ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುವರಿ ವರಮಾನ: ವೆಚ್ಚ ಭರಿಸಲು ಅವಕಾಶ

Published 4 ನವೆಂಬರ್ 2023, 23:30 IST
Last Updated 4 ನವೆಂಬರ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ₹ 92 ಸಾವಿರ ಕೋಟಿ ವರಮಾನ ಜಮೆ ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಮೆಯಾಗಿದ್ದ ₹ 82 ಸಾವಿರ ಕೋಟಿಗೆ ಹೋಲಿಸಿದರೆ ₹ 10 ಸಾವಿರ ಕೋಟಿ ಹೆಚ್ಚುವರಿ ವರಮಾನ ಬಂದಿದೆ. ಹೆಚ್ಚುವರಿ ವರಮಾನ ಸಂಗ್ರಹದಿಂದ ‘ಗ್ಯಾರಂಟಿ’ಗಳ ವೆಚ್ಚ ಭರಿಸಲು ಸಾಧ್ಯವಾಗಿದೆ ಎಂದು ಆರ್ಥಿಕ ಇಲಾಖೆಯ ಮೂಲಗಳು ತಿಳಿಸಿವೆ.

‘ರಾಜ್ಯದ ಪಾಲಿನ ಜಿಎಸ್‌ಟಿ ₹ 52,760 ಕೋಟಿ (ಕಳೆದ ವರ್ಷ 47 ಸಾವಿರ ಕೋಟಿ), ಅಬಕಾರಿ ಮೂಲದಿಂದ ₹ 19 ಸಾವಿರ ಕೋಟಿ (ಕಳೆದ ವರ್ಷ ₹ 17 ಸಾವಿರ ಕೋಟಿ), ಗಣಿ ಇಲಾಖೆಯಿಂದ ₹ 3,900 ಕೋಟಿ (ಕಳೆದ ವರ್ಷ ₹ 3 ಸಾವಿರ ಕೋಟಿ) ವರಮಾನ ಬಂದಿದೆ. ಹೀಗಾಗಿ ವೆಚ್ಚ ನಿರ್ವಹಣೆಗೆ ಯಾವುದೇ ಸಮಸ್ಯೆ ಆಗಿಲ್ಲ’ ಎಂದೂ ಮೂಲಗಳು ಹೇಳಿವೆ.

ಹೊಸ ಯೋಜನೆಗಳಿಗೆ ತಡೆ: ವಿವಿಧ ಕಾಮಗಾರಿಗಳ ಬಾಕಿ ಬಿಲ್ ₹ 25 ಸಾವಿರ ಕೋಟಿ, ಪ್ರಗತಿಯಲ್ಲಿರುವ ಕಾಮಗಾರಿಗಳ ಮೊತ್ತ ₹ 27 ಸಾವಿರ ಕೋಟಿ ಭರಿಸುವುದು ದೊಡ್ಡ ಸವಾಲು. ಹಿಂದಿನ ಸರ್ಕಾರ ಅಂದಾಜು ವೆಚ್ಚದ ಯೋಜನೆಗಳಿಗೆ ಸಾಂಕೇತಿಕವಾಗಿ ಅನುದಾನ ಕಾಯ್ದಿರಿಸಿ ಕಾಮಗಾರಿಗೆ ಚಾಲನೆ ನೀಡಿರುವುದು ಸಮಸ್ಯೆಗೆ ಕಾರಣ. ಹೀಗಾಗಿ, ಅಗತ್ಯವೆನಿಸಿದ ಮತ್ತು ತುರ್ತು ಕಾಮಗಾರಿಗಳಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಹೊಸ ಯೋಜನೆಗಳಿಗೆ ಸದ್ಯಕ್ಕೆ ತಡೆ ಹಾಕಲಾಗಿದೆ ಎಂದೂ ಮೂಲಗಳು ತಿಳಿಸಿವೆ.

ನೀರಾವರಿ ಪಂಪ್ ಸೆಟ್‌ಗಳಿಗೆ ಪೂರೈಸುವ ಉಚಿತ ವಿದ್ಯುತ್‌ಗೆ ವಾರ್ಷಿಕ ₹ 15 ಸಾವಿರ ಕೋಟಿ ವೆಚ್ಚವಾಗುತ್ತಿತ್ತು. ಆ ಮೊತ್ತ ಈ ಬಾರಿ 21 ಸಾವಿರ ಕೋಟಿಗೆ ಹೆಚ್ಚಳವಾಗಲಿದೆ ಎಂದು ಇಂಧನ ಇಲಾಖೆ ಮೂಲಗಳು ಮಾಹಿತಿ ನೀಡಿವೆ. ವಿದ್ಯುತ್ ಬೇಡಿಕೆ ಸರಿದೂಗಿಸಲು ಖರೀದಿಗೆ ವ್ಯಯಿಸಲಿರುವ ಮೊತ್ತ ಪ್ರತ್ಯೇಕವಾಗಿರಲಿದೆ ಎಂದು ಆರ್ಥಿಕ ಇಲಾಖೆಯ ಮೂಲಗಳು ವಿವರಿಸಿವೆ.

ನರೇಗಾ ಬಾಕಿ ಬಿಡುಗಡೆ: 3–4 ವರ್ಷಗಳಿಂದ ಬಾಕಿ ಇದ್ದ ಜಿಎಸ್‌ಟಿ ಪರಿಹಾರ ಮೊತ್ತ ₹ 2,300 ಕೋಟಿಯಲ್ಲಿ ₹ 1,190 ಕೋಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ನರೇಗಾ ಯೋಜನೆಯಡಿ ಪ್ರಸಕ್ತ ಆರ್ಥಿಕ ವರ್ಷದ ಕೂಲಿ ವೆಚ್ಚದ ಮೊತ್ತ ₹ 600 ಕೋಟಿ ಶುಕ್ರವಾರ ಬಿಡುಗಡೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT