ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಕಡ್ಡಾಯ: ಅತಿಥಿ ಉಪನ್ಯಾಸಕರ ಆಯ್ಕೆಗೆ ತಡೆ

Published : 26 ಸೆಪ್ಟೆಂಬರ್ 2024, 15:54 IST
Last Updated : 26 ಸೆಪ್ಟೆಂಬರ್ 2024, 15:54 IST
ಫಾಲೋ ಮಾಡಿ
Comments

ಬೆಂಗಳೂರು: ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ನಿಗದಿಪಡಿಸಿದ ವಿದ್ಯಾರ್ಹತೆಯನ್ನು ಕಡ್ಡಾಯಗೊಳಿಸಬೇಕು ಎನ್ನುವ ಹೈಕೋರ್ಟ್‌ ಸೂಚನೆ 2024–25ನೇ ಸಾಲಿನ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಗೆ ತೊಡಕಾಗಿದೆ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಯುಜಿಸಿ ನಿಗದಿ ಮಾಡಿರುವ ಅರ್ಹತೆಗಳನ್ನೇ ಅತಿಥಿ ಉಪನ್ಯಾಸಕರ ಆಯ್ಕೆಗೂ ಅನ್ವಯಿಸಬೇಕು ಎಂದು ಈಚೆಗೆ ಕೋರ್ಟ್‌ ಹೇಳಿತ್ತು. ಹಾಗಾಗಿ, ನೇಮಕಾತಿ ಪ್ರಕ್ರಿಯೆಯನ್ನು ಕಾಲೇಜು ಶಿಕ್ಷಣ ಇಲಾಖೆ ತಾತ್ಕಾಲಿಕವಾಗಿ ತಡೆ ಹಿಡಿದಿದೆ. 

‘ಅತಿಥಿ ಉಪನ್ಯಾಸಕರಿಗೂ ಯುಜಿಸಿ ನಿಯಮ ಕಡ್ಡಾಯ ಮಾಡಲು ಹೈಕೋರ್ಟ್‌ ಸೂಚಿಸಿದೆ. ಕೋರ್ಟ್‌ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಬೇಕೋ ಅಥವಾ ಯುಜಿಸಿ ಅರ್ಹತೆ ಪರಿಗಣಿಸಿ ಮತ್ತೆ ಅರ್ಜಿ ಕರೆಯಬೇಕೋ ಎನ್ನುವ ಕುರಿತು ಸಚಿವರು, ಉನ್ನತಾಧಿಕಾರಿಗಳ ಜತೆ ಚರ್ಚೆ ನಡೆಸಲಾಗುವುದು’ ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಜಿ. ಜಗದೀಶ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಕರಾಗಿ ಕೆಲಸ ಮಾಡುವವರು ಸ್ನಾತಕೋತ್ತರ ಪದವಿಯ ಜೊತೆಗೆ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ) ಇಲ್ಲವೇ, ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್‌) ತೇರ್ಗಡೆಯಾಗಿರಬೇಕು ಅಥವಾ ಪಿಎಚ್‌.ಡಿ ಪದವಿ ಪಡೆದಿರಬೇಕು. ರಾಜ್ಯದ ಅತಿಥಿ ಉಪನ್ಯಾಸಕರೂ ಈ ಎಲ್ಲ ಅರ್ಹತೆ ಹೊಂದಬೇಕು ಎನ್ನುತ್ತದೆ ಯುಜಿಸಿ ನಿಯಮ.

ಕೆಲ ವರ್ಷಗಳ ಹಿಂದೆಯೇ ಉನ್ನತ ಶಿಕ್ಷಣ ಇಲಾಖೆ ರಾಜ್ಯದಲ್ಲೂ ಇದೇ ಮಾನದಂಡ ನಿಗದಿ ಮಾಡಿತ್ತು. ಆದರೆ, ಸರ್ಕಾರಕ್ಕೆ ಮನವಿ ಮಾಡಿದ್ದ ಅತಿಥಿ ಉಪನ್ಯಾಸಕರ ಸಂಘಟನೆಗಳು, ‘ದಶಕಗಳಿಂದ ಕೆಲಸ ಮಾಡುತ್ತಿರುವ ಶೇ 80ರಷ್ಟು ಅತಿಥಿ ಉಪನ್ಯಾಸಕರು ಸ್ನಾತಕೋತ್ತರ ಪದವಿಯನ್ನಷ್ಟೇ ಪಡೆದಿದ್ದಾರೆ. ಕಡಿಮೆ ಗೌರವಧನ ಪಡೆದು ವಾರಕ್ಕೆ ಕೇವಲ ಎಂಟು ಗಂಟೆ ಬೋಧನಾ ಅವಧಿ ನಿರ್ವಹಿಸುತ್ತಿರುವುದರಿಂದ, ಯುಜಿಸಿ ನಿಯಮಗಳನ್ನು ಅನ್ವಯಿಸಬಾರದು’ ಎಂದು ಕೋರಿದ್ದವು. ಹಾಗಾಗಿ, 2025ರ ಜನವರಿ 13ರವರೆಗೂ ಅವಕಾಶ ನೀಡಲಾಗಿತ್ತು. ಈಗ ಕೋರ್ಟ್‌ ನೀಡಿರುವ ಆದೇಶದಿಂದ ನಾಲ್ಕು ತಿಂಗಳ ಅವಕಾಶವೂ ಇಲ್ಲವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT