ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಟಿಡಿ, ಸೋಮಣ್ಣ ಯಾರೇ ಕಾಂಗ್ರೆಸ್‌ಗೆ ಬಂದರೂ ಸ್ವಾಗತ: ಸಿಎಂ ಸಿದ್ದರಾಮಯ್ಯ

Published 17 ನವೆಂಬರ್ 2023, 11:30 IST
Last Updated 17 ನವೆಂಬರ್ 2023, 11:30 IST
ಅಕ್ಷರ ಗಾತ್ರ

ಮೈಸೂರು: ‘ಜೆಡಿಎಸ್‌ನ ಜಿ.ಟಿ. ದೇವೇಗೌಡ, ಬಿಜೆಪಿಯ ವಿ. ಸೋಮಣ್ಣ ಸೇರಿದಂತೆ ಯಾರೇ ಆಗಲಿ ಕಾಂಗ್ರೆಸ್ ಪಕ್ಷದ ತತ್ವ– ಸಿದ್ಧಾಂತವನ್ನು ಒಪ್ಪಿ ಬಂದರೆ ಸ್ವಾಗತಿಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಜಿಟಿಡಿ ಹಾಗೂ ಸೋಮಣ್ಣ ಅವರನ್ನು ಪಕ್ಷಕ್ಕೆ ಆಹ್ವಾನಿಸಿರುವ ಬಗ್ಗೆ ನನಗೆ ಮಾಹಿತಿ ಇಲ್ಲ’ ಎಂದರು.

‘ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಬೇರೆ ಬೇರೆ ಪಕ್ಷಗಳ ಮುಖಂಡರನ್ನು ಸೇರಿಸಿಕೊಳ್ಳುವ ಕೆಲಸ ಮಾಡುತ್ತಿದ್ದೇವೆ’ ಎಂದು ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿಗೆ ನನ್ನನ್ನು ಕಂಡರೆ ಭಯ. ಆದ್ದರಿಂದಲೇ, ಪಂಚ ರಾಜ್ಯಗಳ ಚುನಾವಣೆಯಲ್ಲಿ ನಮ್ಮ ಬಗ್ಗೆ ಮಾತನಾಡಿದ್ದಾರೆ. ನಮ್ಮ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ್ದ ಅವರು, ಈಗ ಅದೇ ಗ್ಯಾರಂಟಿಗಳನ್ನೇ ಬೇರೆ ಕಡೆ ಘೋಷಿಸಿದ್ದಾರೆ. ಇದರ ಅರ್ಥವೇನು? ಕೇಂದ್ರದಿಂದ ಕೈಗೊಂಡಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ವಾಹನದಲ್ಲೂ ಗ್ಯಾರಂಟಿ ಎಂದು ಬಳಸಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ರಾಜ್ಯದಲ್ಲಿ ಶೇ 40ರಷ್ಟು ಕಮಿಷನ್‌ ಸರ್ಕಾರ ಎಂದು ಕರೆಯುತ್ತಿದ್ದುದ್ದು ಬಿಜೆಪಿ ಸರ್ಕಾರವನ್ನೇ ಹೊರತು, ನಮ್ಮನ್ನಲ್ಲ. ಈ ಸತ್ಯ ಗೊತ್ತಿದ್ದರೂ ಪ್ರಧಾನಿ ನಮ್ಮ ವಿರುದ್ಧ ಮಾತನಾಡುತ್ತಾರೆ’ ಎಂದು ಟೀಕಿಸಿದರು.

‘ಪಂಚ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜಯಿಸಲಿದೆ. ಈ ಚುನಾವಣೆಯ ಫಲಿತಾಂಶ ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ. ಆ ಚುನಾವಣೆಗೆ ಮಾರ್ಚ್ ಕೊನೆಯಲ್ಲಿ ಅಧಿಸೂಚನೆ ಹೊರಬೀಳಬಹುದು. ರಾಮಮಂದಿರ ನಿರ್ಮಾಣ ಹೊಸ ವಿಚಾರವೇನಲ್ಲ. ರಾಮಮಂದಿರಕ್ಕೆ ನಮ್ಮ ವಿರೋಧವೂ ಇಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ತೀರ್ಮಾನವಾಗಿರುವಂತೆ ನಿರ್ಮಾಣ ನಡೆದಿದೆ. ಅದನ್ನು ಉದ್ಘಾಟಿಸಿದ ಮಾತ್ರಕ್ಕೆ ಮತದಾರರು ಬದಲಾಗುತ್ತಾರೆ ಎನ್ನುವುದು ತಪ್ಪು’ ಎಂದು ಪ್ರತಿಕ್ರಿಯಿಸಿದರು.

‘ದೇಶದ ಜನ ವಿವಿಧತೆಯಲ್ಲಿ ಏಕತೆ ಬಯಸುತ್ತಾರೆ. ಬ್ರಿಟಿಷರು, ಮೊಘಲರ ದಾಳಿಯ ನಂತರವೂ ದೇಶ ಒಂದಾಗಿದೆ. ನಾವು ಒಳಗೊಳ್ಳುವಿಕೆಯಲ್ಲಿ ನಂಬಿಕೆ ಇಟ್ಟುಕೊಂಡವರು’ ಎಂದರು.

‘ಈ ಬಾರಿಯ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ಗೆದ್ದೇ ಗೆಲ್ಲುತ್ತದೆ. ತಂಡದ ಎಲ್ಲರೂ ಚೆನ್ನಾಗಿ ಆಡುತ್ತಿದ್ದಾರೆ. ಇದೇ ರೀತಿ ಒಗ್ಗೂಡಿ ಆಡಿದರೆ ವಿಶ್ವಕಪ್‌ ಗೆಲ್ಲುತ್ತಾರೆ. ನ.19ರಂದು ನಡೆಯಲಿರುವ ಫೈನಲ್‌ ಪಂದ್ಯವನ್ನು ವೀಕ್ಷಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT