ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಪಂಚಾಯಿತಿ ಚುನಾವಣೆ: ಇಂದು ಮತ ಎಣಿಕೆ

Last Updated 29 ಡಿಸೆಂಬರ್ 2020, 21:22 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ 5,728 ಗ್ರಾಮ ಪಂಚಾಯಿತಿಗಳಿಗೆ ಎರಡು ಹಂತಗಳಲ್ಲಿ ನಡೆದ ಚುನಾವಣೆಯ ಮತಗಳ ಎಣಿಕೆ ಬುಧವಾರ ನಡೆಯಲಿದ್ದು, 3 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ಬೀದರ್‌ ಜಿಲ್ಲೆಯಲ್ಲಿ ಮಾತ್ರ ಇವಿಎಂ ಬಳಸಲಾಗಿದ್ದು, ಉಳಿದ ಎಲ್ಲ ಕಡೆಗಳಲ್ಲಿ ಮತ ಪತ್ರಗಳನ್ನು ಬಳಸಲಾಗಿದೆ. ಇದರಿಂದಾಗಿ ಎಣಿಕೆ ಕಾರ್ಯ ಪೂರ್ಣಗೊಳ್ಳುವುದು ತಡವಾಗಲಿದೆ. ಬೆಳಿಗ್ಗೆ 8ಕ್ಕೆ ಮತ ಎಣಿಕೆ ಪ್ರಕ್ರಿಯೆಗೆ ಚಾಲನೆ ಸಿಗಲಿದೆ.

ಒಟ್ಟು 226 ತಾಲ್ಲೂಕುಗಳ 91,339 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿತ್ತು. ಇದರಲ್ಲಿ 8,074 ಸ್ಥಾನಗಳಿಗೆ ಅವಿರೋಧ ಆಯ್ಕೆ ಆಗಿದೆ. ಉಳಿದ ಸ್ಥಾನಗಳಿಗೆ 3,11,887 ಅಭ್ಯರ್ಥಿಗಳು ಕಣದಲ್ಲಿದ್ದರು. ಮೊದಲ ಹಂತದಲ್ಲಿ 43,238 ಮತ್ತು ಎರಡನೇ ಹಂತದಲ್ಲಿ 39,378 ಸ್ಥಾನಗಳಿಗೆ ಮತದಾನ ನಡೆದಿತ್ತು.

ಡಿ.22 ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇ 82.04 ರಷ್ಟು ಮತ್ತು ಡಿ.27 ರಂದು ನಡೆದ ಎರಡನೇ ಹಂತದ ಚುನಾವಣೆಯಲ್ಲಿ ಶೇ 80.71 ರಷ್ಟು ಮತದಾನವಾಗಿತ್ತು. ರಾಜ್ಯದ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಮತಗಳ ಎಣಿಕೆ ನಡೆಯಲಿದೆ. ಇದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಈ ಬಾರಿ ಮೂರೂ ರಾಜಕೀಯ ಪಕ್ಷಗಳ ಬೆಂಬಲ ಪಡೆದಿದ್ದ ಅಭ್ಯರ್ಥಿಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದ್ದರು. ರಾಜ್ಯ ಉದ್ದಗಲಕ್ಕೂ ಸಾಕಷ್ಟು ಗ್ರಾಮ ಪಂಚಾಯತ್‌ಗಳಲ್ಲಿ ಲಕ್ಷಾಂತರ ರೂಪಾಯಿಗಳಿಗೆ ಪಂಚಾಯಿತಿ ಸದಸ್ಯ ಸ್ಥಾನಗಳನ್ನು ಹರಾಜು ಹಾಕುವ ವ್ಯವಸ್ಥೆ ಬಹಿರಂಗವಾಗಿಯೇ ನಡೆಯಿತು. ಚುನಾವಣಾ ಆಯೋಗದ ಎಚ್ಚರಿಕೆಗೂ ಗ್ರಾಮಸ್ಥರು ಸೊಪ್ಪು ಹಾಕಲಿಲ್ಲ. ಅಲ್ಲದೆ, ಗ್ರಾಮದ ಅಭಿವೃದ್ಧಿ ಮತ್ತು ದೇವಸ್ಥಾನಗಳ ಅಭಿವೃದ್ಧಿಗೆ ಯಾರು ಹೆಚ್ಚು ಹಣ ಕೊಡುತ್ತಾರೋ ಅವರಿಗೇ ಮತ ಕೊಡುತ್ತೇವೆ ಎಂಬ ಷರತ್ತು ವಿಧಿಸಿದ್ದೂ ನಡೆಯಿತು. ಚುನಾವಣೆ ಬಳಿಕ ಯಾವ ಅಭ್ಯರ್ಥಿಗಳು ಗೆಲ್ಲಬಹುದು ಎಂಬ ಬಗ್ಗೆ ಬೆಟ್ಟಿಂಗೂ ಕೂಡಾ ನಡೆದಿದೆ. ಹಣ ಮಾತ್ರವಲ್ಲದೆ, ಹೊಲ ಮತ್ತು ಮನೆಗಳನ್ನೂ ಪಣಕ್ಕಿಟ್ಟಿರುವ ವಿಚಾರ ಬೆಳಕಿಗೆ ಬಂದಿದೆ.

ಎರಡೂ ಹಂತಗಳ ಮತದಾನ ಪ್ರಕ್ರಿಯೆಯಲ್ಲಿ ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇದೇ 31 ರ ಸಂಜೆ 5 ಗಂಟೆವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.

ಮತ ಎಣಿಕೆಗೆ ಜಿಲ್ಲಾಡಳಿತ ಸಿದ್ಧತೆ
ಬೆಂಗಳೂರು: ನಗರ ಜಿಲ್ಲೆಯ ಒಟ್ಟು 80 ಗ್ರಾಮ ಪಂಚಾಯಿತಿಗಳಿಗೆ ನಡೆದಿರುವ ಚುನಾವಣೆಯ ಫಲಿತಾಂಶ ಬುಧವಾರ ಪ್ರಕಟವಾಗಲಿದ್ದು, ಮತ ಎಣಿಕೆಗೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.

ಒಟ್ಟು 1,376 ಸ್ಥಾನಗಳಿಗೆ 3,368 ಅಭ್ಯರ್ಥಿಗಳು ಕಣದಲ್ಲಿದ್ದು, ಮತ ಪೆಟ್ಟಿಗೆಯಲ್ಲಿ ಭದ್ರವಾಗಿರುವ ಅವರ ಭವಿಷ್ಯ ಬುಧವಾರ ಬಹಿರಂಗವಾಗಲಿದೆ.

ಉತ್ತರ ತಾಲ್ಲೂಕಿನ ಮತ ಎಣಿಕೆ ದಾಸರಹಳ್ಳಿಯ ಕಾಳಹಸ್ತಿನಗರದ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ, ಯಲಹಂಕ ತಾಲ್ಲೂಕಿನ ಮತ ಎಣಿಕೆ ಯಲಹಂಕದ ಶೇಷಾದ್ರಿಪುರ ಪ್ರಥಮದರ್ಜೆ ಕಾಲೇಜಿನಲ್ಲಿ, ದಕ್ಷಿಣ ತಾಲ್ಲೂಕಿನ ಎಣಿಕೆ ಕೆಂಗೇರಿಯ ಆರ್‌.ವಿ. ಎಂಜಿನಿಯರಿಂಗ್ ಕಾಲೇಜು, ‍ಪೂರ್ವ ತಾಲ್ಲೂಕಿನ ಎಣಿಕೆ ಕೆ.ಆರ್.ಪುರದ ಐಟಿಐ ವಿದ್ಯಾಮಂದಿರ, ಆನೇಕಲ್ ತಾಲ್ಲೂಕಿನ ಎಣಿಕೆ ಎ.ಎಸ್.ಬಿ. ಜೂನಿಯರ್ ಕಾಲೇಜಿನಲ್ಲಿ ನಡೆಯಲಿದೆ.

ಎಣಿಕೆಗೆ 236 ಟೇಬಲ್‌ಗಳನ್ನು ಅಳವಡಿಸಲಾಗಿದ್ದು, 944 ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಅಭ್ಯರ್ಥಿಗಳ ಸಂಖ್ಯೆ ಹೆಚ್ಚಿರುವ ಕಾರಣ ಎಣಿಕೆ ಕಾರ್ಯ ತಡವಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ದಕ್ಷಿಣ ತಾಲ್ಲೂಕಿನಲ್ಲಿ 306 ಸ್ಥಾನಗಳಿದ್ದು, ಅವುಗಳಲ್ಲಿ 9 ಸ್ಥಾನಗಳಿಗೆ ಯಾರೂ ನಾಮಪತ್ರ ಸಲ್ಲಿಸದೆ ಖಾಲಿ ಉಳಿದಿವೆ. 38 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು, 887 ಮಂದಿ ಕಣದಲ್ಲಿದ್ದಾರೆ.

ಬೆಂಗಳೂರು ಪೂರ್ವ ತಾಲ್ಲೂಕಿನಲ್ಲಿ 244 ಸ್ಥಾನಗಳಿದ್ದು, 18 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 626 ಮಂದಿ ಕಣದಲ್ಲಿ ಉಳಿದಿದ್ದಾರೆ.

ಆನೇಕಲ್ ತಾಲ್ಲೂಕಿನಲ್ಲಿ 682 ಸ್ಥಾನಗಳಿದ್ದು, 9 ಸ್ಥಾನಗಳಿಗೆ ಯಾರೊಬ್ಬರೂ ನಾಮಪತ್ರ ಸಲ್ಲಿಸಿಲ್ಲ. 79 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು, 1,855 ಮಂದಿ ಚುನಾವಣೆ ಎದುರಿಸಿದ್ದಾರೆ.

ಮತಪತ್ರ ಹರಿದು ಹಾಕಿದ ಮಹಿಳೆ!
ಚನ್ನಪಟ್ಟಣ:
ತಾಲ್ಲೂಕಿನ ಕದರಮಂಗಲ ಗ್ರಾಮದ ಸರ್ಕಾರಿ ಶಾಲೆಯ ಮತಗಟ್ಟೆ ಸಂಖ್ಯೆ 1ರಲ್ಲಿ ಮಹಿಳೆಯೊಬ್ಬರು ಭಾನುವಾರ ನಡೆದ ಮತದಾನದ ವೇಳೆ ಮತಪತ್ರ ಹರಿದು ಹಾಕಿದ ಘಟನೆ ತಡವಾಗಿ ವರದಿಯಾಗಿದೆ.

ಈ ಬಗ್ಗೆ ಮತಗಟ್ಟೆ ಅಧಿಕಾರಿ ವಿಜೇಯೇಂದ್ರ ಅವರು ತಾಲ್ಲೂಕಿನ ಎಂ.ಕೆ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮತಗಟ್ಟೆಗೆ ಬಂದ ಕದರಮಂಗಲ ಗ್ರಾಮದ ಸುಶೀಲಮ್ಮ ಎಂಬುವರು ಮತ ಹಾಕಿದ ನಂತರ ಮತಪತ್ರವನ್ನು ಹರಿದು ಹಾಕಿ, ಅಧಿಕಾರಿಗಳ ಬಳಿ ಮತ್ತೊಂದು ಮತಪತ್ರ ಕೇಳಿದ್ದಾರೆ ಎಂದು ತಿಳಿದುಬಂದಿದೆ.

ತನ್ನ ಇಷ್ಟದ ಅಭ್ಯರ್ಥಿಗೆ ಮತ ಹಾಕುವ ಬದಲು ತಪ್ಪಾಗಿ ಬೇರೊಬ್ಬ ಅಭ್ಯರ್ಥಿಗೆ ಮತ ಹಾಕಿದ ಮಹಿಳೆ, ಮತಪತ್ರ ಹರಿದು ಹಾಕಿ ಮತ್ತೊಂದು ಮತಪತ್ರ ಕೊಡುವಂತೆ ಕೇಳಿದರು. ಆನಂತರ ಅವರು ಮಾಡಿರುವ ತಪ್ಪನ್ನು ತಿಳಿಸಿ, ಮತಗಟ್ಟೆಯಿಂದ ಆಚೆಗೆ ಕಳುಹಿಸಲಾಯಿತು ಎಂದು ದೂರಿನಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT