ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಬರಹದ ಇಂಗ್ಲಿಷ್-ಕನ್ನಡ ನಿಘಂಟು

ತುಪ್ಪದಹಳ್ಳಿಯ ಸರ್ಕಾರಿ ಶಾಲೆಯ ಶಿಕ್ಷಕಿ ಅನಿತಾ ಅವರ ವಿನೂತನ ಪ್ರಯತ್ನ
Last Updated 21 ಫೆಬ್ರುವರಿ 2020, 21:46 IST
ಅಕ್ಷರ ಗಾತ್ರ

ಹೊಳಲ್ಕೆರೆ: ತಾಲ್ಲೂಕಿನ ತುಪ್ಪದಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಟಿ.ಬಿ. ಅನಿತಾ ಪ್ರಾಥಮಿಕ ಶಾಲೆಯ 5ರಿಂದ 7ನೇ ತರಗತಿಯ ಇಂಗ್ಲಿಷ್ ವಿಷಯಕ್ಕೆ ಪ್ರತ್ಯೇಕ ನಿಘಂಟು ರಚಿಸುವ ಮೂಲಕ ವಿನೂತನ ಪ್ರಯೋಗ ಮಾಡಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಕಲಿಕೆ ಹಾಗೂ ಶಿಕ್ಷಕರ ಬೋಧನೆಗೆ ಹೆಚ್ಚು ಅನುಕೂಲವಾಗಿದೆ.

ಏನಿದು ವಿದ್ಯಾರ್ಥಿ ನಿಘಂಟು?: ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಅನೇಕ ನಿಘಂಟುಗಳು ಸಿಗುತ್ತವೆ. ಇದರಲ್ಲಿ ಸಾವಿರಾರು ಪದಗಳು, ಅವುಗಳಿಗೆ ಅರ್ಥ ಇರುತ್ತವೆ. ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಇಂತಹ ನಿಘಂಟಿನಲ್ಲಿ ತಮಗೆ ಬೇಕಾದ ಪದಕ್ಕೆ ಅರ್ಥ ಹುಡುಕುವುದು ಕಷ್ಟ. ಹುಡುಕುವುದಕ್ಕೂ ಹೆಚ್ಚು ಸಮಯ ಬೇಕಾಗುತ್ತದೆ. ಈ ತೊಂದರೆ ತಪ್ಪಿಸುವ ಉದ್ದೇಶದಿಂದ ವಿದ್ಯಾರ್ಥಿ ನಿಘಂಟು ರಚಿಸಲಾಗಿದೆ. ಮೂರೂ ತರಗತಿಗಳ ಎಲ್ಲಾ ಪಾಠಗಳಲ್ಲಿ ಬರುವ ಕ್ಲಿಷ್ಟ ಪದಗಳ ಅರ್ಥಗಳನ್ನು ನಿಘಂಟಿನಲ್ಲಿ ಬರೆಯಲಾಗಿದೆ. ಶೂನ್ಯ ಬಂಡವಾಳದಲ್ಲಿ ಕೈಬರಹದಲ್ಲೇ ನಿಘಂಟು ರಚಿಸಿರುವುದು ವಿಶೇಷ.

‘ಸಣ್ಣ ತರಗತಿಗಳ ವಿದ್ಯಾರ್ಥಿಗಳಿಗೆ ಸೀಮಿತ ಪದಗಳ ಅರ್ಥಗಳು ಮಾತ್ರ ಬೇಕಾಗಿದ್ದು, ದೊಡ್ಡ ನಿಘಂಟಿನಲ್ಲಿರುವ ಅನಗತ್ಯ ಪದಗಳ ಅಗತ್ಯವಿಲ್ಲ. ಪ್ರತಿ ಪಾಠಕ್ಕೆ ಸಂಬಂಧಿಸಿದಂತೆ ಶಿಕ್ಷಕರೇ ನಿಘಂಟು ರಚಿಸಿಕೊಂಡರೆ ಬೋಧನೆ ಹಾಗೂ ಕಲಿಕೆಗೆ ನೆರವಾಗುತ್ತದೆ. ಒಮ್ಮೆ ನಿಘಂಟು ರಚಿಸಿ ಇಟ್ಟುಕೊಂಡರೆ ಪಠ್ಯಕ್ರಮ ಬದಲಾಗುವವರೆಗೆ ಉಪಯೋಗಿಸಬಹುದು’ ಎನ್ನುತ್ತಾರೆ ಶಿಕ್ಷಕಿ ಅನಿತಾ.

ಡ್ರಾಯಿಂಗ್ ಹಾಳೆಗಳಲ್ಲಿ ‘ಎ’ನಿಂದ ‘ಝಡ್’ ವರೆಗೆ ಪ್ರತಿ ಪಾಠದಲ್ಲಿ ಬರುವ ಕ್ಲಿಷ್ಟ ಪದಗಳ ಅರ್ಥಗಳನ್ನು ಬರೆಯಲಾಗಿದೆ. ಕಪ್ಪು ಹಲಗೆ ಪಕ್ಕದಲ್ಲೇ ಪಾಕೆಟ್ ಮಾದರಿಯ ಚಾರ್ಟ್ ನೇತು ಹಾಕಲಾಗಿದೆ. ಪಾಠದಲ್ಲಿ ಬರುವ ಕಠಿಣ ಪದಗಳ ಅರ್ಥವನ್ನು ವಿದ್ಯಾರ್ಥಿಗಳೇ ಹುಡುಕುತ್ತಾರೆ. ‘ಎ’ ನಿಂದ ‘ಝಡ್’ ವರೆಗೆ 26 ಪಾಕೆಟ್‌ಗಳಿದ್ದು, ಪ್ರತಿ ಪಾಕೆಟ್‌ ಮೇಲೆ ದೊಡ್ಡದಾಗಿ ಮೊದಲ ಅಕ್ಷರ ಬರೆಯಲಾಗಿದೆ’ ಎನ್ನುತ್ತಾರೆ ಅವರು.

‘ಇದೇ ಮಾದರಿಯಲ್ಲಿ ಕನ್ನಡ, ಹಿಂದಿ, ಗಣಿತ, ಸಾಮಾನ್ಯ ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳಿಗೂ ನಿಘಂಟು ರಚಿಸಿಕೊಳ್ಳಬಹುದು. ಎಲ್ಲಾ ವಿದ್ಯಾರ್ಥಿಗಳಿಗೂ ನಿಘಂಟು ಖರೀದಿಸುವ ಸಾಮರ್ಥ್ಯ ಇರುವುದಿಲ್ಲ. ಶಿಕ್ಷಕರು ಮಾರುಕಟ್ಟೆಯಲ್ಲಿ ಸಿಗುವ ಒಂದು ನಿಘಂಟು ಬಳಸಬಹುದು. ಪತಿ ಟಿ.ಪಿ. ಉಮೇಶ್ ಕೂಡ ಶಿಕ್ಷಕರಾಗಿದ್ದು, ಅವರೂ ನಿಘಂಟು ರಚನೆಗೆ ಸಲಹೆ, ಸಹಕಾರ ನೀಡಿದ್ದಾರೆ. ಸಹೋದ್ಯೋಗಿಗಳೂ ನೆರವಾಗಿದ್ದಾರೆ’ ಎನ್ನುತ್ತಾರೆ ಅನಿತಾ.

ಇನ್ನೊವೇಟಿವ್ ಟೀಚರ್ ಅವಾರ್ಡ್
ಶಿಕ್ಷಕಿ ಅನಿತಾ ಅವರ ವಿದ್ಯಾರ್ಥಿ ನಿಘಂಟು ತಯಾರಿಕೆಯ ನೂತನ ಆವಿಷ್ಕಾರವನ್ನು ಗುರುತಿಸಿ ನವದೆಹಲಿಯ ಅರಬಿಂದೋ ಸೊಸೈಟಿ ರೂಪಾಂತರ ಸಂಸ್ಥೆಯಾದ ‘ಝೀರೋ ಇನ್ವೆಸ್ಟ್‌ಮೆಂಟ್ ಇನ್ನೊವೇಷನ್ ಫಾರ್ ಎಜುಕೇಶನ್ ಇನಿಷಿಯೇಟಿವ್’ ವತಿಯಿಂದ ‘ಇನ್ನೊವೇಟಿವ್ ಟೀಚರ್ ಅವಾರ್ಡ್‌-2020’ ಪ್ರಶಸ್ತಿ ನೀಡಲಾಗುತ್ತಿದೆ. ಫೆ.28ರಿಂದ ಮಾರ್ಚ್ 2ರವರೆಗೆ ನವದೆಹಲಿಯಲ್ಲಿ ನಡೆಯಲಿರುವ ಶೈಕ್ಷಣಿಕ ಸಮ್ಮೇಳನಕ್ಕೆ ಶಿಕ್ಷಕಿ ಅನಿತಾ ಅವರನ್ನು ಆಹ್ವಾನಿಸಿದ್ದು, ನೂತನ ಶೈಕ್ಷಣಿಕ ಆವಿಷ್ಕಾರದ ವಿಚಾರವನ್ನು ಮಂಡಿಸಲಿದ್ದಾರೆ.

*
ನಾವು ತಯಾರಿಸಿದ ನಿಘಂಟಿನಲ್ಲಿ ಪಠ್ಯಕ್ಕೆ ಸಂಬಂಧಿಸಿದ ಪದಗಳು ಮಾತ್ರ ಇರುವುದರಿಂದ ಮಕ್ಕಳು ಬೇಗನೆ ಪದ ಗುರುತಿಸುತ್ತಾರೆ
-ಟಿ.ಬಿ.ಅನಿತಾ, ತುಪ್ಪದ ಹಳ್ಳಿ ಶಾಲೆಯ ಸಹಶಿಕ್ಷಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT