ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಪಿಒಗಳಿಗೆ ಹೆಚ್ಚು ಅನುದಾನಕ್ಕೆ ವಿ. ಸುನಿಲ್‌ ಕುಮಾರ್‌ ಆಗ್ರಹ

Published 15 ಡಿಸೆಂಬರ್ 2023, 19:51 IST
Last Updated 15 ಡಿಸೆಂಬರ್ 2023, 19:51 IST
ಅಕ್ಷರ ಗಾತ್ರ

ವಿಧಾನಸಭೆ: ರಾಜ್ಯದಲ್ಲಿರುವ 1,262 ರೈತ ಉತ್ಪಾದಕ ಸಂಸ್ಥೆಗಳಿಗೆ (ಎಫ್‌ಪಿಒ) ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ₹ 2 ಕೋಟಿ ಅನುದಾನವನ್ನು ಮಾತ್ರ ಮೀಸಲಿಟ್ಟಿದ್ದು, ಹೆಚ್ಚಿನ ಅನುದಾನ ಒದಗಿಸಬೇಕು ಎಂದು ಬಿಜೆಪಿಯ ವಿ. ಸುನಿಲ್‌ ಕುಮಾರ್‌ ಆಗ್ರಹಿಸಿದರು.

ಅವರ ಪ್ರಶ್ನೆಗೆ ತೋಟಗಾರಿಕಾ ಸಚಿವರ ಪರವಾಗಿ ಶುಕ್ರವಾರ ಉತ್ತರಿಸಿದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್‌, ‘ಎಫ್‌ಪಿಒಗಳಲ್ಲಿ ₹ 281 ಕೋಟಿ ಮೌಲ್ಯದ ಪರಿಕರಗಳ ಮಾರಾಟ, ₹ 67 ಕೋಟಿ ಮೌಲ್ಯದ ಉತ್ಪನ್ನಗಳ ಮಾರಾಟ ಮತ್ತು ಯಂತ್ರೋಪಕರಣಗಳ ಬಾಡಿಗೆಯಿಂದ ₹ 60 ಕೋಟಿ ವಹಿವಾಟು ನಡೆದಿದೆ’ ಎಂದರು.

1,262 ಎಫ್‌ಪಿಒಗಳಿಗೆ ಕೇವಲ ₹ 2 ಕೋಟಿ ಅನುದಾನ ಒದಗಿಸಿರುವುದು ಸರಿಯಲ್ಲ. ಇದರಿಂದ ರೈತರಿಗೆ ಅನುಕೂಲ ಆಗುವುದಿಲ್ಲ. ಹೆಚ್ಚಿನ ಅನುದಾನ ಒದಗಿಸಬೇಕು ಎಂದು ಸುನಿಲ್‌ ಆಗ್ರಹಿಸಿದರು.

‘ರೈತ ಉತ್ಪಾದಕ ಸಂಸ್ಥೆಗಳಿಗೆ ಮೂರು ವರ್ಷಗಳವರೆಗೆ ಸಿಬ್ಬಂದಿ ವೇತನ ಮತ್ತು ಕಟ್ಟಡ ಬಾಡಿಗೆಯನ್ನು ಸರ್ಕಾರವೇ ಒದಗಿಸಬೇಕೆಂಬ ಒಪ್ಪಂದವಿದೆ. ಅದರಂತೆ ಆರ್ಥಿಕ ನೆರವು ಒದಗಿಸಬೇಕು’ ಎಂದು ಬಿಜೆಪಿಯ ಆರಗ ಜ್ಞಾನೇಂದ್ರ ಒತ್ತಾಯಿಸಿದರು.

ಕೋರಂ ಭರ್ತಿಯಲ್ಲೂ ರಾಜಕೀಯ

ವಿಧಾನಸಭೆ: ಈ ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಬೆಳಿಗ್ಗೆ 9ಕ್ಕೆ ಸದನ ಆರಂಭವಾಗಬೇಕಿತ್ತು. ಸದನದ ಒಳಗಿದ್ದ 20ಕ್ಕೂ ಹೆಚ್ಚು ಮಂದಿ ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು ದಿಢೀರ್‌ ಹೊರ ಹೋಗಿದ್ದರಿಂದ ಅರ್ಧ ಗಂಟೆ ತಡವಾಗಿ ಕಲಾಪ ಆರಂಭವಾಯಿತು.

ಕಾಂಗ್ರೆಸ್‌ನ ಹೆಚ್ಚು ಸದಸ್ಯರು ಸದನದಲ್ಲಿ ಇರಲಿಲ್ಲ. ಇದನ್ನು ಗಮನಿಸಿದ ಬಿಜೆಪಿಯ ಸುನಿಲ್‌ ಕುಮಾರ್‌ ತಮ್ಮ ಪಕ್ಷ ಹಾಗೂ ಜೆಡಿಎಸ್‌ನ ಸದಸ್ಯರನ್ನು ಹೊರಕ್ಕೆ ಕರೆದೊಯ್ದರು. ‘ಅವರ (ಕಾಂಗ್ರೆಸ್‌) ಪಕ್ಷದ ಯಾರೂ ಬಂದಿಲ್ಲ. ಅವರೇ ಕೋರಂ ಭರ್ತಿ ಮಾಡಲಿ’ ಎಂದು ಹೇಳಿ ಸುನಿಲ್‌ ಎಲ್ಲರನ್ನೂ ಹೊರಕ್ಕೆ ಕರೆದರು.

‘ಬಿಜೆಪಿಯ ಕೆಲವು ಸದಸ್ಯರಾದರೂ ಸದನದ ಒಳಕ್ಕೆ ಬಂದು ಕೋರಂ ಭರ್ತಿಗೆ ಸಹಕರಿಸಿ’ ಎಂದು ಆಡಳಿತ ಪಕ್ಷದ ಮುಖ್ಯ ಸಚೇತಕ ಅಶೋಕ ಎಂ. ಪಟ್ಟಣ ಮನವಿ ಮಾಡಿದರು. ಆದರೆ, ಅವರು ಮಣಿಯಲಿಲ್ಲ.  ಕಾಂಗ್ರೆಸ್‌ನ 23 ಸದಸ್ಯರು ಸದನಕ್ಕೆ ಬಂದು ಕೋರಂ ಭರ್ತಿ ಆಗುವಾಗ ಅರ್ಧ ಗಂಟೆ ಕಳೆಯಿತು. ಸಭಾಧ್ಯಕ್ಷ ಯು.ಟಿ. ಖಾದರ್‌ ಪೀಠಕ್ಕೆ ಬಂದ ಬಳಿಕವೇ ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು ಒಳಕ್ಕೆ ಬಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT