ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳ್ಳುಳ್ಳಿ ಈಗ ಬಲು ದುಬಾರಿ: ಗ್ರಾಹಕರು ಗಾಬರಿ!

ರಾಜ್ಯದ ವಿವಿಧೆಡೆ ಚಿಲ್ಲರೆ ಮಾರುಕಟ್ಟೆಯಲ್ಲಿ ನಾಟಿ ಬೆಳ್ಳುಳ್ಳಿಯ ದರ ಒಂದು ಕೆ.ಜಿಗೆ ₹400 ಇದ್ದರೆ, ಹೈಬ್ರೀಡ್‌ ಬೆಳ್ಳುಳ್ಳಿ ಧಾರಣೆಯು ₹300 ದಾಟಿದೆ
Published 11 ಡಿಸೆಂಬರ್ 2023, 20:16 IST
Last Updated 11 ಡಿಸೆಂಬರ್ 2023, 20:16 IST
ಅಕ್ಷರ ಗಾತ್ರ

ಬೆಂಗಳೂರು/ಚಿಕ್ಕಬಳ್ಳಾಪುರ/ಹುಬ್ಬಳ್ಳಿ: ರಾಜ್ಯದ ವಿವಿಧೆಡೆ ಚಿಲ್ಲರೆ ಮಾರುಕಟ್ಟೆಯಲ್ಲಿ ನಾಟಿ ಬೆಳ್ಳುಳ್ಳಿಯ ದರ ಒಂದು ಕೆ.ಜಿಗೆ ₹400 ಇದ್ದರೆ, ಹೈಬ್ರೀಡ್‌ ಬೆಳ್ಳುಳ್ಳಿ ಧಾರಣೆಯು ₹300 ದಾಟಿದ್ದು, ಗ್ರಾಹಕರು ತತ್ತರಿಸುವಂತಾಗಿದೆ.

ಎರಡು ದಿನಗಳ ಹಿಂದೆ ಬೆಂಗಳೂರಿನ ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ‘ಎ’ ದರ್ಜೆಯ ಹೈಬ್ರಿಡ್‌ ಬೆಳ್ಳುಳ್ಳಿ ಧಾರಣೆಯು ₹260 ಇತ್ತು. ದಿಢೀರ್‌ ಏರಿಕೆ ಕಂಡಿರುವುದರಿಂದ ಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. 

ಯಶವಂತಪುರ ಮಾರುಕಟ್ಟೆಗೆ ಮಧ್ಯಪ್ರದೇಶ ಮತ್ತು ಗುಜರಾತ್‌ನಿಂದ ಪ್ರತಿದಿನ ಮೂರು ಸಾವಿರದಿಂದ ನಾಲ್ಕು ಸಾವಿರ ಚೀಲದಷ್ಟು ಬೆಳ್ಳುಳ್ಳಿ ಆವಕವಾಗುತ್ತದೆ. ಬೆಂಗಳೂರು ನಗರ ಸೇರಿದಂತೆ ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ ಜಿಲ್ಲೆಗಳಿಗೆ ಇಲ್ಲಿಂದ ಪೂರೈಕೆಯಾಗುತ್ತದೆ. 

ಆದರೆ, ಈ ಬಾರಿ ಮಧ್ಯಪ್ರದೇಶ ಮತ್ತು ಗುಜರಾತ್‌ನಲ್ಲಿ ಮಳೆ ಕೊರತೆಯಾಗಿದೆ. ಇದು ಬೆಳ್ಳುಳ್ಳಿ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ. ಪೂರೈಕೆ ಕಡಿಮೆಯಾಗಿರುವುದೇ ದರ ಹೆಚ್ಚಳಕ್ಕೆ ಮೂಲ ಕಾರಣವಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯೂ ಇದೆ ಎಂದು ಎಪಿಎಂಸಿ ಅಧಿಕಾರಿಗಳು ಹೇಳುತ್ತಾರೆ.  

‘ಒಂದು ತಿಂಗಳ ಹಿಂದೆ ಒಂದು ಕೆ.ಜಿ ಬೆಳ್ಳುಳ್ಳಿ ದರ ₹200ರ ಆಸುಪಾಸು ಇತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ ₹100ಕ್ಕೆ ಮೂರರಿಂದ ನಾಲ್ಕು ಕೆ.ಜಿ ಮಾರಾಟ ಮಾಡಿದ್ದೆವು. ನಾಟಿ ಬೆಳ್ಳುಳ್ಳಿ ದೊರೆಯುವುದೇ ಕಷ್ಟವಾಗಿದೆ’ ಎನ್ನುತ್ತಾರೆ ಚಿಕ್ಕಬಳ್ಳಾಪುರದ ಬಜಾರ್ ರಸ್ತೆಯ ಬೆಳ್ಳುಳ್ಳಿ ವ್ಯಾಪಾರಿ ವೆಂಕಟಮ್ಮ.

ವಾರದಿಂದ ವಾರಕ್ಕೆ ದರ ಏರಿಕೆ

‘ರೈತರು ಬೆಳೆದ ಹೊಸ ಫಸಲು ಜನವರಿ ನಂತರ ಮಾರುಕಟ್ಟೆಗೆ ಬರುತ್ತದೆ. ಈಗ ಮದುವೆ, ಸಭೆ ಸಮಾರಂಭಗಳು ಹೆಚ್ಚಾಗಿ ನಡೆಯುತ್ತಿರುವ ಕಾರಣ ಬೆಳ್ಳುಳ್ಳಿಗೆ ಬೇಡಿಕೆ ಇದೆ. ಹೀಗಾಗಿ ವಾರದಿಂದ ವಾರಕ್ಕೆ ದರವು ₹20ರಷ್ಟು ಹೆಚ್ಚಾಗುತ್ತಿದೆ’ ಎಂದು ಹುಬ್ಬಳ್ಳಿ ಎಪಿಎಂಸಿ ಕಮಿಷನ್‌ ಏಜೆಂಟ್‌ ಮೊಹ್ಮದ್‌ ಅಲಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮಂಗಳೂರಿನ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿಯ ಚೀಲವನ್ನು ಲಾರಿಗೆ ತುಂಬುತ್ತಿರುವುದು

ಮಂಗಳೂರಿನ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿಯ ಚೀಲವನ್ನು ಲಾರಿಗೆ ತುಂಬುತ್ತಿರುವುದು

–ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್.

‘ಹುಬ್ಬಳ್ಳಿಗೆ ಹೈಬ್ರಿಡ್‌ (ಫಾರಂ) ಬೆಳ್ಳುಳ್ಳಿ ಮಧ್ಯ‍ಪ್ರದೇಶದಿಂದ ಪೂರೈಕೆ ಆಗುತ್ತಿದೆ. ಬಾಗಲಕೋಟೆ, ಚಿಕ್ಕಮಗಳೂರು ಮತ್ತು ಹಾವೇರಿ ಜಿಲ್ಲೆಗಳಲ್ಲಿ ರೈತರು ಜವಾರಿ ಬೆಳ್ಳುಳ್ಳಿ ಬೆಳೆಯುತ್ತಿದ್ದು, ಅದು ಜನವರಿ ನಂತರ ಮಾರುಕಟ್ಟೆಗೆ ಬರಲಿದೆ. ಆರಂಭದಲ್ಲಿ ಹೊಸ ಬೆಳ್ಳುಳ್ಳಿ ಹಸಿ ಇರುವುದರಿಂದ ಬೇಡಿಕೆ ಇರುವುದಿಲ್ಲ. ಮುಂದಿನ ವರ್ಷ ಮಾರ್ಚ್‌ ಅಂತ್ಯದವರೆಗೆ ಬೆಳ್ಳುಳ್ಳಿ ದರ ಏರುಗತಿಯಲ್ಲಿ ಮುಂದುವರಿಯಬಹುದು’ ಎಂದರು.

‘ದಲ್ಲಾಳಿಗಳು ಬೆಳ್ಳುಳ್ಳಿ ದಾಸ್ತಾನು ಇಟ್ಟುಕೊಂಡು ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ’ ಎಂದು ತರಕಾರಿ ವ್ಯಾಪಾರಿಗಳು ಆರೋಪಿಸಿದ್ದಾರೆ.

ಮಂಗಳೂರಿನ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿಯ ಚೀಲವನ್ನು ಲಾರಿಗೆ ತುಂಬುತ್ತಿರುವುದು

ಮಂಗಳೂರಿನ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿಯ ಚೀಲವನ್ನು ಲಾರಿಗೆ ತುಂಬುತ್ತಿರುವುದು

– ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್.

ರೈತನಿಗೆ ಆದಾಯ ಮರೀಚಿಕೆ

ಚಾಮರಾಜನಗರ: ಜಿಲ್ಲೆಯಲ್ಲಿ ಹನೂರು ಮತ್ತು ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ರೈತರು ಬೆಳ್ಳುಳ್ಳಿ ಬೆಳೆಯುತ್ತಾರೆ. ಸೆಪ್ಟೆಂಬರ್‌ ಅಕ್ಟೋಬರ್‌ನಲ್ಲಿಯೇ ಕಟಾವು ಆಗಿದೆ. ಈಗ ಹಲವು ರೈತರು ಬಿತ್ತನೆ ಬೀಜದ ಉದ್ದೇಶಕ್ಕಾಗಿ ಬೆಳ್ಳುಳ್ಳಿ ಬಿತ್ತನೆ ಮಾಡಿದ್ದಾರೆ.  ‘ಎರಡು ತಿಂಗಳ ಹಿಂದೆಯೇ ತಾಲ್ಲೂಕಿನ ಬೆಳೆಗಾರರು ಮಾರಾಟ ಮಾಡಿದ್ದಾರೆ. ಆರಂಭದಲ್ಲಿ ಒಂದು ಕೆ.ಜಿಗೆ ₹250 ದರ ಇತ್ತು. ಆದರೆ ಮಾರುಕಟ್ಟೆಗೆ ಆವಕ ಹೆಚ್ಚಿದ್ದರಿಂದ ಧಾರಣೆಯು ಕೆ.ಜಿಗೆ ₹130ಕ್ಕೆ ಕುಸಿಯಿತು. ಹಾಗಾಗಿ ರೈತರು ನಷ್ಟ ಅನುಭವಿಸುವಂತಾಯಿತು’ ಎಂದು ಗುಂಡ್ಲುಪೇಟೆ ತಾಲ್ಲೂಕಿನ ಕಲ್ಲಿಗೌಡನಹಳ್ಳಿಯ ಶ್ರೀನಿವಾಸ್ ತಿಳಿಸಿದರು. ‘ಮಳೆಗಾಲದಲ್ಲಿ ಹೆಚ್ಚಾಗಿ ಬೆಳ್ಳುಳ್ಳಿ ಬೆಳೆಯುತ್ತೇವೆ.‌ ಆದರೆ ಈಗ ಮಳೆ ಇಲ್ಲದಿರುವುದರಿಂದ ಬೇರೆ ಫಸಲಿನ ಜತೆಗೆ ಕೆಲವು ಜಮೀನುಗಳಲ್ಲಿ‌ ಬೆಳ್ಳುಳ್ಳಿ ಬೆಳೆದಿದ್ದಾರೆ. ಈ ಬೆಳ್ಳುಳ್ಳಿಗೂ ಮಾರುಕಟ್ಟೆಯಲ್ಲಿ ಕೆ.ಜಿಗೆ ₹250 ದರ ಇದೆ’ ಎಂದು ಹನೂರು ತಾಲ್ಲೂಕಿನ ಪಿ.ಜಿ. ಪಾಳ್ಯದ ರೈತ ಸಿದ್ದರಾಜು ಹೇಳಿದರು.

ಸಗಟು ಧಾರಣೆಯೂ ಹೆಚ್ಚಳ ಮಂಗಳೂರು

ಇಲ್ಲಿನ ಸಗಟು ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆ ಮೂರು ತಿಂಗಳಲ್ಲಿ ಗರಿಷ್ಠ ₹100 ಹೆಚ್ಚಳವಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ದರ ಸರಾಸರಿ ₹300 ಇದ್ದು ಉತ್ತಮ ಗುಣಮಟ್ಟದ ಬೆಳ್ಳುಳ್ಳಿಗೆ ₹330ರ ವರೆಗೂ ದರ ಇದೆ. ಪ್ರತಿವರ್ಷ ಡಿಸೆಂಬರ್ ಕೊನೆ ಅಥವಾ ಜನವರಿ ಆರಂಭದಲ್ಲಿ ಹೊಸ ಸರಕು ಬರುತ್ತದೆ. ನವೆಂಬರ್ ಕೊನೆಯಿಂದ ಈರುಳ್ಳಿಯ ಗುಣಮಟ್ಟ ಕಡಿಮೆಯಾಗುತ್ತ ಸಾಗುತ್ತದೆ. ಸಾಮಾನ್ಯವಾಗಿ ಈ ಸಂದರ್ಭದಲ್ಲಿ ದರ ತೀರಾ ಕಡಿಮೆ ಇರುತ್ತದೆ. ಆದರೆ ಈ ಬಾರಿ ಪರಿಸ್ಥಿತಿ ವ್ಯತಿರಿಕ್ತವಾಗಿದೆ ಎನ್ನುತ್ತಾರೆ ವ್ಯಾಪಾರಿಗಳು. ‘ಎಂಡಿಂಗ್ ಪಾಯಿಂಟ್‌ನಲ್ಲಿ ಬೆಳ್ಳುಳ್ಳಿ ದರ ಏರುವುದಿಲ್ಲ. ಈ ಸಂದರ್ಭದಲ್ಲಿ ಸಾಮಾನ್ಯವಾಗಿ ಬೆಲೆ ₹100ರ ಹತ್ತಿರ ಇರುತ್ತದೆ. ಕೃತಕ ಅಭಾವ ಸೃಷ್ಟಿಸಿದ್ದಾರೆ ಎಂದು ಹೇಳುವುದಕ್ಕೂ ಆಗುವುದಿಲ್ಲ. ಯಾಕೆಂದರೆ ಬೆಳ್ಳುಳ್ಳಿ ಸಂಗ್ರಹಿಸಿಟ್ಟರೆ ಪೊಟ್ಟು (ಹಾಳು) ಆಗುತ್ತದೆ’ ಎನ್ನುತ್ತಾರೆ ಚಿಲ್ಲರೆ ಅಂಗಡಿಯೊಂದರ ಕೆಲಸಗಾರ ವಿನಾಯಕ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT