ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ನಾಶದಿಂದ ಟೊಳ್ಳಾದ ಭೂಮಿ: ಈ ವರ್ಷವೂ ಭೂಕುಸಿತ ಸಾಧ್ಯತೆ

ಮಳೆ ಹೆಚ್ಚಿದ ವರ್ಷಗಳಲ್ಲಿ ಕಾಯಂ ಕುಸಿತ
Last Updated 20 ಜೂನ್ 2021, 19:21 IST
ಅಕ್ಷರ ಗಾತ್ರ

ಬೆಂಗಳೂರು: ಎರಡು ವರ್ಷಗಳಿಂದ ಭೂಕುಸಿತದಿಂದ ತತ್ತರಿಸಿರುವ ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಈ ವರ್ಷವೂ ಭೂಕುಸಿತ ಮರುಕಳಿಸುವ ಸಾಧ್ಯತೆ ದಟ್ಟವಾಗಿದೆ.

ಜೂನ್‌ ಮೊದಲ ವಾರ ಭಾರಿ ಮಳೆ ಆಗಿರುವುದರಿಂದ ರಾಜ್ಯದ ಭೂಕುಸಿತದ ಸಂಭಾವ್ಯ ಪ್ರದೇಶಗಳೆಂದು ಗುರುತಿಸಲಾಗಿರುವ 23 ತಾಲ್ಲೂಕುಗಳಲ್ಲಿ ಅಪಾಯ ಎದುರಾಗಿದೆ. ಇದಕ್ಕೆ ಮುಖ್ಯ ಕಾರಣ ಈ ಪ್ರದೇಶದ ಮೇಲ್ಮಣ್ಣು ನೀರಿನಿಂದ ಸಾಂದ್ರೀಕರಣಗೊಂಡಿದೆ. ಪರಿಣಾಮ ಮುಂಬರುವ ದಿನಗಳಲ್ಲಿ ಸಾಧಾರಣ ಮಳೆ ಆದರೂ ಭೂಕುಸಿತ ಆಗುವ ಸಾಧ್ಯತೆ ದಟ್ಟವಾಗಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಈ ಪ್ರದೇಶದಲ್ಲಿ ವಾರ್ಷಿಕ ಸರಾಸರಿ ಮಳೆ ಪ್ರಮಾಣ ಹೆಚ್ಚು ಕಮ್ಮಿ ಒಂದೇ ರೀತಿ ಇದ್ದರೂ, ಹವಾಮಾನ ಬದಲಾವಣೆ ಪರಿಣಾಮ ಕೆಲವು ಸಂದರ್ಭದಲ್ಲಿ ಒಂದೇ ದಿನ ಅತ್ಯಧಿಕ ಮಳೆ ಆಗುವ ವಿದ್ಯಮಾನ ಹೆಚ್ಚಾಗಿದೆ. ಇದು ಕೂಡ ಭೂಕುಸಿತಕ್ಕೆ ಪ್ರಮುಖ ಕಾರಣವಾಗಿದೆ ಎನ್ನುತ್ತಾರೆ ಅವರು.

ಒಂದೇ ದಿನ ಅಥವಾ ಕೆಲವೇ ಗಂಟೆಗಳಲ್ಲಿ ಅತಿಯಾಗಿ ಮಳೆ ಸುರಿಯುವುದರಿಂದ ಕಾಡಿನ ರಕ್ಷಣಾ ಕವಚವೇ ವ್ಯಾಪಕವಾಗಿ ನಾಶವಾಗುತ್ತಿದೆ ಎಂದು ಭೂಕುಸಿತದ ನಿಯಂತ್ರಣಕ್ಕಾಗಿ ಪರಿಹಾರ ಸೂಚಿಸಲು ಸರ್ಕಾರ ರಚಿಸಿದ್ದ ಅಧ್ಯಯನ ಸಮಿತಿ ತನ್ನ ವರದಿಯಲ್ಲಿ ಹೇಳಿದೆ.

ಭೂಕುಸಿತದ ಕುರಿತು ಅಧ್ಯಯನ ನಡೆಸುತ್ತಿರುವ ಸಂರಕ್ಷಣ ಜೀವಶಾಸ್ತ್ರಜ್ಞ ಡಾ. ಕೇಶವ ಎಚ್‌. ಕೊರ್ಸೆ ‘ಪ್ರಜಾವಾಣಿ’ ಜತೆ ಮಾತನಾಡಿ, ’4 ವರ್ಷಗಳಿಂದ ನಿರಂತರವಾಗಿ ಆಗುತ್ತಿರುವ ಭೂಕುಸಿತದ ಪ್ರದೇಶಗಳಲ್ಲಿ, ಭೂಮಿ ಬಾಯ್ಬಿಟ್ಟಿದ್ದು, ಅದನ್ನು ಮುಚ್ಚುವ ಕಾರ್ಯ ನಡೆದಿಲ್ಲ. ಹೀಗಾಗಿ ಭೂಕುಸಿತದ ಸಾಧ್ಯತೆ ಹೆಚ್ಚಾಗಿದೆ. ಶಿರಸಿ ತಾಲ್ಲೂಕಿನ ಜಾಜಿಗುಡ್ಡೆ ಗ್ರಾಮದಲ್ಲಿ ಕಳೆದ ವರ್ಷ ಭೂಕುಸಿತಸಂಭವಿಸಿದ ಸ್ಥಳದಲ್ಲೇ ಇತ್ತೀಚೆಗೆ ಭೂಕುಸಿತ ಆಗಿದೆ‘ ಎಂದರು.

’ಹೆದ್ದಾರಿ ಮತ್ತು ಇತರ ಅಭಿವೃದ್ಧಿ ಕಾಮಗಾರಿಗಳಿಗಾಗಿ ಗುಡ್ಡಗಳನ್ನು ಲಂಬಕೋನದಲ್ಲಿ ಕತ್ತರಿಸಿರುವುದರಿಂದ ಹೆದ್ದಾರಿ ಉದ್ದಕ್ಕೂ ಭೂಕುಸಿತ ಉಂಟಾಗಿದೆ. ಉಡುಪಿ ಜಿಲ್ಲೆ ಬೈಂದೂರು ಬಳಿಯ ಎತ್ತಿನೆಣೆ ಗುಡ್ಡದಲ್ಲಿ ಹೆದ್ದಾರಿ ಉದ್ದಕ್ಕೂ ಇತ್ತೀಚೆಗೆ ಗುಡ್ಡ ಕುಸಿದಿದೆ ಎಂದು ಅವರು ಹೇಳಿದರು.

’ರಾಜ್ಯದ ಹಲವು ಕಡೆಗಳಲ್ಲಿ ಭೂಕುಸಿತ ಆಗುತ್ತಿದೆ. ಜನ ಎಚ್ಚೆತ್ತುಕೊಂಡಿದ್ದಾರೆ. ಈ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸಿರುವ ಮುಖ್ಯಮಂತ್ರಿಯವರು ಅಗತ್ಯ ಕ್ರಮಕ್ಕೆ ಸೂಚಿಸಿದ್ದಾರೆ. ತಾತ್ಕಾಲಿಕವಾಗಿ ಭೂಕುಸಿತ ತಡೆಯಲು ಆಗುವುದಿಲ್ಲ. ಅಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸಬೇಕು. ಆದರೆ, ದೀರ್ಘಾವಧಿಯಲ್ಲಿ ಕಾರ್ಯಯೋಜನೆ ರೂಪಿಸುವ ಅಗತ್ಯವಿದೆ‘ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ನಿರ್ದೇಶಕ ಡಾ.ಜಿ.ಎಸ್‌.ಶ್ರೀನಿವಾಸ ರೆಡ್ಡಿ ಹೇಳಿದರು.

ಭಾರತೀಯ ಭೂಸರ್ವೇಕ್ಷಣಾ ಇಲಾಖೆಯಿಂದ ಭೂವಲಯೀಕರಣ (ಲ್ಯಾಂಡ್‌ ಜೋನೇಷನ್‌) ಸಮೀಕ್ಷೆ ನಡೆಸಬೇಕಾಗಿದೆ. ಇದರ ಮೂಲಕ ಜನ ವಸತಿ ಎಲ್ಲಿರಬೇಕು, ಅರಣ್ಯ ಪ್ರತ್ಯೇಕಿಸುವುದು ಕಡೆಗೆ ಗಮನಹರಿಸಬೇಕಾಗಿದೆ. ಭೂವಲಯೀಕರಣದ ಸಮೀಕ್ಷೆ ನಡೆಸಲು ಕೋರಲಾಗಿದೆ ಎಂದರು.

ಭೂ ಪ್ರದೇಶ ಟೊಳ್ಳಾಗಲು ಕಾರಣವೇನು?
ಕರಾವಳಿ ಮತ್ತು ಮಲೆನಾಡನ್ನು ಒಳಗೊಂಡ ಪಶ್ಚಿಮಘಟ್ಟದಲ್ಲಿ ನಾಲ್ಕು ದಶಕಗಳಿಂದ ಅವ್ಯಾಹತವಾಗಿ ಅರಣ್ಯ ನಾಶದ ನಡೆದ ಪರಿಣಾಮ ಇಲ್ಲಿನ ಭೂಪ್ರದೇಶ ಟೊಳ್ಳಾಗಿದೆ ಎನ್ನುತ್ತಾರೆ ಸಂರಕ್ಷಣೆ ಜೀವಶಾಸ್ತ್ರಜ್ಞ ಕೇಶವ ಕೊರ್ಸೆ.

ಈ ಪ್ರದೇಶದ ಉಷ್ಣ ವಲಯದ ಕಾಡುಗಳನ್ನು ಕಡಿದಾಗ ಮಣ್ಣಿನಡಿಯೇ ಉಳಿಯುವ ಬೃಹತ್‌ ಗಾತ್ರದ ಮರಗಳ ಬೇರುಗಳು ಕೊಳೆತು ಮಣ್ಣಾಗಲು ಕನಿಷ್ಠ 25 ರಿಂದ 30 ವರ್ಷಗಳು ಬೇಕಾಗುತ್ತದೆ. ಈಗ ಈ ಪ್ರದೇಶಗಳಲ್ಲೆಲ್ಲ ಮಣ್ಣಿನಡಿ ಬೇರುಗಳು ಕೊಳೆತು ದೊಡ್ಡ–ದೊಡ್ಡ ರಂಧ್ರ ಪ್ರದೇಶಗಳು ನಿರ್ಮಾಣವಾಗುತ್ತಿವೆ. ಇಷ್ಟು ವರ್ಷಗಳಲ್ಲಿ ಮೇಲ್ಮೈನಲ್ಲಿ ಮತ್ತೆ ಸಹಜ ಕಾಡುಗಳನ್ನು ಬೆಳೆಸುವ ಪ್ರಯತ್ನಗಳು ನಡೆದಿಲ್ಲ. ಬಹುಪಾಲು ಪ್ರದೇಶಗಳು ರಸ್ತೆ, ಮನೆ, ಪಟ್ಟಣ, ಕೈಗಾರಿಕೆ ಮತ್ತು ಕೃಷಿ ಪ್ರದೇಶಗಳಾಗಿವೆ.

ದೊಡ್ಡ ರಂಧ್ರಗಳಲ್ಲಿ ಮಳೆ ನೀರು ತುಂಬಿ ಮಣ್ಣು ಬಿರಿಯುವುದು ಕೂಡ ಭೂಕುಸಿತಕ್ಕೆ ಕಾರಣವಾಗಿದೆ. ಹೀಗಾಗಿ ಭೂಕುಸಿತದ ಸಾಧ್ಯತೆಗಳು ಹೆಚ್ಚುತ್ತಲೇ ಇವೆ. ಹಲವು ವರ್ಷಗಳ ಅರಣ್ಯ ನಾಶದ ಒಟ್ಟು ಪರಿಣಾಮವೇ ಇದಾಗಿದೆ ಎನ್ನುತ್ತಾರೆ ಕೇಶವ ಕೊರ್ಸೆ.

‘ಶಿರಸಿ, ಯಲ್ಲಾಪುರ, ಸಾಗರ ಹಾಗೂ ಹೊಸನಗರ ತಾಲ್ಲೂಕುಗಳ ಅರಣ್ಯ ಮತ್ತು ಗುಡ್ಡ ಪ್ರದೇಶಗಳಲ್ಲಿ ಆದ ಭೂಕುಸಿತಗಳನ್ನು ಅಭ್ಯಸಿಸಿದಾಗ ಪ್ರಧಾನವಾಗಿ ಈ ಅಂಶ ಕಂಡು ಬಂದಿತು’ ಎಂದಿದ್ದಾರೆ.

ಸಂಭಾವ್ಯ ತಾಲ್ಲೂಕುಗಳು
* ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ (ಕೊಡಗು ಜಿಲ್ಲೆ)
* ಸಕಲೇಶಪುರ (ಹಾಸನ)
* ಕೊಪ್ಪ, ಮೂಡಿಗೆರೆ, ಶೃಂಗೇರಿ, ಚಿಕ್ಕಮಗಳೂರು (ಚಿಕ್ಕಮಗಳೂರು ಜಿಲ್ಲೆ)
* ಕಾರವಾರ, ಅಂಕೋಲ, ಕುಮಟಾ, ಹೊನ್ನಾವರ, ಸಿದ್ಧಾಪುರ, ಶಿರಸಿ, ಯಲ್ಲಾಪುರ, ಜೋಯ್ಡಾ (ಉ.ಕ)
* ಬೆಳ್ತಂಗಡಿ, ಬಂಟ್ವಾಳ, ಪುತ್ತೂರು, ಸುಳ್ಯ, ಮಂಗಳೂರು (ದ.ಕ)
* ಅಲ್ಲದೆ, ಕುಂದಾಪುರ, ತೀರ್ಥಹಳ್ಳಿ, ಹೊಸನಗರ, ಖಾನಾಪುರ ಸೇರಿವೆ

***

ಹಲವು ಕಡೆಗಳಲ್ಲಿ ಪ್ರಾಣ ರಕ್ಷಣೆಯ ಕಾರಣ ಜನ ವಸತಿ ಕಾಯಂ ಆಗಿ ಸ್ಥಳಾಂತರಿಸಬೇಕಾಗುತ್ತದೆ. ಇದಕ್ಕಾಗಿ ಭೂವಲಯದ ಸಮೀಕ್ಷೆ ನಡೆಸಬೇಕು.
-ಡಾ.ಜಿ.ಎಸ್‌.ಶ್ರೀನಿವಾಸ ರೆಡ್ಡಿ, ನಿವೃತ್ತ ನಿರ್ದೇಶಕ, ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT