ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೀಸಲಾತಿ ನಿಗದಿಗೆ ಸರ್ಕಾರದ ವಿಳಂಬ| ಪಂಚಾಯಿತಿ ಜಗಳ ಕೋರ್ಟ್‌ಗೆ?

ತೂಗುತ್ತಲಿದೆ ನ್ಯಾಯಾಂಗ ನಿಂದನೆಯ ತೂಗುಗತ್ತಿ
Published 23 ಮೇ 2024, 23:30 IST
Last Updated 23 ಮೇ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿ ನಿಗದಿ ಮಾಡದೇ ವಿಳಂಬ ಧೋರಣೆ ಅನುಸರಿಸಿರುವ ರಾಜ್ಯ ಸರ್ಕಾರದ ವಿರುದ್ಧ ‘ನ್ಯಾಯ’ದ ಮೊರೆಹೋಗಲು ರಾಜ್ಯ ಚುನಾವಣಾ ಆಯೋಗ ತಯಾರಿ ನಡೆಸಿದೆ. 

ವಿಳಂಬಕ್ಕಾಗಿ ಒಂದು ಬಾರಿ ದಂಡ ತೆತ್ತಿದ್ದ ಸರ್ಕಾರದ ವಿರುದ್ಧ ಆಯೋಗವು ಮತ್ತೆ ಹೈಕೋರ್ಟ್‌ಗೆ ಹೋಗಲು ಅಣಿಯಾಗಿರುವುದರಿಂದ ಆಯೋಗ–ಸರ್ಕಾರದ ಮಧ್ಯೆ ‘ಕಾನೂನು ಸಂಘರ್ಷ’ಕ್ಕೆ ದಾರಿಯಾಗಲಿದೆ.

ಕ್ಷೇತ್ರಗಳ ಪುನರ್‌ ವಿಂಗಡಣೆ ಮತ್ತು ಮೀಸಲಾತಿ ನಿಗದಿ ಪ್ರಕ್ರಿಯೆಯನ್ನು ಒಂದು ತಿಂಗಳಲ್ಲಿ ಪೂರ್ಣಗೊಳಿಸುವುದಾಗಿ ಕಳೆದ ಡಿಸೆಂಬರ್‌ನಲ್ಲೇ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿತ್ತು. ಆದರೆ, ಅದನ್ನು ಈಡೇರಿಸದೇ ಇರುವುದಕ್ಕೆ ಆಯೋಗ ಆಕ್ಷೇಪ ಎತ್ತಿದೆ.

ಜಿಲ್ಲೆ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರ ಅವಧಿ 2021ರ ಏಪ್ರಿಲ್ 27ರಂದು ಮುಕ್ತಾಯವಾಗಿತ್ತು. ಅದಾಗಿ ಮೂರು ವರ್ಷಗಳೇ ಕಳೆದಿವೆ.

ಚುನಾವಣೆಯನ್ನು ಶೀಘ್ರ ನಡೆಸುವುದಾಗಿ ರಾಜ್ಯ ಸರ್ಕಾರ ಹೇಳುತ್ತಾ ಬಂದಿದೆಯಾದರೂ, ಚುನಾವಣೆ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಂಡಿಲ್ಲ. ಕ್ಷೇತ್ರಗಳ ಪುನರ್‌ವಿಂಗಡಣೆ ಹಾಗೂ ಸದಸ್ಯರ ಸಂಖ್ಯೆ ನಿಗದಿಪಡಿಸಲು ಸರ್ಕಾರ ರಚಿಸಿದ್ದ ಆಯೋಗವು, ಮಾಡಿದ್ದ ಶಿಫಾರಸು ಗಳನ್ನು ಅಂಗೀಕರಿಸಿದ್ದ 
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ಡಿಸೆಂಬರ್‌ನಲ್ಲೇ ಅಧಿಸೂಚನೆ ಹೊರಡಿಸಿತ್ತು. ಆದರೆ, ಕ್ಷೇತ್ರವಾರು ಮೀಸಲಾತಿ ನಿಗದಿ ಮಾಡದೇ ಕಾಲಹರಣ ಮಾಡಿಕೊಂಡು ಬರುತ್ತಿದೆ ಎನ್ನುವುದು ಚುನಾವಣಾ ಆಯೋಗದ ಆರೋಪ.

ಜಿಲ್ಲೆ ಹಾಗೂ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಅವಧಿ ಪೂರ್ಣಗೊಳ್ಳುವ ಮೊದಲೇ ಚುನಾವಣೆ ನಡೆಸಲು ಚುನಾವಣಾ ಆಯೋಗ 2021ರ ಫೆಬ್ರುವರಿಯಲ್ಲೇ ಅಧಿಸೂಚನೆ ಹೊರಡಿಸಿತ್ತು. ಆದರೆ, ಅಂದು ಅಧಿಕಾರ ದಲ್ಲಿದ್ದ ಬಿಜೆಪಿ ಸರ್ಕಾರ, ಜಿಲ್ಲಾ–ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಗಡಿ ನಿರ್ಣಯ ಮತ್ತು ಮೀಸಲಾತಿ ನಿಗದಿಪಡಿಸುವ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗದಿಂದ ಹಿಂಪಡೆದಿತ್ತು. ಅದಕ್ಕಾಗಿ, ಕರ್ನಾಟಕ ಪಂಚಾಯತ್ ರಾಜ್ ಮತ್ತು ಗ್ರಾಮ ಸ್ವರಾಜ್ ಕಾಯ್ದೆಗೆ ತಿದ್ದುಪಡಿ ತಂದು ‘ಕರ್ನಾಟಕ ಪಂಚಾಯತ್‌ ರಾಜ್ ಸೀಮಾ ನಿರ್ಣಯ ಆಯೋಗ’ಕ್ಕೆ ನೀಡಿತ್ತು. ನಿವೃತ್ತ ಐಎಎಸ್‌ ಅಧಿಕಾರಿ ಎಂ. ಲಕ್ಷ್ಮೀನಾರಾಯಣ್‌ ಅಧ್ಯಕ್ಷರಾಗಿ ನೇಮಕವಾಗಿದ್ದರು. ಕಳೆದ ಜುಲೈನಿಂದ ನಿವೃತ್ತ ಐಎಎಸ್‌ ಅಧಿಕಾರಿ ಎಂ.ಆರ್‌. ಕಾಂಬ್ಳೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸರ್ಕಾರದ ನಡೆ ಪ್ರಶ್ನಿಸಿ ರಾಜ್ಯ ಚುನಾವಣಾ ಆಯೋಗ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಎರಡು ವರ್ಷಗಳ ವಿಚಾರಣೆ ಬಳಿಕ ಡಿಸೆಂಬರ್‌ನಲ್ಲಿ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದ್ದ ಸರ್ಕಾರ, ‘ತಕ್ಷಣ ಕ್ಷೇತ್ರ ಪುನರ್‌ ವಿಂಗಡಣೆ ಅಧಿಸೂಚನೆ ಪ್ರಕಟಿಸಲಾ ಗುವುದು. ನಂತರದ 7 ದಿನಗಳಲ್ಲಿ ಮೀಸಲಾತಿ ಕರಡು ಅಧಿಸೂಚನೆ ಹೊರಡಿಸಲಾಗುವುದು. ಮೀಸಲಾತಿ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು 10 ದಿನಗಳ ಕಾಲಾವಕಾಶ ನೀಡಲಾಗುವುದು. 2 ವಾರಗಳಲ್ಲಿ ಸಂಬಂಧಿಸಿದ ಪ್ರಾಧಿಕಾರಗಳು ಮೀಸಲು ನಿಗದಿ ಪ್ರಕ್ರಿಯೆಯನ್ನುಪೂರ್ಣಗೊಳಿಸಲಿವೆ’ ಎಂದಿತ್ತು.  

ನೀತಿ ಸಂಹಿತೆ ಮುಗಿದ ಕೂಡಲೇ ಕ್ರಮ: ಪ್ರಿಯಾಂಕ್

‘ಕ್ಷೇತ್ರ ಪುನರ್‌ ವಿಂಗಡಣೆ ವರದಿ ಅಂಗೀಕರಿಸಿ, ಅಧಿಸೂಚನೆ ಹೊರಡಿಸಲಾಗಿದೆ. ನೀತಿ ಸಂಹಿತೆ ಮುಗಿದ ನಂತರ ಮೀಸಲು ನಿಗದಿ ಪ್ರಕ್ರಿಯೆ ಆರಂಭಿಸಲಾಗುವುದು. ಆಕ್ಷೇಪಣೆಗಳ ಅವಧಿ ಮುಗಿದ ತಕ್ಷಣ ಚುನಾವಣಾ ಪ್ರಕ್ರಿಯೆ ಆರಂಭವಾಗಲಿದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಅವಧಿ ಮುಗಿಯುವ ಮೊದಲೇ ಅಂದಿನ ಬಿಜೆಪಿ ಸರ್ಕಾರ ಕ್ರಮ ಕೈಗೊಳ್ಳಬೇಕಿತ್ತು. ಅವಧಿ ಮುಗಿದ ನಂತರ ಕುಂಟು ನೆಪ ಹೇಳಿಕೊಂಡು ಸೀಮಾ ನಿರ್ಣಯ ಆಯೋಗ ರಚಿಸಿತ್ತು. ನಂತರ ಮೀಸಲು ವಿಷಯಕ್ಕಾಗಿ ವಿಳಂಬ ಮಾಡಿತು. ಇದರಿಂದ ಸ್ಥಳೀಯ ಚುನಾಯಿತ ಪ್ರತಿನಿಧಿಗಳಿಗಿದ್ದ ಅವಕಾಶ ಕಿತ್ತುಕೊಂಡಿತು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ ಎಲ್ಲ ಕೆಲಸಗಳನ್ನೂ ವೇಗವಾಗಿ ಮುಗಿಸಿದೆ. ಚುನಾವಣೆ ನಡೆಸಲು ಎಲ್ಲ ಸಿದ್ಧತೆ ಮಾಡಿಕೊಂಡಿದೆ’ ಎಂದು ಅವರು ವಿವರಿಸಿದರು.

ಮೀಸಲಾತಿ ನಿಗದಿ ವಿಳಂಬ ಏಕೆ?

ನಿಖರವಾದ ಅಂಕಿಅಂಶಗಳ ಆಧಾರದಲ್ಲಿ ತ್ರಿಸ್ತರದ ಪರಿಶೀಲನೆ ನಡೆಸಿದ ಬಳಿಕವೇ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಿಂದುಳಿದ ವರ್ಗದ ಜನರಿಗೆ ಶೇಕಡ 27ರಷ್ಟು ಮೀಸಲಾತಿ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿದ್ದ ಕಾರಣ ಕ್ಷೇತ್ರವಾರು ಮೀಸಲು ನಿಗದಿ ವಿಳಂಬವಾಗಿತ್ತು. 

ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ನಿಗದಿಪಡಿಸುವಾಗ ಹಿಂದುಳಿದಿರುವಿಕೆಯನ್ನು ನಿರ್ಧರಿಸಲು ಪ್ರತ್ಯೇಕ ಆಯೋಗವೊಂದನ್ನು ನೇಮಿಸಬೇಕು. ಈ ಆಯೋಗವು ವಿಸ್ತೃತವಾದ ಪರಿಶೀಲನೆ ಬಳಿಕ ನೀಡುವ ವರದಿ ಆಧರಿಸಿ, ಪ್ರತಿ ಸ್ಥಳೀಯ ಸಂಸ್ಥೆಯನ್ನು ಒಂದು ಘಟಕವಾಗಿ ಪರಿಗಣಿಸಿ ಮೀಸಲಾತಿ ನಿಗದಿಪಡಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ನೀಡುವ ಮೀಸಲಾತಿಯ ಒಟ್ಟು ಪ್ರಮಾಣವು ಶೇ 50ರಷ್ಟನ್ನು ಮೀರುವಂತಿಲ್ಲ ಎಂದು ಕೋರ್ಟ್‌ ಆದೇಶಿಸಿತ್ತು.

ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಇರುವ ರಾಜಕೀಯ ಮೀಸಲಾತಿಯನ್ನು ಖಾತರಿಪಡಿಸಿದ ಬಳಿಕವೇ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸಲಾಗುವುದು ಎಂದು ಸರ್ಕಾರ ಅಂದು ಘೋಷಿಸಿತ್ತು. ಅದಕ್ಕೆ ಅನುಗುಣವಾಗಿ ನ್ಯಾಯಮೂರ್ತಿ ಎಂ. ಭಕ್ತವತ್ಸಲಂ ಆಯೋಗವನ್ನು ರಚಿಸಿ, ವರದಿಯನ್ನೂ ಸರ್ಕಾರ ಪಡೆದಿತ್ತು.

ವಿಳಂಬಕ್ಕೆ ದಂಡ ಕಟ್ಟಿದ್ದ ಸರ್ಕಾರ

ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸಲು ವಿಳಂಬ ಮಾಡಿದ ಕಾರಣಕ್ಕೆ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ₹5 ಲಕ್ಷ ದಂಡ ವಿಧಿಸಿತ್ತು. ಸರ್ಕಾರ ಈಗಾಗಲೇ ದಂಡವನ್ನೂ ಪಾವತಿಸಿದೆ. 

ದಂಡ ಪಾವತಿಸುವಾಗ ಏ.1ರ ಒಳಗೆ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲು ನಿಗದಿಪಡಿಸಿ ಅಧಿಸೂಚನೆ ಹೊರಡಿಸಲಾಗುವುದು. ನಂತರ ಮುಂದಿನ ಕ್ರಮಕ್ಕಾಗಿ ರಾಜ್ಯ ಚುನಾವಣಾ ಆಯೋಗಕ್ಕೆ ಕಳುಹಿಸಿಕೊಡಲಾಗುವುದು ಎಂದು ಅಡ್ವೊಕೇಟ್ ಜನರಲ್ ನ್ಯಾಯಪೀಠಕ್ಕೆ ಭರವಸೆ ನೀಡಿದ್ದರು. 

ಒಮ್ಮೆ ದಂಡ ಕಟ್ಟಿದ್ದರೂ ಸರ್ಕಾರ ಪಾಠ ಕಲಿತಿಲ್ಲ. ನ್ಯಾಯಾಲಯದ ಮುಂದೆ ಮಾತುಕೊಟ್ಟಂತೆ ಜನವರಿ ಒಳಗೆ ಮೀಸಲು ಪಟ್ಟಿ ಪ್ರಕಟಿಸಿಲ್ಲ. ಸರ್ಕಾರದ ನಡೆಯ ವಿರುದ್ಧ ಮುಂದಿನ ವಾರ ಕೋರ್ಟ್‌ ಮೊರೆಹೋಗುತ್ತೇವೆಬಿ.
ಬಸವರಾಜು, ಆಯುಕ್ತ, ರಾಜ್ಯ ಚುನಾವಣಾ ಆಯೋಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT