ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾ ಕಲ್ಯಾಣ ಅಕ್ರಮ: ‘ಸಿಐಡಿ’ ತನಿಖೆಗೆ ಹಿಂದೇಟು

* ರಾಜ್ಯದ ವಿವಿಧ ಠಾಣೆಗಳಲ್ಲಿ ಎಫ್‌ಐಆರ್ * ಆದೇಶ ಹೊರಡಿಸದ ಗೃಹ ಇಲಾಖೆ * ಆರೋಪಿ ರಕ್ಷಣೆಗೆ ಪ್ರಭಾವಿಗಳ ಒತ್ತಡ: ಆರೋಪ
Published 23 ಜೂನ್ 2023, 23:31 IST
Last Updated 23 ಜೂನ್ 2023, 23:31 IST
ಅಕ್ಷರ ಗಾತ್ರ

ಬೆಂಗಳೂರು: ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಲು ರೂಪಿಸಿದ್ದ ಗಂಗಾ ಕಲ್ಯಾಣ ಯೋಜನೆಯಲ್ಲಿ ನಡೆದಿರುವ ಅಕ್ರಮದ ತನಿಖೆಯನ್ನು ಸಿಐಡಿಗೆ ವಹಿಸಲು ರಾಜ್ಯ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಜಾರಿಗೆ ತರಲಾಗಿದ್ದ ಗಂಗಾ ಕಲ್ಯಾಣ ಯೋಜನೆಯಲ್ಲಿ 2019–20 ಹಾಗೂ 2020–21ನೇ ಸಾಲಿನಲ್ಲಾದ ಅಕ್ರಮಗಳ ಬಗ್ಗೆ ಬೆಂಗಳೂರಿನ ವಿಧಾನಸೌಧ ಠಾಣೆ ಸೇರಿದಂತೆ ರಾಜ್ಯದ ವಿವಿಧ ಠಾಣೆಗಳಲ್ಲಿ ಈಗಾಗಲೇ ಎಫ್‌ಐಆರ್‌ಗಳು ದಾಖಲಾಗಿವೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ರೀತಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್‌ ನಾಯಕರು ಆಪಾದಿಸಿದ್ದರು. ವಿಧಾನಮಂಡಲ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆಯಾದಾಗ, ಹಗರಣದ ತನಿಖೆಯನ್ನು ಸಿಐಡಿಗೆ ವಹಿಸುವುದಾಗಿ ಅಂದಿನ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದರು. ಹಿಂದೆ ಹಗರಣದ ಆರೋಪ ಮಾಡಿದ್ದ ಕಾಂಗ್ರೆಸ್‌, ಈಗ ಸರ್ಕಾರ ನಡೆಸುತ್ತಿದೆ. ಹಾಗಿದ್ದರೂ, ಗಂಗಾ ಕಲ್ಯಾಣ ಅಕ್ರಮದ ತನಿಖೆಯನ್ನು ಸಿಐಡಿಗೆ ವಹಿಸುವ ಸಂಬಂಧ ಇದುವರೆಗೂ ಆದೇಶ ಹೊರಡಿಸಿಲ್ಲ. 

‘ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಗಂಗಾ ಕಲ್ಯಾಣ ಯೋಜನೆಯಲ್ಲಿ ಅಕ್ರಮ ನಡೆದಿರುವುದು ಆಂತರಿಕ ತನಿಖೆಯಿಂದ ಪತ್ತೆಯಾಗಿತ್ತು. ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಐಡಿಗೆ ವಹಿಸುವಂತೆ ಬಿಜೆಪಿ ಸರ್ಕಾರವಿದ್ದಾಗ, ಗೃಹ ಇಲಾಖೆಗೆ ಪತ್ರ ಬರೆಯಲಾಗಿತ್ತು. ಅದಕ್ಕೆ ಯಾವುದೇ ಉತ್ತರ ಸಿಕ್ಕಿಲ್ಲ. ಇಂದಿಗೂ ಗೃಹ ಇಲಾಖೆಯಲ್ಲೇ ಸಿಐಡಿ ತನಿಖೆ ಕಡತವಿದೆ’ ಎಂದು ಇಲಾಖೆಯ ಮೂಲಗಳು ಹೇಳಿವೆ.

‘ಅಕ್ರಮದ ಆರೋಪಿಗಳ ಪರವಾಗಿ ಪ್ರಭಾವಿಗಳು ಕೆಲಸ ಮಾಡುತ್ತಿದ್ದಾರೆ. ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸದಂತೆ ಅಂದಿನ ಬಿಜೆಪಿ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಇಂದಿನ ಕಾಂಗ್ರೆಸ್ ಸರ್ಕಾರದ ಮೇಲೂ ಅವರು ಪ್ರಭಾವ ಬೀರುತ್ತಿದ್ದಾರೆ. ಹೀಗಾಗಿ, ಸಿಐಡಿ ತನಿಖೆಗೆ ಆದೇಶ ಹೊರಡಿಸಲು ಹಿಂದೇಟು ಹಾಕಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.

ಪೊಲೀಸರ ಪ್ರಸ್ತಾವಕ್ಕೆ ಕಿಮ್ಮತ್ತಿಲ್ಲ: ಗಂಗಾ ಕಲ್ಯಾಣ ಯೋಜನೆ ಅಕ್ರಮದ ಬಗ್ಗೆ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ‍ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುವ ಸಂಬಂಧ ಗೃಹ ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡದ ಗೃಹ ಇಲಾಖೆ, ಆದೇಶ ಹೊರಡಿಸಲು ವಿಳಂಬ ತೋರುತ್ತಿದೆ.

ಗೃಹ ಇಲಾಖೆಯ ಮೌನದಿಂದಾಗಿ ಪ್ರಕರಣದ ತನಿಖೆಯನ್ನು ತಾವೇ ನಡೆಸಬೇಕಾ? ಅಥವಾ ಸಿಐಡಿ ಅಧಿಕಾರಿಗಳು ನಡೆಸುತ್ತಾರೆಯೇ? ಎಂಬ ಗೊಂದಲ ಸ್ಥಳೀಯ ಪೊಲೀಸರನ್ನು ಕಾಡುತ್ತಿದೆ.

‘ಪ್ರಕರಣವನ್ನು ಸಿಐಡಿಗೆ ವಹಿಸುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕೋರಿದ್ದಾರೆ. ಪ್ರಕರಣವು ಸಿಐಡಿ ತನಿಖೆಗೆ ಅರ್ಹವಾಗಿದ್ದು, ಈ ಬಗ್ಗೆ ಆದೇಶ ಹೊರಡಿಸಿ. ಕಡತಗಳನ್ನು ಸಿಐಡಿ ಅಧಿಕಾರಿಗಳಿಗೆ ಹಸ್ತಾಂತರಿಸುತ್ತೇವೆ’ ಎಂದು ಪೊಲೀಸರು ಪ್ರಸ್ತಾವದಲ್ಲಿ ಹೇಳಿದ್ದಾರೆ.

‘ಕಾನೂನು ಪ್ರಕಾರ ಪ್ರಸ್ತಾವ ಸಲ್ಲಿಸಲಾಗಿದೆ. ಅಧಿಕೃತ ಆದೇಶ ಹೊರಬಿದ್ದ ಬಳಿಕ ಪ್ರಕರಣದ ಕಡತಗಳನ್ನು ಸಿಐಡಿಗೆ ಹಸ್ತಾಂತರಿಸಲಾಗುವುದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಅಕ್ರಮದ ತನಿಖೆಯನ್ನು ಸಿಐಡಿಗೆ ವಹಿಸುವ ಸಂಬಂಧ ಸರ್ಕಾರ ಕೈಗೊಂಡ ಕ್ರಮದ ಬಗ್ಗೆ ಪ್ರತಿಕ್ರಿಯೆ ಪಡೆಯಲು ಗೃಹ ಸಚಿವ ಜಿ. ಪರಮೇಶ್ವರ, ಸಮಾಜ ಕಲ್ಯಾಣ ಸಚಿವ ಎಚ್‌.ಸಿ. ಮಹದೇವಪ್ಪ ಹಾಗೂ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಲಭ್ಯರಾಗಲಿಲ್ಲ.

‘ಎಂ.ಡಿ ಭಾಗಿ; ಹಲವರಿಗೆ ಬಂಧನ ಭೀತಿ’

‘ಡಾ.ಬಿ.ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮದಲ್ಲಿ ಗಂಗಾ ಕಲ್ಯಾಣ ಸೇರಿದಂತೆ ವಿವಿಧ ಯೋಜನೆಗಳಲ್ಲಾದ ಅಕ್ರಮದಲ್ಲಿ ವ್ಯವಸ್ಥಾಪಕ ನಿರ್ದೇಶಕರು ಹಾಗೂ ರಾಜಕೀಯ ಮುಖಂಡರು ಭಾಗಿಯಾಗಿರುವ ಅನುಮಾನವಿದೆ. ಸಿಐಡಿ ತನಿಖೆ ಆರಂಭವಾದರೆ, ಅವರೆಲ್ಲರೂ ಬಂಧನವಾಗುತ್ತಾರೆ. ಅದೇ ಕಾರಣಕ್ಕೆ ಸಿಐಡಿ ತನಿಖೆ ತಡೆಯಲು ಹುನ್ನಾರ ನಡೆದಿದೆ’ ಎಂದು ಇಲಾಖೆಯ ಮೂಲಗಳು ಹೇಳಿವೆ.

‘ಅಂಬೇಡ್ಕರ್‌ ನಿಗಮ: ₹ 25 ಕೋಟಿ ಅಕ್ರಮ’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯ 2022ರ ಡಿಸೆಂಬರ್ 22ರ ಸಂಚಿಕೆಯ ಮುಖಪುಟದಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಭ್ರಷ್ಟಾಚಾರ, ಗಂಭೀರ ಸ್ವರೂಪದ ದುರ್ನಡತೆ ಮತ್ತು ಕರ್ತವ್ಯಲೋಪ ಆರೋಪದಲ್ಲಿ ಇಲಾಖಾ ವಿಚಾರಣೆ ಬಾಕಿ ಇರಿಸಿ ಡಾ.ಬಿ.ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ
(ಎಂ.ಡಿ) ಕೆ.ಎಂ. ಸುರೇಶ್‌ ಕುಮಾರ್‌ ಅವರನ್ನು ಅಮಾನತು ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT