ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಐಟಿ ವಲಯಕ್ಕೆ ಕಾರ್ಯತಂತ್ರ ಸಮಿತಿ ರಚನೆ: ಸಚಿವ ರವಿಶಂಕರ್ ಪ್ರಸಾದ್‌

ವಿಪತ್ತಿನಲ್ಲಿ ಐಟಿ ಕಾರ್ಯನಿರ್ವಹಣೆ–ಕೇಂದ್ರದ ನಿರ್ಧಾರ
ಫಾಲೋ ಮಾಡಿ
Comments

ಬೆಂಗಳೂರು: ‘ಕೋವಿಡ್‌ನಂತಹ ಪರಿಸ್ಥಿತಿ ಎದುರಾದಾಗ ಐಟಿ ಹಾಗೂ ಸಂಬಂಧಿತ ವಲಯಗಳು ಕಾರ್ಯ ನಿರ್ವಹಣೆ, ಅನುಸರಿಸಬೇಕಾದ ಮಾರ್ಗಸೂಚಿ, ಪರಿಹಾರ ಕ್ರಮಗಳ ಬಗ್ಗೆ ರೂಪುರೇಷೆ ಸಿದ್ಧಪಡಿಸಲು ರಾಷ್ಟ್ರ ಮಟ್ಟದ ಕಾರ್ಯತಂತ್ರ ಸಮಿತಿ ರಚಿಸಲಾಗುವುದು’ ಎಂದು ಕೇಂದ್ರದ ಮಾಹಿತಿ ತಂತ್ರಜ್ಞಾನ ಮತ್ತು ದೂರಸಂಪರ್ಕ ಸಚಿವ ರವಿಶಂಕರ್ ಪ್ರಸಾದ್‌ ಹೇಳಿದರು.

ಮಂಗಳವಾರ ವಿವಿಧ ರಾಜ್ಯಗಳ ಐಟಿ, ಬಿಟಿ ಸಚಿವರ ಜತೆಗೆ ವಿಡಿಯೊ ಸಂವಾದ ನಡೆಸಿದ ಅವರು, ‘ಐಟಿ ವಲಯ ಮಾತ್ರವಲ್ಲದೆ, ಎಲ್ಲ ರಾಜ್ಯಗಳು ಅನ್ವೇಷಣೆ, ಸ್ಟಾರ್ಟ್‌ಅಪ್‌ಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಇ-ಆಡಳಿತ, ಇ-ಪಾಸ್‌ಗಳ ಪರಿಣಾಮಕಾರಿ ಜಾರಿಗೆ ಗಮನ ಹರಿಸಲಾಗುವುದು’ ಎಂದರು.

‘ಕೋವಿಡ್‌ ಸಮಸ್ಯೆ ಎದುರಾದಾಗಿನಿಂದ ಬಹುತೇಕ ಎಲ್ಲ ವಲಯಗಳ ಕೆಲಸದ ರೀತಿ ನೀತಿ ಬದಲಾಗಿದ್ದು, ಶೇ 80ರಷ್ಟು ಐಟಿ ವೃತ್ತಿಪರರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಬಹುತೇಕ ಎಲ್ಲ ಕೆಲಸ ಕಾರ್ಯಗಳು ಆನ್‌ಲೈನ್‌ ಮೂಲಕವೇ ನಡೆಯುತ್ತಿದೆ. ಇದಕ್ಕೆ ಅನುಕೂಲವಾಗುವಂತೆ ಭಾರತ್‌ ನೆಟ್‌ ಯೋಜನೆ ಮೂಲಕ ದೇಶದ ಮೂಲೆಮೂಲೆಗೂ ಇಂಟರ್ನೆಟ್‌ ಸಂಪರ್ಕ ಜಾಲ ಬಲಪಡಿಸಲಾಗುತ್ತದೆ’ ಎಂದು ಹೇಳಿದರು.

‘ಮೇಕ್‌ ಇನ್‌ ಇಂಡಿಯಾ ಯೋಜನೆಗಳ ಕಾರ್ಯರೂಪಕ್ಕೆ ಇದು ಸಕಾಲ’ ಎಂದ ಅವರು, ‘ಕೋವಿಡ್‌ ನಂತರ ಆರೋಗ್ಯ ಸೇವೆಯಲ್ಲೂ ತಂತ್ರಜ್ಞಾನದ ಬಳಕೆ ಹೆಚ್ಚಿದೆ. ಕರ್ನಾಟಕ ಸೇರಿಂದಂತೆ ಮಹಾರಾಷ್ಟ್ರ, ತಮಿಳುನಾಡು ಮತ್ತು ತೆಲಂಗಾಣಗಳಲ್ಲಿ ಆನ್‌ಲೈನ್‌ ಆರೋಗ್ಯ ಸೇವೆ ಉತ್ತಮವಾಗಿದ್ದು, ಇತರ ರಾಜ್ಯಗಳಲ್ಲೂ ಇದು ವಿಸ್ತರಣೆ ಆಗಬೇಕು’ ಎಂದರು.

‘ಆಪ್ತಮಿತ್ರ ಸಹಾಯವಾಣಿ ಹೆಗ್ಗಳಿಕೆ’
‘ಶಿಕ್ಷಣ, ಅಗತ್ಯ ವಸ್ತುಗಳ ಪೂರೈಕೆ ಮುಂತಾದ ಹಲವು ಕಾರ್ಯಗಳಲ್ಲಿ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ಪರಿಹಾರ ಒದಗಿಸುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ’ ಎಂದು ಐಟಿ, ಬಿಟಿ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ವಿವರಿಸಿದರು.

‘500ಕ್ಕೂ ಹೆಚ್ಚು ವೃತ್ತಿಪರರು 'ಆಪ್ತ ಮಿತ್ರ ಹೆಲ್ಪ್‌ಲೈನ್‌'ನ ಕಾಲ್‌ ಸೆಂಟರ್‌ನಲ್ಲಿ ಹಗಲಿರುಳು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿನಿತ್ಯ ಸುಮಾರು 50 ಸಾವಿರ ಕರೆಗಳನ್ನು ಸ್ವೀಕರಿಸಿ, ಜನರ ಅಗತ್ಯಗಳಿಗೆ ಸ್ಪಂದಿಸುತ್ತಿದ್ದಾರೆ.

ಇ-ಕಾಮರ್ಸ್‌ಗೆ ಪರ್ಯಾಯವಾದ ವ್ಯವಸ್ಥೆ ಕಂಡುಕೊಂಡಿದ್ದು, ರೆಡ್‌ಜೋನ್‌ನಲ್ಲಿರುವ ಜನ ಮನೆಯಿಂದ ಹೊರ ಬರುವ ಅಗತ್ಯ ಬಾರದಂತೆ ಎಲ್ಲ ವಸ್ತುಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಆಗುತ್ತಿದೆ. ದಿನಸಿ, ಹಾಲು, ಔಷಧ, ತರಕಾರಿ ಮುಂತಾದ ವಸ್ತುಗಳನ್ನು ಮನೆಗೆ ತಲುಪಿಸಲು ವಿಧಿಸುತ್ತಿರುವ ದರ ಕೇವಲ ₹ 10. ಒಂದೇ ರೀತಿಯ ಸೇವೆ (ಪರಿಹಾರ ಸಾಮಗ್ರಿಗಳು) ಬೇರೆ ಬೇರೆ ಇಲಾಖೆಗಳಿಂದ ಪುನರಾವರ್ತನೆ ಆಗದಂತೆ ತಡೆಯಲು ತಂತ್ರಜ್ಞಾನದ ಮೊರೆ ಹೋಗಲಾಗಿದೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT