ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕರಾಗಿ ಜಿ.ಟಿ. ದೇವೆಗೌಡ ನೇಮಕ ಸಾಧ್ಯತೆ

Published 11 ಜೂನ್ 2024, 22:30 IST
Last Updated 11 ಜೂನ್ 2024, 22:30 IST
ಅಕ್ಷರ ಗಾತ್ರ

ಬೆಂಗಳೂರು: ಎಚ್‌.ಡಿ. ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿರುವುದರಿಂದ ಜೆಡಿಎಸ್‌ ‘ಕೋರ್‌ ಕಮಿಟಿ’ ಅಧ್ಯಕ್ಷರಾಗಿರುವ ಜಿ.ಟಿ. ದೇವೇಗೌಡ ಅವರನ್ನೇ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆಮಾಡಲು ಪಕ್ಷದ ವರಿಷ್ಠರು ಯೋಚಿಸಿದ್ದಾರೆ.

ಕೇಂದ್ರ ಸಚಿವರಾಗಿರುವ ಕಾರಣದಿಂದ ಕುಮಾರಸ್ವಾಮಿ ಅವರು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ಶೀಘ್ರದಲ್ಲೇ ರಾಜೀನಾಮೆ ನೀಡಲಿದ್ದಾರೆ. ಇದರಿಂದಾಗಿ ಅವರು ನಿರ್ವಹಿಸುತ್ತಿದ್ದ ಶಾಸಕಾಂಗ ಪಕ್ಷದ ನಾಯಕನ ಸ್ಥಾನವೂ ತೆರವಾಗಲಿದೆ. ಜಿ.ಟಿ. ದೇವೇಗೌಡರನ್ನೇ ಆ ಸ್ಥಾನಕ್ಕೆ ಆಯ್ಕೆ ಮಾಡುವುದು ಸೂಕ್ತ ಎಂಬ ಚರ್ಚೆ ಪಕ್ಷದ ಪ್ರಮುಖ ನಾಯಕರಲ್ಲಿ ನಡೆದಿದೆ. ಬಹುತೇಕರು ಈ ಪ್ರಸ್ತಾವಕ್ಕೆ ಸಮ್ಮತಿ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಕುಮಾರಸ್ವಾಮಿ ಅವರು ಶುಕ್ರವಾರ ದೆಹಲಿಯಿಂದ ಬೆಂಗಳೂರಿಗೆ ವಾಪಸಾಗುವರು. ಆ ಬಳಿಕ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಮತ್ತು ಇತರ ನಾಯಕರ ಜತೆ ಚರ್ಚಿಸುವರು. ಜಿ.ಟಿ. ದೇವೇಗೌಡರ ಆಯ್ಕೆಗೆ ಹೆಚ್ಚಿನ ಮಂದಿ ಒಲವು ಹೊಂದಿದ್ದಾರೆ’ ಎಂದು ಜೆಡಿಎಸ್‌ ಪ್ರಮುಖರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಅಧ್ಯಕ್ಷರ ಆಯ್ಕೆ ತುಸು ವಿಳಂಬ: ಕೆಲಸಗಳ ಒತ್ತಡ ಹೆಚ್ಚಿರುವ ಕಾರಣದಿಂದ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ತೊರೆಯುವುದಕ್ಕೂ ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಈ ಬಗ್ಗೆ ದೆಹಲಿಯಲ್ಲಿರುವ ಪಕ್ಷದ ಮುಖಂಡರ ಜತೆ ಸೋಮವಾರ ರಾತ್ರಿ ನಡೆದ ಚರ್ಚೆ ವೇಳೆ ‍ಪ್ರಸ್ತಾಪಿಸಿದ್ದಾರೆ. ಆದರೆ, ರಾಜ್ಯ ಘಟಕದ ನೂತನ ಅಧ್ಯಕ್ಷರ ಆಯ್ಕೆ ಕೆಲವು ದಿನಗಳ ಕಾಲ ವಿಳಂಬ ಆಗಬಹುದು ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT