ಬೆಂಗಳೂರು: ಕಾವೇರಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿ ವಾಸ್ತವಾಂಶ ನ್ಯಾಯಾಲಯದ ಮುಂದಿಟ್ಟಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
‘ಕರ್ನಾಟಕದಲ್ಲಿ ನೀರಿದೆ. ಇದಕ್ಕಾಗಿಯೇ ನೀರು ಬಿಡುಗಡೆ ಮಾಡಿದ್ದು, ಈಗ ಸುಪ್ರೀಂ ಕೋರ್ಟ್ ಮುಂದೆ ನೀರಿಲ್ಲ ಎಂದು ಹೇಳುತ್ತಿದೆ' ಎಂಬ ತಮಿಳುನಾಡು ಪರ ವಕೀಲ ಮುಕುಲ್ ರೋಹಟಗಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಈ ವಿಚಾರವಾಗಿ ನಾವು ಪ್ರತಿಕ್ರಿಯೆ ನೀಡುವುದಿಲ್ಲ. ವಾಸ್ತವಾಂಶವನ್ನು ನ್ಯಾಯಾಲಯದ ಮುಂದಿಟ್ಟಿದ್ದೇವೆ. ಇದು ತಾಂತ್ರಿಕ ವಿಚಾರವಾಗಿದ್ದು, ನಾವು ಆಣೆಕಟ್ಟುಗಳಲ್ಲಿನ ಒಳಹರಿವಿನ ಮಾಹಿತಿಯನ್ನು ನೀಡಿದ್ದೇವೆ’ ಎಂದು ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್‌ನಲ್ಲಿ ಕೆಲವು ಅಂಶಗಳ ಬಗ್ಗೆ ಪ್ರಶ್ನೆ ಎದ್ದಿದ್ದು, ಈ ಎಲ್ಲ ಸಮಸ್ಯೆಗಳಿಗೆ ಮೇಕೆದಾಟುವೊಂದೇ ಪರಿಹಾರ. ಮೇಕೆದಾಟು ಯೋಜನೆ ನಮಗಿಂತ ಹೆಚ್ಚು ತಮಿಳುನಾಡಿಗೆ ಅನುಕೂಲವಾಗಲಿದೆ. ಕರ್ನಾಟಕ ಬಳಸಿಕೊಳ್ಳಲಾಗದ ನೀರು ತಮಿಳುನಾಡಿಗೆ ಸೇರಲಿದೆ. ಈ ನೀರನ್ನು ಸಂಕಷ್ಟದ ಸಮಯದಲ್ಲಿ ಬಳಸಿಕೊಳ್ಳಲು ಈ ಯೋಜನೆ ಅಗತ್ಯವಿದೆ. ಈ ಯೋಜನೆ ಎರಡೂ ರಾಜ್ಯಗಳ ರೈತರ ಹಿತ ಕಾಯಲಿದೆ. ಹೀಗಾಗಿ ನಾನು ತಮಿಳುನಾಡು ಸರ್ಕಾರ ಹಾಗೂ ನಾಯಕರಿಗೆ ಈ ವಿಚಾರದಲ್ಲಿ ಹೃದಯವೈಶಾಲ್ಯತೆ ಪ್ರದರ್ಶಿಸಿ, ಸಹಕಾರ ನೀಡುವಂತೆ ಮನವಿ ಮಾಡುತ್ತೇನೆ’ ಎಂದು ಹೇಳಿದ್ದಾರೆ.
ಕಾವೇರಿ ವಿಚಾರವಾಗಿ ಸರ್ವಪಕ್ಷ ನಿಯೋಗ ತೆಗೆದುಕೊಂಡು ಹೋಗುತ್ತಿರುವುದು ರಾಜಕೀಯ ಮಾಡಲು ಎಂಬ ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ಅವರ ಹೇಳಿಕೆ ಬಗ್ಗೆ ಕೇಳಿದಾಗ, ‘ಕೋರ್ಟ್ ಈ ವಿಚಾರದಲ್ಲಿ ಏನು ಹೇಳಬೇಕೋ ಹೇಳಿದೆ. ಅವರಿಗೆ ಕರ್ನಾಟಕ ರಾಜ್ಯದ ಬಗ್ಗೆ ಹಿತಾಸಕ್ತಿ ಇದ್ದರೆ ಅವರು ನಮ್ಮ ಜೊತೆ ಸೇರಿ ರಾಜ್ಯದ ಪರವಾಗಿ ಧ್ವನಿ ಎತ್ತಲಿ. ಇಲ್ಲದಿದ್ದರೆ ನಮ್ಮ ಕರ್ತವ್ಯ ಮಾಡುತ್ತೇವೆ. ನಾವು ಸರ್ವಪಕ್ಷ ಸಭೆಗೆ ಆಹ್ವಾನ ನೀಡಿದ್ದೆವು. ಅವರಿಗೆ ಬರಲು ಸಾಧ್ಯವಾಗಲಿಲ್ಲ. ನಾವು ಪ್ರಧಾನಮಂತ್ರಿಗಳು ಹಾಗೂ ಕೇಂದ್ರ ಜಲಶಕ್ತಿ ಸಚಿವರು ಸಮಯ ಕೊಟ್ಟಾಗಿ ಸರ್ವಪಕ್ಷ ನಿಯೋಗ ಹೋಗಿ ನಮ್ಮ ವಾದ ಮಂಡಿಸುತ್ತೇವೆ. ನಾವು ರೈತರ ಹಿತವನ್ನು ಕಾಯಬೇಕು ನ್ಯಾಯಾಲಯಕ್ಕೂ ಗೌರವ ನೀಡಬೇಕು’ ಎಂದಿದ್ದಾರೆ.
ಕಾವೇರಿ ವಿಚಾರವಾಗಿ ಕಾನೂನು ತಜ್ಞರ ಜತೆ ಚರ್ಚೆ ಆಗಿದೆಯೇ ಎಂಬ ಪ್ರಶ್ನೆಗೆ, 'ಕಾವೇರಿ ವಿಚಾರವಾಗಿ ಈಗಾಗಲೇ ನಮ್ಮ ತಂಡ ದೆಹಲಿಯಲ್ಲಿ ಕಾನೂನು ತಜ್ಞರ ಜೊತೆ ಚರ್ಚೆ ಮಾಡಿದೆ. ನಾನು ಮುಂದಿನ ದಿನಗಳಲ್ಲಿ ಮತ್ತೊಂದು ಸಭೆ ಮಾಡಲಿದ್ದೇನೆ' ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.