ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಟಿಯು ವಿಭಜನೆ: ಉತ್ತರ ಕರ್ನಾಟಕಕ್ಕೆ ಅನ್ಯಾಯ, ಪ್ರಸ್ತಾವ ಕೈಬಿಡಲು ಆಗ್ರಹ

Last Updated 11 ಫೆಬ್ರುವರಿ 2019, 7:51 IST
ಅಕ್ಷರ ಗಾತ್ರ

ಬೆಳಗಾವಿ: ‘ಬೆಳಗಾವಿಯಲ್ಲಿ ಕೇಂದ್ರ ಸ್ಥಾನ ಹೊಂದಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ವಿಭಜಿಸುವುದು ಉತ್ತರ ಕರ್ನಾಟಕದ ಜನರಿಗೆ ಮಾಡಿದ ಅವಮಾನವಾಗುತ್ತದೆ. ಹೀಗಾಗಿ, ಈ ಪ್ರಸ್ತಾವವನ್ನು ಸರ್ಕಾರ ಕೈಬಿಡಬೇಕು’ ಎಂದು ಕಾಂಗ್ರೆಸ್‌ ಮುಖಂಡ ಬಸವರಾಜ ರಾಯರಡ್ಡಿ ಆಗ್ರಹಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮಂಡಿಸಿದ ಬಜೆಟ್‌ ನೋಡಿದ್ದೇನೆ. ಜನ ಹಾಗೂ ರೈತರ ಪರವಾದ ಹಲವು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಆದರೆ, ವಿಟಿಯು ವಿಭಜಿಸುವುದಾಗಿ ಪ್ರಸ್ತಾಪಿಸಿರುವುದು ಅತ್ಯಂತ ಆಘಾತಕಾರಿ ಹಾಗೂ ಅಪಾಯಕಾರಿ ಬೆಳವಣಿಗೆ. ಇದು ಬಜೆಟ್‌ಗೆ ಕಪ್ಪು ಚುಕ್ಕೆಯಾಗಿದೆ’ ಎಂದು ಹೇಳಿದರು.

‘ಬಜೆಟ್‌ ಪ್ರತಿಯಿಂದ ಆ ಇಡೀ ಪ್ಯಾರಾವನ್ನೇ ತೆಗೆಯಬೇಕು’ ಒತ್ತಾಯಿಸಿದರು.

‘ವಿಟಿಯು ವಿಭಜಿಸುವುದು ಭಾರತರತ್ನ ಸರ್‌ ಎಂ. ವಿಶ್ವೇಶ್ವರಯ್ಯ ಅವರಿಗೆ ಮಾಡುವ ಅವಮಾನವಾಗುತ್ತದೆ. ವಿಭಜನೆಯಿಂದ ಲಾಭವೇನು, ನಷ್ಟವೇನು ಎನ್ನುವುದನ್ನು ಚಿಂತಿಸಬೇಕಲ್ಲವೇ?’ ಎಂದು ಕೇಳಿದರು.

ಮುಚ್ಚುವಂತೆ ಮಾಡಬೇಡಿ:‘ವಿಟಿಯು ವ್ಯಾಪ್ತಿಯಲ್ಲಿ 217 ಕಾಲೇಜುಗಳಿವೆ. ವಿಭಜಿಸಿದರೆ 160ಕ್ಕೂ ಹೆಚ್ಚು ಕಾಲೇಜುಗಳು ಹಾಸನಕ್ಕೆ ಹೋಗುತ್ತವೆ. ಉತ್ತರದಲ್ಲಿ ಕೆಲವೇ ಕಾಲೇಜುಗಳು ಉಳಿಯುತ್ತವೆ. ವಿದ್ಯಾರ್ಥಿಗಳು ಸಂಖ್ಯೆಯೂ ಕಡಿಮೆಯಾಗುತ್ತದೆ. ಈಗಾಗಲೇ ಬಹಳ ಕಾಲೇಜುಗಳು ಮುಚ್ಚುವ ಹಂತದಲ್ಲಿವೆ. 5 ವರ್ಷದಲ್ಲಿ ಬೆಳಗಾವಿಯ ವಿಶ್ವವಿದ್ಯಾಲಯವನ್ನು ಮುಚ್ಚಬೇಕಾಗುತ್ತದೆ. ಈ ಭಾಗದ ಜನರಿಗೆ ಅನ್ಯಾಯ ಮಾಡಬೇಡಿ’ ಎಂದು ಕೋರಿದರು.

‘ವಿಟಿಯು ಬೆಳಗಾವಿಯಲ್ಲೇ ಉಳಿಸಿಕೊಳ್ಳಲು ಈ ಭಾಗದ ಸಚಿವರು ಹಾಗೂ ಶಾಸಕರು ಮುಖ್ಯಮಂತ್ರಿಗಳ ಮೇಲೆ ಒತ್ತಾಯ ಹೇರಬೇಕು. ಪ್ರಸ್ತುತ ಅಧಿವೇಶನದಲ್ಲಿ ಪ್ರಸ್ತಾಪಿಸಬೇಕು. ಹಳೆ ಮೈಸೂರು ಭಾಗದವರು ಕೂಡ ಔದಾರ್ಯ ತೋರಿಸಬೇಕು. ಸರ್ಕಾರದ ಪ್ರಸ್ತಾವ ಕುರಿತು ಉತ್ತರ ಕರ್ನಾಟಕದವರ ದನಿ ಜೋರಾಗಬೇಕು’ ಎಂದರು.

ಕಿರುಕುಳ ಕೊಡ್ತಿದ್ದಾರೆ ಎನ್ನಬೇಡಿ!:‘ಈ ಸರ್ಕಾರದಲ್ಲಿ, ಎಲ್ಲವನ್ನೂ ಹಳೆ ಮೈಸೂರಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ನಾವು ಹೇಳಿದರೆ, ಕಾಂಗ್ರೆಸ್‌ನವರು ನನಗೆ ಕಿರುಕುಳ ಕೊಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಬಾರದು‌’ ಎಂದು ಛೇಡಿಸಿದ ಅವರು, ‘ಕೈಮುಗಿದು ಕೇಳುತ್ತೇನೆ; ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಬೇಡಿ. ನಾನು ಅಸಹಾಯಕತೆಯಿಂದ ಮಾತನಾಡುತ್ತಿಲ್ಲ. ಅಶಕ್ತನೂ ಅಲ್ಲ. ನಮ್ಮ ಭಾವನೆ ಅರ್ಥ ಮಾಡಿಕೊಳ್ಳಬೇಕು’ ಎಂದು ಕೋರಿದರು.

‘ಐಟಿ ಇಲಾಖೆಯು ವಿಟಿಯುಗೆ ಸೇರಿದ್ದ ₹ 441 ಕೋಟಿಯನ್ನು ತೆರಿಗೆ ವಿನಾಯಿತಿ ಇಲ್ಲದಿರುವುದರಿಂದ ಜಪ್ತಿ ಮಾಡಿತ್ತು. ಈಗ, ಆ ಹಣ ವಾಪಸ್‌ ಸಿಗುತ್ತಿದೆ. ಬಡ್ಡಿ ಸೇರಿ ₹ 470 ಕೋಟಿ ಬರುತ್ತದೆ. ಹಾಸನದಲ್ಲೊಂದು ವಿಶ್ವವಿದ್ಯಾಲಯ ಆರಂಭವಾದರೆ, ನಿರ್ಮಾಣಕ್ಕಾಗಿ ಈ ದೊಡ್ಡ ಮೊತ್ತ ಅಲ್ಲಿಗೆ ಹೋಗುತ್ತದೆ. ಆ ಭಾಗದವರಿಗೆ ಹಣದ ಮೇಲೆ ಕಣ್ಣು ಬಿದ್ದಿದೆ ಎನಿಸುತ್ತಿದೆ’ ಎಂದು ದೂರಿದರು.

‘ವಿಟಿಯುಗೆ ದೊರೆಯುವ ಈ ಹಣವನ್ನು ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿಗೆ ಬಳಸಬೇಕು’ ಎಂದು ಒತ್ತಾಯಿಸಿದರು.

ಹಣ ಪೋಲು:ಹಾಸನದಲ್ಲಿ ವಿಟಿಯು ಸ್ಥಾಪನೆ ಜನರ ಹಣ ಪೋಲು ಮಾಡಿದಂತಾಗುತ್ತದೆ. ವಿಟಿಯು ಹಿಂದಿನ ಕುಲಸಚಿವ ಎಸ್‌.ಎ. ಕೋರಿ ಹಾಗೂ ಈಗಿನ ಕುಲಸಚಿವ ಎಚ್‌.ಎನ್. ಜಗನ್ನಾಥರೆಡ್ಡಿ ಸಮಿತಿಯು ವಿಭಜನೆಗೆ ವಿರೋಧ ವ್ಯಕ್ತಪಡಿಸಿದೆ. ಹೀಗಾಗಿ ಆ ಸಮಿತಿಯನ್ನೇ ರದ್ದುಪಡಿಸಿದ್ದಾರೆ. ಈಗಿನ ಕುಲಪತಿ ಕರಿಸಿದ್ದಪ್ಪ ಕೂಡ ವಿರೋಧ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ. ಭಯದ ವಾತಾವರಣದಲ್ಲಿ ವಿಭಜನೆ ಸರಿಯಲ್ಲ’ ಎಂದರು.

‘ವಿಷಯ ಕುರಿತು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಅಸಹಾಯಕತೆ ವ್ಯಕ್ತಪಡಿಸಿದರು. ನನ್ನ ಮಾತು ಯಾರು ಕೇಳುತ್ತಾರೆ ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿ ಏಕಪಕ್ಷೀಯವಾಗಿ ನಿರ್ಧಾರ ಮಾಡಿದ್ದಾರೆ. ಶಿಕ್ಷಣ ನೀತಿಗೆ ಹಾಗೂ ಯುಜಿಸಿ ನಿಯಮಾವಳಿಗಳಿಗೆ ವಿರುದ್ಧವಾದ ನಿರ್ಧಾರವಿದು. ಹಾಸನಕ್ಕೆ ಬೇಕಿದ್ದರೆ ಕೃಷಿ ವಿಶ್ವವಿದ್ಯಾಲಯ ಮಾಡಿಕೊಳ್ಳಲಿ. ವಿಟಿಯು ಒಡೆದು ಇನ್ನೊಂದು ವಿಶ್ವವಿದ್ಯಾಲಯ ಮಾಡುವ ಅಗತ್ಯವಿಲ್ಲ’ ಎಂದು ಹೇಳಿದರು.

ಕಾಂಗ್ರೆಸ್‌ ಮುಖಂಡ ಅನಿಲ್ ಪೋತದಾರ ಇದ್ದರು.

***
ನಮ್ಮ ಹುಡುಗಿ ಮೇಲೆ ಕಣ್ಹಾಕಬೇಡಿ ಗೌಡ್ರೇ...
ಬೆಳಗಾವಿ:
‘ನಮ್ಮ ಸುಂದರ ಹುಡುಗಿ ಮೇಲೆ ಕಣ್ಹಾಕಬೇಡಿ ಗೌಡ್ರೇ, ಬೇರೆ ಹುಡುಗಿ ಮದುವೆಯಾಗಿ...’ - ವಿಟಿಯು ವಿಭಜಿಸುವ ರಾಜ್ಯ ಸರ್ಕಾರದ ಪ್ರಸ್ತಾವದ ಕುರಿತು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಬಸವರಾಜ ರಾಯರೆಡ್ಡಿ ನೀಡಿದ ಸಲಹೆ ಇದು.

‘ಅಧಿವೇಶನ ಸಂದರ್ಭದಲ್ಲಿ ವಿಟಿಯು ಅತಿಥಿಗೃಹದಲ್ಲಿ ಮುಖ್ಯಮಂತ್ರಿ ತಂಗಿದ್ದರು. ಅಲ್ಲಿನ ಸಮೃದ್ಧತೆ ಹಾಗೂ ಇರುವ ಅನುದಾನವನ್ನೆಲ್ಲ ನೋಡಿ ವಿಭಜಿಸುವ ನಿರ್ಧಾರಕ್ಕೆ ಬಂದಿರಬಹುದು. ಅವರಿಗೆ ಸರಿಯಾಗಿ ಸಲಹೆ ನೀಡುವವರು ಇಲ್ಲವಾಗಿದ್ದಾರೆ’ ಎಂದು ಟೀಕಿಸಿದರು.

‘ಈ ಭಾಗವನ್ನು ಪ್ರತಿನಿಧಿಸುವ ಹಾಗೂ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆದ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸುತ್ತೇನೆ. ವಿಟಿಯು ಇಲ್ಲಿಯೇ ಉಳಿಸುವಂತೆ ಕೋರುತ್ತೇನೆ. ಮುಖ್ಯಮಂತ್ರಿಯೊಂದಿಗೂ ಮಾತನಾಡುತ್ತೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT