ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಲುಮೆ ಅಕ್ರಮ | ಚುನಾವಣಾ ಆಯೋಗದ ಕ್ರಮಕ್ಕೆ ಸ್ವಾಗತ: ಸಿಎಂ ಬೊಮ್ಮಾಯಿ

Last Updated 26 ನವೆಂಬರ್ 2022, 8:38 IST
ಅಕ್ಷರ ಗಾತ್ರ

ಬೆಂಗಳೂರು: ಮತದಾರರ ಮಾಹಿತಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ ಕೈಗೊಂಡಿರುವ ಕ್ರಮಗಳನ್ನು ರಾಜ್ಯ ಸರ್ಕಾರ ಸ್ವಾಗತಿಸುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ‘ಮೂರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ಹೆಸರುಗಳ ಕುರಿತು ಮತ್ತೊಮ್ಮೆ ಪರಿಶೀಲನೆ ನಡೆಸುವಂತೆ ಆಯೋಗ ಆದೇಶಿಸಿದೆ. ಮತದಾರರ ಪಟ್ಟಿ ಪರಿಷ್ಕರಣೆ ಅವಧಿಯನ್ನೂ ವಿಸ್ತರಿಸಿದೆ. ಈ ಕ್ರಮಗಳು ಸ್ವಾಗತಾರ್ಹ’ ಎಂದರು.

ಈ ಪ್ರಕರಣದಲ್ಲಿ ರಾಜ್ಯ ಸರ್ಕಾರವು ಮುಕ್ತ ತನಿಖೆಗೆ ಅವಕಾಶ ಕಲ್ಪಿಸಿದೆ. ಹಲವು ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಅಧಿಕಾರಿಗಳ ವಿಚಾರಣೆಯೂ ನಡೆಯುತ್ತಿದೆ. ಯಾವುದೇ ಅಧಿಕಾರಿ ಮತ್ತು ವ್ಯಕ್ತಿ ತಪ್ಪು ಮಾಡಿದ್ದರೂ ಅಂತಹವರನ್ನು ಪತ್ತೆಹಚ್ಟಿ, ಶಿಕ್ಷೆಗೆ ಗುರಿಪಡಿಸಬೇಕು ಎಂಬ ಉದ್ದೇಶದಿಂದ ತನಿಖೆಗೆ ಆದೇಶಿಸಲಾಗಿತ್ತು ಎಂದು ಹೇಳಿದರು.

ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ಹೆಸರುಗಳ ಜತೆಯಲ್ಲಿ ಒಂದಕ್ಕಿಂತ ಹೆಚ್ಚು ಕಡೆ ಒಬ್ಬನೇ ವ್ಯಕ್ತಿಯ ಹೆಸರು ಇರುವ ಬಗ್ಗೆಯೂ ಪರಿಶೀಲನೆ ನಡೆಯಲಿದೆ ಎಂದರು.

ಮಾತುಕತೆಗೆ ಸೂಚನೆ: ‘ಮಹಾರಾಷ್ಟ್ರ ರಾಜ್ಯದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ನಡೆಯದಂತೆ ಕ್ರಮ ಕೈಗೊಳ್ಳಲು ಅಲ್ಲಿನ ಗೃಹ ಇಲಾಖೆ ಹಿರಿಯ ಅಧಿಕಾರಿಗಳ ಜತೆ ಮಾತುಕತೆ ನಡೆಸುವಂತೆ ನಮ್ಮ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿದೆ. ಶೀಘ್ರದಲ್ಲಿ ಅವರು ಅಲ್ಲಿನ ಅಧಿಕಾರಿಗಳನ್ನು ಸಂಪರ್ಕಿಸಿ ಚರ್ಚೆ ನಡೆಸಲಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಎರಡೂ ರಾಜ್ಯಗಳ ನಡುವೆ ಸಂಬಂಧ ಹದಗೆಡಬಾರದು. ಮಹಾರಾಷ್ಟ್ರದಲ್ಲಿರುವ ಕನ್ನಡಿಗರು ಹಾಗೂ ಅಲ್ಲಿಗೆ ಸಂಚರಿಸುವ ಕರ್ನಾಟಕದ ವಾಹನಗಳಿಗೆ ಸಂಪೂರ್ಣ ರಕ್ಷಣೆ ನೀಡುವಂತೆ ಮಹಾರಾಷ್ಟ್ರದ ಗೃಹ ಇಲಾಖೆ ಅಧಿಕಾರಿಗಳಿಗೆ ರಾಜ್ಯದ ಅಧಿಕಾರಿಗಳು ಮಾತುಕತೆ ನಡೆಸುತ್ತಾರೆ ಎಂದರು.

ಬೆಳಗಾವಿಯಲ್ಲಿ ನಡೆಯುವ ವಿಧಾನಮಂಡಲ ಅಧಿವೇಶನಕ್ಕೂ ಮೊದಲು ಪಂಚಮಸಾಲಿ ಮೀಸಲಾತಿ ಬೇಡಿಕೆ ಕುರಿತು ಹಿಂದುಳಿದ ವರ್ಗಗಳ ಆಯೋಗದಿಂದ ವರದಿ ಪಡೆಯಬೇಕೆಂದು ಕೂಡಲಸಂಗಮ ಪಂಚಮಸಾಲಿ ಗುರುಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಗಡುವು ನೀಡಿರುವ ಬಗ್ಗೆ ಕೇಳಿದಾಗ, ‘ಹಿಂದುಳಿದ ವರ್ಗಗಳ ಆಯೋಗ ಒಂದು ಸಾಂವಿಧಾನಿಕ ಸಂಸ್ಥೆ. ಆದಷ್ಟು ಬೇಗ ವರದಿ ನೀಡುವಂತೆ ಕೇಳುತ್ತೇವೆ’ ಎಂದು ಉತ್ತರಿಸಿದರು.

ಪ್ರಣಾಳಿಕೆಯಂತೆ ಕ್ರಮ: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವುದು ಬಿಜೆಪಿಯು ರಾಷ್ಟ್ರ ಮಟ್ಟದಲ್ಲಿ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆ. ಅದನ್ನು ಈಡೇರಿಸಲು ರಾಜ್ಯ ಸರ್ಕಾರವೂ ಬಯಸಿದೆ. ಪಕ್ಷದ ಪ್ರಣಾಳಿಕೆಯಲ್ಲಿನ ಭರವಸೆಗಳ ಅನುಷ್ಠಾನಕ್ಕೆ ಸಮಿತಿ ರಚಿಸಲಾಗಿದೆ. ಅದರ ಶಿಫಾರಸಿನಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಬೊಮ್ಮಾಯಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT