ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ | ಪಾಳು ಮನೆಯಲ್ಲಿ 5 ಅಸ್ಥಿಪಂಜರ ಪತ್ತೆ

Published 29 ಡಿಸೆಂಬರ್ 2023, 6:57 IST
Last Updated 29 ಡಿಸೆಂಬರ್ 2023, 6:57 IST
ಅಕ್ಷರ ಗಾತ್ರ

ಚಿತ್ರದುರ್ಗ: ನಗರದ ಚಳ್ಳಕೆರೆ ಗೇಟ್‍ ಸಮೀಪದ ಪಾಳು ಮನೆಯೊಂದರಲ್ಲಿ ಐದು ಅಸ್ಥಿಪಂಜರಗಳು ಪತ್ತೆಯಾಗಿವೆ. ಗುರುವಾರ ತಡರಾತ್ರಿ ವರೆಗೂ ಮನೆಯಲ್ಲೇ ಬೀಡುಬಿಟ್ಟು ಪರಿಶೀಲನೆ ನಡೆಸಿದ ಪೊಲೀಸರಿಗೆ ಮನೆಯಲ್ಲಿ ಐದು ಅಸ್ಥಿ ಪಂಜರಗಳಿರುವುದು ಖಚಿತವಾಗಿದೆ.

ಗುರುವಾರ ರಾತ್ರಿ 9 ಗಂಟೆ ವೇಳೆಗೆ ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಶವಗಳಿವೆ ಎಂಬ ಸುದ್ದಿ ಪೊಲೀಸರಿಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ ಮನೆಯ ಬಾಗಿಲು ತೆರೆದಾಗ ಮನೆಯ ಪ್ರತಿ ಕೋಣೆಯಲ್ಲೂ ಮೃತಪಟ್ಟ ವ್ಯಕ್ತಿಗಳ ಅಸ್ಥಿಪಂಜರಗಳು ಕಂಡುಬಂದಿವೆ.

ರಾತ್ರಿ 11 ಗಂಟೆ ವೇಳೆಗೆ ದಾವಣಗೆರೆಯಿಂದ ವಿಧಿ ವಿಜ್ಞಾನ ತಜ್ಞರ ತಂಡ ಆಗಮಿಸಿ ಪರಿಶೀಲನೆ ನಡೆಸುವಾಗ ತಲೆಯ ಬುರುಡೆಗಳು ಪತ್ತೆಯಾಗಿವೆ. ಮನೆಯಲ್ಲಿ ಮೃತಪಟ್ಟಿರುವವರ ಸಂಖ್ಯೆ ನಾಲ್ಕು ಅಥವಾ ಐದು ಜನ ಎಂಬುದನ್ನು ಪೊಲೀಸರು ಅಧಿಕೃತವಾಗಿ ಖಚಿತಪಡಿಸಬೇಕಿದೆ.

‘ಕಳೆದ ನಾಲ್ಕೈದು ವರ್ಷಗಳಿಂದ ಈ ಮನೆಯ ಬಾಗಿಲು ತೆರೆದಿದ್ದೇ ನೋಡಿಲ್ಲ’ ಎಂದು ಅಕ್ಕಪಕ್ಕದ ನಿವಾಸಿಗಳು ಹೇಳಿಕೊಂಡಿದ್ದಾರೆ. ಈ ಮನೆ ದೊಡ್ಡಸಿದ್ದವ್ವನಹಳ್ಳಿ ಮೂಲದ ನಿವೃತ್ತ ಸಿವಿಲ್‌ ಎಂಜಿನಿಯರ್ ಜಗನ್ನಾಥ ರೆಡ್ಡಿ ಎನ್ನುವವರಿಗೆ ಸೇರಿದೆ. ಆದರೆ, ಮನೆಯಲ್ಲಿ ಮೃತಪಟ್ಟಿರುವ ದೇಹಗಳು ಯಾರದು ಎನ್ನುವ ಖಚಿತ ಮಾಹಿತಿ ಇಲ್ಲ. ಆದರೆ, ಕಳೆದ ನಾಲ್ಕೈದು ವರ್ಷದಿಂದ ಈ ಕುಟುಂಬದವರು ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಈ ಹಿಂದೆ ಈ ಮನೆಯಲ್ಲಿ ನಿವೃತ್ತ ಎಂಜಿನಿಯರ್ ಜಗನ್ನಾಥ ರೆಡ್ಡಿ (70), ಪತ್ನಿ ಪ್ರೇಮಾವತಿ (60), ಮಗಳು ತ್ರಿವೇಣಿ (42), ಮಗ ಪುತ್ರರಾದ ಕೃಷ್ಣಾ ರೆಡ್ಡಿ (40) ಹಾಗೂ ನರೇಂದ್ರ ರೆಡ್ಡಿ (38) ಎಂಬುವವರು ವಾಸವಾಗಿದ್ದರು ಎಂದು ತಿಳಿದು ಬಂದಿದೆ.

ಜಗನ್ನಾಥ ರೆಡ್ಡಿ ಅವರಿಗೆ ಮೂವರು ಗಂಡು ಮಕ್ಕಳು, ಒಬ್ಬ ಪುತ್ರಿ ಇದ್ದರು. ಯಾರಿಗೂ ಮದುವೆ ಆಗಿರಲಿಲ್ಲ ಎನ್ನಲಾಗಿದೆ. ಹಿರಿಯ ಮಗ ಮಂಜುನಾಥ ರೆಡ್ಡಿ ಎಂಬುವವರು ಈ ಹಿಂದೆಯೇ ಮೃತಪಟ್ಟಿದ್ದರು ಎನ್ನುತ್ತಾರೆ ಸಂಬಂಧಿಕರು.

ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರು ಎಲ್ಲ ಅಸ್ಥಿಗಳ ಮಾದರಿ ಸಂಗ್ರಹಿಸಿದ್ದು, ಮುಂದಿನ ತನಿಖೆಯಿಂದ ಇಲ್ಲಿ ಮೃತಪಟ್ಟವರು ಯಾರು ಎನ್ನುವುದನ್ನು ಅಧಿಕೃತವಾಗಿ ಖಚಿತಪಡಿಸಬೇಕಾಗಿದೆ.

‘2019ರಲ್ಲಿ ಮನೆಯಿಂದ ವಾಸನೆ ಬರುತ್ತಿತ್ತು. ಆಗ ಇಲಿ ಸತ್ತಿರಬಹುದು ಎಂದು ಭಾವಿಸಲಾಗಿತ್ತು. ಕೆಲ ದಿನ ವಾಸನೆ ಬಂದು ನಿಂತಿತ್ತು. ಆನಂತರ ಯಾರೂ ಆ ಮನೆಯ ಕಡೆಗೆ ಗಮನ ಹರಿಸಿರಲಿಲ್ಲ’ ಎನ್ನುತ್ತಾರೆ ಸ್ಥಳೀಯರು.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಐಜಿಪಿ‌ ತ್ಯಾಗರಾಜನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಘಟನಾ ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಡಿವೈಎಸ್‍ಪಿ ಅನಿಲ್ ಕುಮಾರ್, ಸಿಪಿಐ ನಯಿಂ ಸೇರಿದಂತೆ ಬಡಾವಣೆ ಠಾಣೆ ಪೊಲೀಸರು ರಾತ್ರಿ 1 ಗಂಟೆಯವರೆಗೆ ಇದ್ದು ಮಾಹಿತಿ ಸಂಗ್ರಹ ಮಾಡಿದರು.

ಮನೆಯ ಮಾಲೀಕರಾದ ಜಗನ್ನಾಥ ರೆಡ್ಡಿ ಅವರ ಸಂಬಂಧಿಕ ಪವನ್ ಕುಮಾರ್ ಅವರು ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

‘ಮನೆಯಲ್ಲಿ ನಿವೃತ್ತ ಎಂಜಿನಿಯರ್ ಜಗನ್ನಾಥ ರೆಡ್ಡಿ, ಅವರ ಪತ್ನಿ ಪ್ರೇಮಕ್ಕ, ಪುತ್ರಿ ತ್ರಿವೇಣಿ, ಪುತ್ರರಾದ ಕೃಷ್ಣರೆಡ್ಡಿ ಹಾಗೂ ನರೇಂದ್ರ ರೆಡ್ಡಿ ವಾಸವಾಗಿದ್ದರು. ಆದರೆ, ಸುಮಾರು ವರ್ಷಗಳಿಂದ ಜಗನ್ನಾಥ ರೆಡ್ಡಿ ಅವರ ಕುಟುಂಬ ನಮ್ಮ ಸಂಪರ್ಕದಲ್ಲಿ ಇರಲಿಲ್ಲ. ನಮ್ಮ ಮನೆಗೆ ಅವರು ಬರುತ್ತಿರಲಿಲ್ಲ, ನಾವು ಅವರ ಮನೆಗೆ ಹೋಗುತ್ತಿರಲಿಲ್ಲ. ಕೆಲವು ವರ್ಷಗಳಿಂದ ಈ ಕುಟುಂಬ ಎಲ್ಲಿಯೂ ಕಂಡಿಲ್ಲ’ ಎಂದು ಪವನ್ ಕುಮಾರ್ ತಿಳಿಸಿದ್ದಾರೆ.

‘ಇಲ್ಲಿ ಪತ್ತೆಯಾಗಿರುವ ಅಸ್ಥಿ ಪಂಜರಗಳು ಅವರದ್ದೇ ಆಗಿರುವ ಅನುಮಾನವೂ ಇದೆ. 3 ವರ್ಷಗಳ ಹಿಂದೆ ಮೃತಪಟ್ಟರುವ ಶಂಕೆ ಕಾಣಿಸುತ್ತಿದೆ. ಈ ಘೋರ ಸಾವಿನ ಬಗ್ಗೆ ಅನುಮಾನವಿದೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

2019ರ ಜನವರಿಯಲ್ಲಿ ಜಗನ್ನಾಥ ರೆಡ್ಡಿ ಅವರ ಮನೆಯ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಜನವರಿ-ಏಪ್ರಿಲ್ ನಡುವೆ ಘಟನೆ ನಡೆದಿರಬಹುದು
ಧರ್ಮೇಂದ್ರ ಕುಮಾರ್ ಮೀನಾ,ಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಸಯನೈಡ್ ಸೇವನೆ ಶಂಕೆ

ಮನೆಯೊಳಗೆ ಬೆಳಕು ಬಾರದಂತೆ ಕಿಟಕಿ, ಬಾಗಿಲನ್ನು ಸಂಪೂರ್ಣ ಮುಚ್ಚಿದ್ದ ಕುಟುಂಬ, ಸಯನೈಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮನೆಯಲ್ಲಿ ಪತ್ತೆಯಾಗಿರುವ ಅಸ್ಥಿ ಪಂಜರದ ಸ್ಥಿತಿ ಗಮನಿಸಿದ ಪೊಲೀಸರಲ್ಲಿ ಸಯನೈಡ್ ಸೇವನೆ ಶಂಕೆ ಮೂಡಿದೆ.

ಅಸ್ಥಿಪಂಜರಗಳಲ್ಲಿ ಮೂರು ಮಂಚದ ಮೇಲೆ, ಒಂದು ಮಂಚದ ಕೆಳಗೆ, ಮತ್ತೊಂದು ನಡುಮನೆಯಲ್ಲಿ ಪತ್ತೆಯಾಗಿವೆ. ಮಲಗಿದವರ ಹೊದಿಕೆಯೂ ಆಚೀಚೆ ಕದಲಿಲ್ಲ. ಇದನ್ನು ಗಮನಿಸಿದರೆ ಸಯನೈಡ್‌ ಸೇವಿಸಿ ತಕ್ಷಣ ಪ್ರಾಣ ಕಳೆದುಕೊಂಡಿರಬಹುದು ಎಂದು ಪೊಲಿಸರು ಶಂಕಿಸಿದ್ದಾರೆ.

‌‘ತಮ್ಮ ನರೇಂದ್ರ ರೆಡ್ಡಿ ವಿಚಾರದಲ್ಲಿ ನೊಂದಿದ್ದ ಕೃಷ್ಣ ರೆಡ್ಡಿ, 2008ರಲ್ಲೇ ಬಳ್ಳಾರಿಯಿಂದ ಸಯನೈಡ್ ಖರೀದಿಸಿ ತಂದು ಮನೆಯಲ್ಲಿಟ್ಟಿದ್ದರು. ನಮ್ಮಲ್ಲಿ ಒಬ್ಬರು ಇಲ್ಲವಾದರೂ ಮನೆಯವರೆಲ್ಲ ಜಗತ್ತಿನಿಂದ ಕಣ್ಮರೆಯಾಗುತ್ತೇವೆ’ ಎಂದು ಆಗಾಗ್ಗೆ ಹೇಳುತ್ತಿದ್ದರು ಎನ್ನುತ್ತಾರೆ ಸಂಬಂಧಿಕರು.

ಕೆಲವು ವರ್ಷಗಳಿಂದ ಪ್ರಜ್ಞಾಪೂರ್ವಕವಾಗಿ ನಾಗರಿಕ ಸಮಾಜದಿಂದ ದೂರವೇ ಉಳಿದಿದ್ದ ಕುಟುಂಬ, ಹತ್ತಿರದ ಸಂಬಂಧಿಗಳು, ಆಪ್ತ ಸ್ನೇಹಿತರು ಒಳಗೊಂಡಂತೆ ಯಾರೊಬ್ಬರ ಸಂಪರ್ಕದಲ್ಲೂ ಇರಲಿಲ್ಲ. ಜೀವನದಲ್ಲಿ ಬೇಸತ್ತಿರುವುದಾಗಿಯೂ, ಕೇರಳ ಅಥವಾ ಬೇರೆ ಯಾವುದೋ ರಾಜ್ಯಕ್ಕೆ ತೆರಳುವುದಾಗಿಯೂ ಕೆಲವರಲ್ಲಿ ಹೇಳಿಕೊಂಡಿದ್ದರು ಎನ್ನಲಾಗಿದೆ. ಈ ಕಾರಣದಿಂದಾಗಿಯೇ ಅವರ ಅನುಪಸ್ಥಿತಿ ಬಗ್ಗೆ ಯಾರೊಬ್ಬರೂ ತಲೆ ಕೆಡಿಸಿಕೊಂಡಿಲ್ಲ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT