ಮಂಡ್ಯ: ಅಂತಿಮಗೊಳ್ಳದ ಜಾಗ, ಕಸಾಪ ಜಿಲ್ಲಾಧ್ಯಕ್ಷರಿಗೆ ಅನಾರೋಗ್ಯ, ನಡೆಯದ ಪೂರ್ವಭಾವಿ ಸಭೆ ಮೊದಲಾದ ಸಮಸ್ಯೆಗಳಿಂದ, ನಗರದಲ್ಲಿ ನಡೆಸಲು ನಿಗದಿಯಾಗಿರುವ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಡಿಸೆಂಬರ್‌ನಲ್ಲಿ ನಡೆಯುವುದು ಅನುಮಾನವಾಗಿದೆ.
ಸಮ್ಮೇಳನಕ್ಕೆ 5 ತಿಂಗಳು ಉಳಿದಿದ್ದು, ಜಾಗವೇ ಅಂತಿಮಗೊಂಡಿಲ್ಲ, ಸಮಿತಿಗಳ ರಚನೆ ಶುರುವಾಗಿಲ್ಲ. ‘ಜಿಲ್ಲಾ ಕ್ರೀಡಾಂಗಣ ಸಣ್ಣದಾಯಿತು’ ಎಂಬ ಕಾರಣಕ್ಕೆ ನಗರದ ಹೊರವಲಯದಲ್ಲಿ ಎರಡು ಸ್ಥಳಗಳನ್ನು ವೀಕ್ಷಣೆ ಮಾಡಲಾಗಿತ್ತು.
ಮಂಡ್ಯ ಕೆರೆಯಂಗಳದ ಗದ್ದೆ ಬಯಲು ಹಾಗೂ ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ವೇ ಬದಿಯ ಲೇಔಟ್ ಮೈದಾನ – ಈ ಎರಡರಲ್ಲಿ ಒಂದು ಕಡೆ ಸಮ್ಮೇಳನ ನಡೆಸಲು ಉದ್ದೇಶಿಸಲಾಗಿತ್ತು. ಕೆರೆಯಂಗಳದ ಗದ್ದೆಬಯಲಿನ ಜಾಗಕ್ಕೆ ಹೆಚ್ಚಿನ ಲೇಖಕರು ಒಲವು ತೋರಿದ್ದರು. ಜಾಗ ವೀಕ್ಷಿಸಿ 3 ತಿಂಗಳಾಗಿದ್ದು, ಅಂತಿಮ ನಿರ್ಣಯ ಕೈಗೊಂಡಿಲ್ಲ.
ಗದ್ದೆ ಬಯಲಿನಲ್ಲಿ ಸಮ್ಮೇಳನ ನಡೆಸುವುದಾದರೆ ರೈತರಿಗೆ ಒಂದು ಅವಧಿಯ ಭತ್ತ ನಾಟಿ ಮಾಡದಂತೆ ಜಿಲ್ಲಾಡಳಿತ ಸೂಚಿಸಬೇಕು. ಪರಿಹಾರದ ಭರವಸೆ ಕೊಡಬೇಕು. ಆದರೆ ಇದಾವುದೂ ಆಗದಿರುವುದರಿಂದ, ಡಿಸೆಂಬರ್‌ನಲ್ಲಿ ಸಮ್ಮೇಳನ ನಡೆಯುವುದೇ ಎಂಬ ಪ್ರಶ್ನೆ ಮೂಡಿದೆ.
ಜಿಲ್ಲಾಧ್ಯಕ್ಷರಿಗೆ ಅನಾರೋಗ್ಯ: ಸಮ್ಮೇಳನಕ್ಕೆ ಜಿಲ್ಲೆ ಆಯ್ಕೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ರವಿಕುಮಾರ್ ಚಾಮಲಾಪುರ ಅವರು ಬೆನ್ನುಹುರಿ ಮುರಿತಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಅನಾರೋಗ್ಯ ಕೂಡ ಸಮ್ಮೇಳನದ ಚಟುವಟಿಕೆ ಹಿಂದುಳಿಯಲು ಕಾರಣ.
‘ಅವರು 3 ತಿಂಗಳ ಹಿಂದೆಯೇ ಕನ್ನಡಪರ ಸಂಘಟನೆಗಳನ್ನು ಒಂದುಗೂಡಿಸಿ ಸಮ್ಮೇಳನದ ಚಟುವಟಿಕೆ ಆರಂಭಿಸಿದ್ದರು. ಗುಣಮುಖರಾಗುತ್ತಿದ್ದು ಸಮ್ಮೇಳನಕ್ಕೆ ಹಾಜರಾಗುತ್ತಾರೆ. ಕೇಂದ್ರ ಕಸಾಪ ಅಧ್ಯಕ್ಷರು ಸೂಚಿಸಿದರೆ ಚಟುವಟಿಕೆ ಮುಂದುವರಿಸುತ್ತೇವೆ. ಜಾಗ ಅಂತಿಮಗೊಳಿಸುವ ಜೊತೆಗೆ ಸಮಿತಿಗಳ ರಚನೆಗೆ ಚಾಲನೆ ನೀಡಬೇಕು’ ಎಂದು ಕಸಾಪ ಜಿಲ್ಲಾ ಘಟಕದ ಕಾರ್ಯದರ್ಶಿ ಕೃಷ್ಣೇಗೌಡ ಹುಸ್ಕೂರು ತಿಳಿಸಿದರು.
ಸಮ್ಮೇಳನಕ್ಕಾಗಿ ಎರಡು ಸ್ಥಳ ವೀಕ್ಷಣೆ ಸಮಿತಿಗಳ ರಚನೆ ಪ್ರಕ್ರಿಯೆ ಶುರುವಾಗಿಲ್ಲ
ಸಿ.ಎಂ ಭೇಟಿ ನಂತರ ನಿರ್ಧಾರ
‘ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರೊಂದಿಗೆ ಸಭೆ ನಡೆಸಲಾಗಿದೆ ಡಿಸೆಂಬರ್‌ನಲ್ಲೇ ಸಾಹಿತ್ಯ ಸಮ್ಮೇಳನ ನಡೆಸಲು ಪ್ರಯತ್ನಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ದಿನಾಂಕ ನಿಗದಿ ಮಾಡಲಾಗುವುದು. ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸಿ ಶೀಘ್ರ ಜಾಗ ಅಂತಿಮಗೊಳಿಸಲಾಗುವುದು’ ಎಂದು ಕೇಂದ್ರ ಕಸಾಪ ಅಧ್ಯಕ್ಷ ಮಹೇಶ್ ಜೋಶಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.