್ಲದಿದ್ದರೆ ಬಹಿರಂಗವಾಗಿ ಹೇಳಲಿ. ರಾಜ್ಯದ ಜನರ ಬಳಿ ಭಿಕ್ಷೆ ಬೇಡಿ ಮಕ್ಕಳಿಗೆ ಶೂ, ಸಾಕ್ಸ್‌ ಕೊಡಿಸುವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಿವಾಸದಲ್ಲಿ ಶುಕ್ರವಾರ ಉಪಾಹಾರ ಸಭೆ ನಡೆಸಿ ಪಕ್ಷ ಸಂಘಟನೆ ಕುರಿತು ಚರ್ಚಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮಕ್ಕಳು ಶೂ, ಸಾಕ್ಸ್‌ಗಾಗಿ ಶಾಲೆಗೆ ಬರುವುದಿಲ್ಲ ಎಂಬ ಹೇಳಿಕೆ ನೀಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ಗೆ ಸಾಮಾನ್ಯ ಜ್ಞಾನ ಇಲ್ಲ. ಒಳ್ಳೆಯ ಶೂ, ಸಾಕ್ಸ್‌ ತನ್ನ ಮಕ್ಕಳಿಗೂ ಸಿಗಲಿ ಎಂಬ ಆಸೆ ಎಲ್ಲ ಪೋಷಕರಿಗೂ ಇರುತ್ತದೆ. ಇವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆʼ ಎಂದರು.

‘ಮಕ್ಕಳಿಗೆ ಶೂ, ಸಾಕ್ಸ್‌ ಅಗತ್ಯವಿಲ್ಲ ಎಂದು ಹೇಳುವ ಸಚಿವ ನಾಗೇಶ್‌ ಏಕೆ ಒಳ್ಳೆಯ ಬಟ್ಟೆ ಧರಿಸುತ್ತಾರೆ. ಅವರೂ ಲಂಗೋಟಿ ಧರಿಸಿಕೊಂಡು ಓಡಾಡಲಿ ನೋಡೋಣʼ ಎಂದು ಸವಾಲು ಹಾಕಿದರು.

‘ಶೂ, ಸಾಕ್ಸ್‌ ನೀಡಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಹೇಳಲಿ. ಕರ್ನಾಟಕದ ಜನರು ಒಳ್ಳೆಯವರಿದ್ದಾರೆ. ಅವರ ಬಳಿ ಭಿಕ್ಷೆ ಬೇಡಿ ಮಕ್ಕಳಿಗೆ ಶೂ, ಸಾಕ್ಸ್‌ ವಿತರಿಸಲು ವ್ಯವಸ್ಥೆ ಮಾಡುವೆ. ನಾನೂ ದೇಣಿಗೆ ನೀಡುವೆ. ಕಾರ್ಪೋರೇಟ್‌ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ದೇಣಿಗೆಯನ್ನೂ ಕೇಳುವೆʼ ಎಂದು ಶಿವಕುಮಾರ್‌ ಹೇಳಿದರು.

ಪಕ್ಷ ಸಂಘಟನೆ ಕುರಿತು ಚರ್ಚೆ:‘ಪಕ್ಷದ ಪದಾಧಿಕಾರಿಗಳ ಜತೆ ಗುರುವಾರ ಸಭೆ ನಡೆಸಲಾಗಿತ್ತು. ಆ ಕುರಿತು ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದೆ. ಶುಕ್ರವಾರ ಉಪಾಹಾರಕ್ಕೆ ಮನೆಗೆ ಬಾ ಎಂದಿದ್ದರು. ಬಂದು ಉಪಾಹಾರ ಸೇವಿಸಿ ಅವರೊಂದಿಗೆ ಚರ್ಚೆ ನಡೆಸಿದ್ದೇನೆʼ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪಕ್ಷ ಸಂಘಟನೆ, ಬಿಜೆಪಿಯ ದುರಾಡಳಿತದ ವಿರುದ್ಧದ ಹೋರಾಟ, ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಕುರಿತು ಚರ್ಚಿಸಲಾಗಿದೆ ಎಂದರು.

ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT