ಬೆಂಗಳೂರು: ಕಾಂಗ್ರೆಸ್‌ನ ಐದು ಗ್ಯಾರಂಟಿಗಳಲ್ಲಿ ಪ್ರಮುಖವಾದ ‘ಗೃಹ ಲಕ್ಷ್ಮಿ’ ಯೋಜನೆ ನೋಂದಣಿ ಪ್ರಕ್ರಿಯೆಗೆ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.
ಪಡಿತರ ಚೀಟಿಯಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಗೆ ತಿಂಗಳಿಗೆ ₹2,000 ದೊರೆಯಲಿದೆ. ಯಜಮಾನಿ ಅಥವಾ ಆಕೆಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ ಯೋಜನೆಗೆ ಅರ್ಹರಾಗುವುದಿಲ್ಲ. ಅಲ್ಲದೇ ಜಿಎಸ್‍ಟಿ ಲೆಕ್ಕಪತ್ರ ಸಲ್ಲಿಸುವವರಾಗಿದ್ದಲ್ಲಿಯೂ ಯೋಜನೆಗೆ ಅರ್ಹರಾಗುವುದಿಲ್ಲ.
‘1.28 ಕೋಟಿ ಮಹಿಳೆಯರು ಈ ಯೋಜನೆಗೆ ಅರ್ಹರಿದ್ದು, ಹೆಸರು ನೋಂದಾಯಿಸಲು ಪಡಿತರ ಚೀಟಿಯ ಸಂಖ್ಯೆ, ಯಜಮಾನಿ ಹಾಗೂ ಪತಿಯ ಆಧಾರ್ ಕಾರ್ಡ್ ಸಂಖ್ಯೆ, ಆಧಾರ್‌ಗೆ ಜೋಡಣೆಯಾಗಿರುವ ಬ್ಯಾಂಕ್ ಖಾತೆಯ ಪಾಸ್‍ಬುಕ್ ಅಥವಾ ಫಲಾನುಭವಿಯು ಇಚ್ಛಿಸುವ ಪರ್ಯಾಯ ಬ್ಯಾಂಕ್ ಖಾತೆಯ ದಾಖಲೆಗಳನ್ನು ನೀಡಬೇಕು. ಪ್ರತಿ ದಿನ ಅರ್ಹ 60 ಫಲಾನುಭವಿಗಳಿಗೆ ಸಮಯ ಹಾಗೂ ನೋಂದಣಿ ಕೇಂದ್ರದ ವಿವರಗಳು ಮೊಬೈಲ್ ಸಂದೇಶದ ಮೂಲಕ ಸ್ವೀಕೃತವಾಗಲಿವೆ. ಸಂದೇಶ ಸ್ವೀಕೃತಗೊಂಡ ಫಲಾನುಭವಿಗಳು ಮಾತ್ರ ಸಂದೇಶದಲ್ಲಿ ವಿವರಿಸಿದ ಸೇವಾ ಕೇಂದ್ರಕ್ಕೆ ನಿಗದಿಪಡಿಸಿದ ಸಮಯಕ್ಕೆ ಹಾಜರಾಗಿ ಅರ್ಜಿ ಸಲ್ಲಿಸಬಹುದು.
ಫಲಾನುಭವಿಗಳು ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರದ ಮೂಲಕ ಸೇವಾ ಸಿಂಧು ಪೋರ್ಟಲ್‍ನಲ್ಲಿ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು. ಈ ಕೇಂದ್ರಗಳಲ್ಲದೆ ನಾಗರಿಕ ಸ್ವಯಂಸೇವಕರ ಮೂಲಕ ಸಹ ಸೇವಾ ಸಿಂಧು ಪೋರ್ಟಲ್‍ನಲ್ಲಿ ಉಚಿತವಾಗಿ ನೋಂದಾಯಿಸಿಕೊಳ್ಳಬಹುದಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.